ಅನಿರೀಕ್ಷಿತವಾಗಿ ಎಲ್ಲರನ್ನೂ ಬಿಟ್ಟು ಅಗಲಿದ ಆತ್ಮೀಯ.........

26 Aug 2019 7:50 AM |
1342 Report

ದಿನಾಂಕ 4 ಆಗಸ್ಟ್ ಭಾನುವಾರ ಮಲಗಿದಾಗ ಹನ್ನೊಂದು ಮೂವತ್ತು. ನಿದ್ರೆ ಬಾರದೆ ಹೊರಳಾಡಿ [ನರಳಾಡಿ?] ನಿದ್ರೆಗೆ ಜಾರಿದಾಗ ಮೊಬೈಲ್ ಹೊಡೆದುಕೊಳ್ಳುವ ಸದ್ದು. ಏನಿದು ಇಷ್ಟು ಬೇಗ ವಾಕಿಂಗ್ ಹೋಗೋ ಸಮಯವಾಯಿತಾ.....? ನಿದ್ದೆಗಣ್ಣಲ್ಲೇ ಮೊಬೈಲ್ ನೋಡಿದರೆ ಮೂರ್ತಿ ಫೋಟೋ ಏನಿದು? ಈ ಹೊತ್ತಿನಲ್ಲಿ ಫೋನ್ ಮಾಡುತ್ತಿದ್ದಾನೆ? ಸಮಯ ನೋಡಿದರೆ ಬೆಳಗಿನ ಜಾವ ಮೂರು ಘಂಟೆ!..... ಏನ್ ಮೂರ್ತಿ?.... ಅಂಕಲ್ ನಾನು ಮುರಳಿ....ಅಪ್ಪ ಹೋಗ್ಬಿಟ್ರು.....ಅಂತ ಮಗ ಅಳಲು ಶುರು ಮಾಡಿದ. ದಡಕ್ಕನೆ ಎದ್ದು ಕುಳಿತೆ, ಏನು ಹೇಳಬೇಕೂ ಅಂತಾ ಹೋಳೀಲಿಲ್ಲಾ....ಯಾಕೆ? ಏನಾಯ್ತು?....ಅತ್ತಲಿಂದ ಬರೀ ಅಳೋ ಸದ್ದು, ಸರಿ ಮುರಳಿ...ಬರುತ್ತೀವಿ ಅಂತಾ ಹೇಳಿ ಫೋನ್ ಕಟ್ ಮಾಡಿದೆ.

ದೇರಾನ....ಕುಚ್ಚು ಮೂರ್ತಿ...ಕುಚ್ಚು ಸ್ವಾಮಿ...ಮೂರ್ತಿ... ಹೀಗೆ ಹಲವಾರು ತರಹ ಗುರುತಿಸಿ ಕೊಳ್ಳುತ್ತಿದ ವ್ಯಕ್ತಿ, ಪೂರ್ತಿ ಹೆಸರು ದೇವನಹಳ್ಳಿ ರಾಮಚಂದ್ರಪ್ಪ ನರಸಿಂಹಮೂರ್ತಿ, ತಾಯಿ ಸುಶೀಲಮ್ಮ, ಜನಾನುರಾಗಿ ಅಪ್ಪಟ ಕನ್ನಡ ಪ್ರೇಮಿ ವರನಟ ಡಾ.ರಾಜ್ ಭಕ್ತ, ಕನ್ನಡ ನಾಡು-ನುಡಿ ಬಗ್ಗೆ ಅಪಾರವಾದ ಕಾಳಜಿ, ಕನ್ನಡ ಪರ ಹೋರಾಟಕ್ಕೆ ಸದಾ ಮುನ್ನುಗ್ಗುವ ಹೋರಾಟಗಾರ.  ಹಲವಾರು ಸಂಘಟನೆಗಳಲ್ಲಿ ತೊಡಗಿಸಿಕೊಂಡು ಸದಾ ಚಟುವಟಿಕೆಯಿಂದ ಇರುತ್ತಿದ್ದವ, ದೇವಾಂಗ ಜನಾಂಗದ ಮೂಲ ಪುರುಷ ಪಾಲ ನೇತ್ರೋದ್ಭವ ಶ್ರೀ ದೇವಲ ಮಹರ್ಷಿ ಮತ್ತು ಆದ್ಯ ವಚನಕಾರ ಶ್ರೀ ದೇವರ ದಾಸಿಮಯ್ಯ ಎಂದರೆ ಎಲ್ಲಿಲ್ಲದ ಅಭಿಮಾನ, ದೇವಾಂಗ ಸಮಾಜದ ಯಾರದೇ ಮನೆಯಲ್ಲಿ ನೆಡೆಯುವ ಶುಭ ಕಾರ್ಯಗಳಿಗೆ  ಶ್ರೀ ದೇವಲ ಮಹರ್ಷಿ ಮತ್ತು ಶ್ರೀ ದೇವರ ದಾಸಿಮಯ್ಯನವರ ಫೋಟೋಗಳನ್ನೇ ನೀಡಿ ಜನಾಂಗದ ಮೂಲ ಪುರುಷರನ್ನು ನೆನೆಯಲು ಕಾರಣವಾಗಿದ್ದಂತ ವ್ಯಕ್ತಿ.

 

ನಿದ್ರೆ ಹಾರಿ ಹೋಗಿತ್ತು....ಏನಪ್ಪಾ ಇದು ರಾತ್ರಿ ಒಂಬತ್ತರವರೆಗೂ ಜೊತೆಯಲ್ಲೇ ಇದ್ದೆವೆಲ್ಲಾ.....ಏನಾಯ್ತು? ಯಾರಿಗೆ ಫೋನ್ ಮಾಡೋದು? ಇಷ್ಟು ಹೊತ್ತಿನಲ್ಲಿ ಹೇಳೋದಾ ಬೇಡ್ವಾ? ಅಂತಾ ಅರ್ಧ ಘಂಟೆ ಹಾಗೇ ಕೂತಿದ್ದೆ, ಫೋನ್ ಮತ್ತೆ ಹೊಡೆದು ಕೊಳ್ಳಲು ಶುರುವಾಯಿತು, ಮೂರ್ತಿ ಆತ್ಮೀಯ ಡಾಕ್ಟ್ರು ಹೋಟ್ಲು ಸುರೇಶ್.... ಗುರುಗಳೇ ಮೂರ್ತಿ ಸ್ವಾಮಿ ಹೋಗ್ಬಿಟ್ರು......ಹಾ...ಸರಿ, ಸುರೇಶ್ ಬರ್ತೀವಿ.  ಮತ್ತೆ ಹಿಂದಿನ ದಿನದ ಘಟನೆಗಳು ಕಣ್ಣ ಮುಂದೆ ಕಾಣಿಸ ತೊಡಗಿದವು.

ನಮ್ಮ ಆತ್ಮೀಯ ಗೆಳೆಯರಾದ ಗುಡಿ ಶ್ರೀನಾಥ್ ಅಂದು ಜೋತಿಷ್ಯದಲ್ಲಿ ಡಾಕ್ಟರೇಟ್ ಪದವಿ ಪಡೆಯಲಿದ್ದರು, ಬೆಂಗಳೂರಿನಲ್ಲಿ ಫಂಕ್ಷನ್ ಜೊತೆಯಲ್ಲಿ ಭಾಗವಹಿಸಿದ್ದೆವು, ಸಂಜೆ ನಾಲ್ಕಕ್ಕೆ ಶುರುವಾದ ಕಾರ್ಯಕ್ರಮ ಏಳಾದರೂ ಮುಗಿಯುವ ಲಕ್ಷಣ ಕಾಣಲಿಲ್ಲ....ಮೂರ್ತಿ ಇದು ಸದ್ಯಕ್ಕೆ ಮುಗಿಯೋ ತರ ಕಾಣ್ತಿಲ್ಲಾ, ಊರಿಗೆ ಹೋಗುವುದು ತಡವಾಗುತ್ತೆ, ನಡಿ ಹೊರಡೋಣ ಅಂದು ಮದ್ಯದಲ್ಲೇ ಹೊರಡಿಸಿದೆ, ಪಕ್ಕದ ರಸ್ತೆಯಲ್ಲಿ ವಿಧಾನಸೌಧದ ಎದುರು ಮೆಟ್ರೋ ಸ್ಟೇಷನ್ ಇರೋದು ಜ್ಞಾಪಕ ಬಂದು ನಡಿ ಮೆಜೆಸ್ಟಿಕ್ ಗೆ ಮೆಟ್ರೋದಲ್ಲಿ ಹೋಗೋಣಾ ಅಂತಾ ಹೊರಡಿಸಿದೆ.  ವಿಧಾನಸೌಧದ ಮುಂದೆ ಒಂದು ಫೋಟೋ ತೆಗೀ ಅಂತಾ ಹಠಮಾಡಿದ, ಅಲ್ಲಾ ಗುರೂ ನಾನು ಎಂ.ಎಲ್.ಎ. ಅಂತೂ ಆಗಲ್ಲಾ...ವಿಧಾನಸೌಧದ ಮುಂದೆ ಒಂದು ಫೋಟೋನಾದ್ರೂ ತೆಗೀ ಅಂತಾ ತೆಗೆಸಿಕೊಂಡ, ಮೊಬೈಲ್ ನಲ್ಲಿ ಕ್ಲಿಕ್ಕಿಸಿದ ಫೋಟೋನೋಡಿ ಗುರೂ ಇನ್ನು ಒಂದೇ ಒಂದು ಆಸೆ ಇದೆ ಕುಮಾರಣ್ಣನ ಮನೆಗೆ ಹೋಗಿ ಮಾತನಾಡಿಸಿಕೊಂಡು ಬರಬೇಕು!  ಆಯ್ತು ನೆಡಿಯಣ್ಣಾ ಎಂದು ಹೊರಡಿಸಿದೆ.

ದೇವಾಂಗ ಜನಾಂಗದಲ್ಲಿ ಹುಟ್ಟಿ 1-5-1968 [51] ಮೂವತ್ತು ವರ್ಷಗಳ ಹಿಂದೆ ಬೆಂಗಳೂರಿನಿಂದ ದೊಡ್ಡಬಳ್ಳಾಪುರಕ್ಕೆ ಬಂದು ನೆಲೆಸಿ, ದೊಡ್ಡಬಳ್ಳಾಪುರವನ್ನು ತನ್ನ ಕರ್ಮ ಭೂಮಿಯನ್ನಾಗಿಸಿಕೊಂಡವ, ಕುಲ ಕಸುಬಾದ ನೇಕಾರಿಕೆಯಲ್ಲಿ ತೊಡಗಿಕೊಂಡು, ತನ್ನ 14ನೇ ವಯಸ್ಸಿನಿಂದ ಕಂಡಿಕೆ ಹಾಕುವುದು, ಹುರಿಮಿಷಿನ್ ಕಟ್ಟುವುದು, ಮಗ್ಗ ಬಿಡುವುದರಿಂದ ಶುರುವಾದ ಬದುಕು ಮುಂದೆ ಮಗ್ಗಗಳಿಗೆ ಕುಚ್ಚು ಹಾಕುವುದನ್ನು ಸ್ವಯಂ ಪ್ರೇರಿತವಾಗಿಕಲಿತು ಅದರಲ್ಲೇ ಸಾಧನೆ ಮಾಡಿದಂತ ವ್ಯಕ್ತಿ.  ದೊಡ್ಡಬಳ್ಳಾಪುರದಲ್ಲಿ ಕುಚ್ಚು ಮೂರ್ತಿ ಎಂದೇ ಕ್ಯಾತಿ ಪಡೆದಿದ್ದವ, ಬಿಡುವಿಲ್ಲದ ತನ್ನ ಕೆಲಸ ಕಾರ್ಯಗಳ ಮದ್ಯೆಯೂ ಊರಿನ ಹಲವಾರು ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದವ, ನೇಕಾರರ ಹೋರಾಟ ಸಮಿತಿಯಲ್ಲಿ ಪದಾಧಿಕಾರಿಯಾಗಿ, ಶ್ರೀ ಗಾಯತ್ರಿಪೀಠ ಮಿತ್ರ ಬಳಗ ಟ್ರಸ್ಟ್ ಖಜಾಂಚಿಯಾಗಿ, ನಗರದ ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನದ ಸಂಸ್ಥಾಪಕ ಟ್ರಸ್ಟಿಯಾಗಿ ದುಡಿಯುತ್ತಿದ್ದವ, ಪತ್ನಿ ಜಯಲಕ್ಷ್ಮಿ, ಮಗ ಮುರಳಿ, ಮಗಳು ರಾಗಿಣಿಯನ್ನು ಮದ್ಯದಲ್ಲೇ ಬಿಟ್ಟು ಹೊರಟೇ ಬಿಟ್ಟ ಎಂದರೆ ನಂಬಲಾಗುತ್ತಿಲ್ಲಾ. 

Edited By

Ramesh

Reported By

Ramesh

Comments