ನಾನು ಈ ಮಟ್ಟಕ್ಕೆ ಬೆಳೆಯಲು ಎಲ್ಲರೂ ನನಗೆ ಗುರುಗಳೇ- ಉಮಾಶಂಕರ್

02 May 2021 7:25 AM |
617 Report

ಬೆಂಗಳೂರು ನಾರಾಯಣಪ್ಪ ಉಮಾಶಂಕರ್ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದವರು, ನೇಯ್ಗೆ ಇವರ ಕುಲ ಕಸುಬು, ತಂದೆ ನಾರಾಯಣಪ್ಪ [ಊರಿನ ಹಿರಿಯ ಛಾಯಾಗ್ರಾಹಕರು] ತಾಯಿ ಹಂಸವೇಣಿಯವರ ದೊಡ್ಡಮಗ, ಹವ್ಯಾಸಕ್ಕಾಗಿ ತಂದೆಯ ಕ್ಯಾಮೆರಾವನ್ನು ಕೊರಳಿಗೆ ನೇತುಹಾಕಿಕೊಂಡವ ಮುಂದೆ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಬೆಳೆಯುತ್ತಾನೆ ಎಂದು ಯಾರೂ ಊಹಿಸಿರಲಿಲ್ಲ.

ಕರ್ನಾಟಕವಲ್ಲದೆ, ಗುಜರಾತ್, ರಾಜಾಸ್ತಾನ, ಹಿಮಾಚಲ ಪ್ರದೇಶದ ಹಲವಾರು ಕಾಡುಗಳಲ್ಲಿ ಉಮಾಶಂಕರ್ ಫೋಟೋಗ್ರಫಿ ಮಾಡಿದ್ದಾರೆ, ಪ್ರಾಣಿ, ಪಕ್ಷಿಗಳ ಛಾಯಾಚಿತ್ರಗಳಿಗಾಗಿ ತಿಂಗಳಾನುಗಟ್ಟಲೆ ಕಾಡನ್ನು ಸುತ್ತಿದ್ದಾರೆ, ವನ್ಯಜೀವಿ ಛಾಯಾಗ್ರಹಣವೆಂದರೆ ಹೆಚ್ಚಿನ ಆಸಕ್ತಿ, ಇತ್ತೀಚೆಗೆ ಲ್ಯಾಂಡ್ ಸ್ಕೇಪ್ ಛಾಯಾಗ್ರಹಣಕ್ಕಾಗಿ ಉತ್ತರಾಖಾಂಡ್ ಹಾಗೂ ಕಬಿನಿ ಅರಣ್ಯದಲ್ಲಿ ಟೈಗರ್ ಫೋಟೋಗ್ರಫಿಗಾಗಿ ವಾರಗಟ್ಟಲೆ ಕಾಡಿನಲ್ಲೇ ಕಾಲ ಕಳೆದು ಚಿತ್ರಗಳನ್ನು ಸೆರೆಹಿಡಿದಿದ್ದಾರೆ. ವೆಡ್ಡಿಂಗ್ ಫೋಟೋಗ್ರಫಿಗಾಗಿ ಈ ಕ್ಷೇತ್ರಕ್ಕೆ ಕಾಲಿಟ್ಟರೂ, ಕ್ರಮೇಣ ಟ್ರಾವೆಲ್ ಫೋಟೋಗ್ರಫಿ, ವೈಲ್ಡ್ ಲೈಫ್ ಫೋಟೋಗ್ರಫಿ, ಲ್ಯಾಂಡ್ ಸ್ಕೇಪ್ ಫೋಟೋಗ್ರಫಿಯಲ್ಲಿ ಹೆಚ್ಚು ಪ್ರಾವೀಣ್ಯತೆಯನ್ನು ಹೊಂದಿದ್ದಾರೆ, ಇತ್ತೀಚೆಗಂತೂ ಕಾಡು ಮೇಡು ಸುತ್ತಿ ಸಾವಿರಾರು ಛಾಯಾಚಿತ್ರಗಳನ್ನು ಸೆರೆಹಿಡಿದಿದ್ದಾರೆ. 

ಛಾಯಾಗ್ರಹಣ ಒಂದು ಕ್ರಿಯಾತ್ಮಕ, ಕಲಾತ್ಮಕ ಕ್ಷೇತ್ರ, ನಾವು ತೆಗೆದ ಫೋಟೋಗಳು ಇತಿಹಾಸಕ್ಕೆ ಸಾಕ್ಷಿಯಾಗಿರುತ್ತೆ. ಹವ್ಯಾಸಕ್ಕಾಗಿ ತೊಡಗಿಸಿಕೊಂಡಿದ್ದ ಛಾಯಾಗ್ರಹಣವನ್ನು ಸಂಪೂರ್ಣ ವೃತಿಯಾಗಿಸಿಕೊಂಡೆ...ಪ್ರೀತಿಯಿಂದ, ಶ್ರದ್ಧೆಯಿಂದ ಛಾಯಾಗ್ರಹಣವನ್ನು ಗೌರವಿಸಿದರೆ ನಮ್ಮ ಜೀವನವು ಒಂದು ಸುಂದರ ಚಿತ್ರಣವಾಗುತ್ತದೆ ಎನ್ನುತ್ತಾರೆ.  ವೆಡ್ಡಿಂಗ್ ಫೋಟೋಗ್ರಫಿ ಅದರಲ್ಲೂ ಕ್ಯಾಂಡಿಡ್ ಫೋಟೋಗ್ರಫಿಯಲ್ಲಿ ನಿಪುಣರು, ಇವರ ವೆಡ್ಡಿಂಗ್ ಫೋಟೋಗ್ರಫಿಗೆ ಹೆಚ್ಚಿನ ಬೇಡಿಕೆ ಇದ್ದು ನಾಡಿನ ಹೆಸರಾಂತ ಛಾಯಾಗ್ರಾಹಕರಿಂದ ಇಂದಿಗೂ ಸಲಹೆ ಪಡೆಯುವುದು ಇವರ ಹವ್ಯಾಸ. 

ಉಮಾಶಂಕರ್ ಫೋಟೋಗ್ರಫಿಗೆ ಬಂದು ಸುಮಾರು 17 ವರ್ಷಗಳು ಕಳೆದಿವೆ, ನಾಡಿನ ಹೆಸರಾಂತ ಛಾಯಾಗ್ರಾಹಕರ ವರ್ಕ್ ಶಾಪ್ ಗಳಲ್ಲಿ ತರಬೇತಿ ಪಡೆದು ಮತ್ತಷ್ಟೂ ಪರಿಪಕ್ವ ಆಗಿದ್ದಾರೆ. ಇವರ ಛಾಯಾಚಿತ್ರಗಳು ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿವೆ, ಸಾಕಷ್ಟು ಪ್ರಶಸ್ತಿ ಪುರಸ್ಕಾರಗಳನ್ನು ತಮ್ಮ ಮುಡಿಗೇರಿಸಿಕೊಂಡಿವೆ ಹಾಗೇ ನೂರಾರು ಛಾಯಾಚಿತ್ರಗಳು ಪ್ರದರ್ಶನಗೊಂಡಿವೆ.  ಇವರ ಕಾರ್ಯಕ್ಷಮತೆಗೆ ಸುಮಾರು 100 ಕ್ಕೂ ಹೆಚ್ಚಿನ ಸ್ಟೇಟ್ ಲೆವೆಲ್ ಅವಾರ್ಡ್ ಮತ್ತು ನ್ಯಾಷನಲ್ ಲೆವೆಲ್ ಅವಾರ್ಡ್ ಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ ಹಾಗೂ ಫೆಡರೇಷನ್ ಇಂಟರ್ನ್ಯಾಷ್ನಲ್ ಆರ್ಟ್ ಫೋಟೋಗ್ರಫಿ [FIAP], ಫೋಟೋಗ್ರಫಿ ಸೊಸೈಟಿ ಆಫ್ ಅಮೇರಿಕ [PSA], ಫೆಡರೇಷನ್ ಆಫ್ ಇಂಡೀಯನ್ ಫೋಟೋಗ್ರಫಿ [FIP] ಸಂಸ್ಥೆಗಳಲ್ಲಿ ಇವರ ಫೋಟೋಗಳು ಮಾನ್ಯತೆ ಪಡೆದಿವೆ.

ಛಾಯಾಗ್ರಹಣವೆಂದರೆ ಪಂಚ ಪ್ರಾಣ, ತಾನು ಯಾವುದೇ ಪ್ರವಾಸಕ್ಕಾಗಲಿ ಅಥವಾ ಎಲ್ಲಿಗೇ ಹೋಗಲಿ ಜೊತೆಯಲ್ಲಿ ಕ್ಯಾಮರಾ ಇರಲೇ ಬೇಕು, ಕಂಡ ಕಂಡ ಸ್ಥಳಗಳನ್ನು ಕಲಾತ್ಮಕವಾಗಿ ಚಿತ್ರಿಸುವುದೇ ಇವರ ಗುಣ, ಉಮಾಶಂಕರ್ ಒಂದು ದಶಕದಿಂದ ದೊಡ್ಡಬಳ್ಳಾಪುರ ತಾಲ್ಲೂಕು ಫೋಟೋ ಮತ್ತು ವಿಡಿಯೋ ಛಾಯಾಗ್ರಾಹಕರ ಸಂಘ ಮತ್ತು  ಕರ್ನಾಟಕ ಛಾಯಾಚಿತ್ರಗಾರರ ಸಂಘದಲ್ಲಿ ಸಕ್ರಿಯವಾಗಿ ನಿರ್ದೇಶಕರಾಗಿ ನಾಡಿನ ಛಾಯಾಗ್ರಾಹಕರ ಸೇವೆಯನ್ನು ಮಾಡುತ್ತಿದ್ದಾರೆ, ಇಡೀ ರಾಜ್ಯದಲ್ಲಿ ಪ್ರವಾಸಗೊಂಡು ನಾಡಿನ ಛಾಯಾಗ್ರಾಹಕರ ಸ್ನೇಹ, ಪ್ರೀತಿಗೆ ಪಾತ್ರರಾಗಿದ್ದಾರೆ, ಉತ್ತಮ ಸ್ನೇಹಜೀವಿ, ಮಾರ್ಗದರ್ಶಿಯಾಗಿ ನಾಡಿನ ಛಾಯಾಗ್ರಾಹಕರ ಪ್ರೀತಿಯ ಉಮಿ ಎಂದೇ ಖ್ಯಾತರಾಗಿದ್ದಾರೆ. 

ಪತ್ನಿ ಪ್ರತಿಭಾ, ಮಗಳು ಅಕ್ಷತಾರ ಪುಟ್ಟ ಸಂಸಾರ ಹೊಂದಿರುವ ಇವರು ಛಾಯಾಗ್ರಹಣ ಕ್ಷೇತ್ರದಲ್ಲಿ ಮತ್ತಷ್ಟೂ ಎತ್ತರಕ್ಕೆ ಬೆಳೆಯಲಿ ಎಂದು ಶುಭಹಾರೈಸುತ್ತಾ, ಇಂತಹ ಅಪರೂಪದ ಸಾಧಕನಿಗೆ ನಾಡಿನ ಎಲ್ಲಾ ಛಾಯಾಗ್ರಾಹಕರ ಹಾಗೂ ನೇಕಾರರ ಪರವಾಗಿ ಅಭಿನಂದನೆಗಳು.  ಉಮಾಶಂಕರ್ ರವರ ಮೊಬೈಲ್ ನಂ. 9986029580

Edited By

Ramesh

Reported By

Ramesh

Comments