ನಾಲ್ಕು ಸಾವಿರಕ್ಕೂ ಹೆಚ್ಚು ಮಂದಿ ಮಕ್ಕಳು ಹಾಗೂ ಸಾರ್ವಜನಿಕರಿಂದ ಐದನೇ ವಿಶ್ವ ಯೋಗ ದಿನ ಆಚರಣೆ

21 Jun 2019 9:56 AM |
1007 Report

ವಿಶ್ವಕ್ಕೆ ಯೋಗವಿದ್ಯೆಯನ್ನು ಕಲಿಸಿ ವಿಶ್ವಗುರುವಿನ ಸ್ಥಾನದಲ್ಲಿ ನಿಂತು ಮಾರ್ಗದರ್ಶನ ನೀಡುತ್ತಿರುವ ಭಾರತ. ನಿಜ ಅರ್ಥದಲ್ಲಿ ವಿಶ್ವಗುರುವಿನ ಕಲ್ಪನೆ ಸಾಕಾರಗೊಂಡು ಜಗತ್ತು ಭಾರತವನ್ನು ನಮಿಸುವ ಈ ಪರ್ವಕಾಲವೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ......ಇದರ ಅಂಗವಾಗಿ ದೊಡ್ಡಬಳ್ಳಾಪುರ ನಗರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ಇಂದು ಐದನೇ ವರ್ಷದ ಅಂತರಾಷ್ಟ್ರೀಯ ವಿಶ್ವ ಯೋಗ ದಿನಾಚರಣೆಯನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಬೆಂ.ಗ್ರಾ.ಜಿಲ್ಲೆ ಹಾಗೂ ದೊಡ್ಡಬಳ್ಳಾಪುರ ನಗರದ ವಿಶ್ವ ಯೋಗ ದಿನಾಚರಣಾ ಟ್ರಸ್ಟ್ ವತಿಯಿಂದ ಪಕ್ಷಾತೀತವಾಗಿ ಆಚರಿಸಲಾಯಿತು. ಸುಮಾರು 4000 ಕ್ಕೂ ಹೆಚ್ಚು ಮಂದಿ ಸಾರ್ವಜನಿಕರು, ವಿದ್ಯಾರ್ಥಿಗಳು ಭಾಗವಹಿಸುವುದರ ಮೂಲಕ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಿದರು.

ಪರಮಪೂಜ್ಯ  ಶ್ರೀ ದಿವ್ಯಜ್ಞಾನಾನಂದಗಿರಿ ಸ್ವಾಮೀಜಿ ಯವರ ಯೋಗ  ಮಾರ್ಗದರ್ಶನದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮುಖ್ಯ ಅತಿಥಿಗಳಾಗಿ ಶಾಸಕ ಟಿ.ವೆಂಕಟರಮಣಯ್ಯ, ಜೆ.ಡಿ.ಎಸ್. ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಬಿ.ಮುನೇಗೌಡ, ಜಿಲ್ಲಾ ಪಂಚಾಯಿತಿ ಸದಸ್ಯೆ ಪದ್ಮಾವತಿ ಮುನೇಗೌಡ, ಜಿಲ್ಲಾಧಿಕಾರಿ ಕರೀಗೌಡ, ಬಿ.ಇ.ಓ ಬೈಯ್ಯಪ್ಪರೆಡ್ಡಿ, ಓಬದೇನಹಳ್ಳಿ ಮುನಿಯಪ್ಪ ಆಗಮಿಸಿ ಜ್ಯೋತಿ ಬೆಳಗಿ ಶುಭಕೋರಿದರು.

ಅಧ್ಯಕ್ಷತೆಯನ್ನು ಟ್ರಸ್ಟ್ ಅಧ್ಯಕ್ಷ ಕೆ.ಎಂ.ಹನುಮಂತರಾಯಪ್ಪ ವಹಿಸಿದ್ದರು.  ಕಾರ್ಯಕ್ರಮದ ಆರಂಭದಲ್ಲಿ ರಾಷ್ಟ್ರ ಮತ್ತು ಅಂತರ್ರಾಷ್ಟ್ರೀಯ ಯೋಗ ಪಟುಗಳು ಯೋಗ ಪ್ರದರ್ಶನ ನೀಡುವ ಮೂಲಕ ಭಾಗವಹಿಸಿದ್ದ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಲ್ಲಿ ಸ್ಪೂರ್ತಿ ತುಂಬಿದರು.  ದಕ್ಷಿಣ ಕೊರಿಯಾದಲ್ಲಿ ನೆಡೆಯುವ ಅಂತರಾಷ್ಟ್ರೀಯ ಯೋಗ ಚಾಂಪಿಯನ್ ಷಿಪ್ ನಲ್ಲಿ ಭಾಗವಹಿಸಲು ಆಯ್ಕೆಯಾಗಿರುವ ಎಂ.ಆರ್.ಜಾಹ್ನವಿ ಮತ್ತು ಪಿ.ವಿ. ವರ್ಷಿಣಿ ಹಾಗೂ ರಾಷ್ಟ್ರೀಯ ಯೋಗ ಪಟುಗಳಾದ ವರಪ್ರಸಾದ್, ವರುಣ್, ಮನೋಜ್ ಕುಮಾರ್, ಅಮರನಾಥ್, ತನೀಷ್, ಅಭಿಲಾಷ್ ಹಾಗೂ ಚಿಂತನಾ ರನ್ನು ಸನ್ಮಾನಿಸಲಾಯಿತು. 

ಟ್ರಸ್ಟ್ ಉಪಾಧ್ಯಕ್ಷರಾದ ತ.ನ.ಪ್ರಭುದೇವ, ಡಾ.ವಿಜಯಕುಮಾರ್, ಕಾರ್ಯದರ್ಶಿ ಲೋಕೇಶ್ ಮೂರ್ತಿ, ಶ್ರೀನಿವಾಸ್, ಸದಸ್ಯರಾಂತ ಬಿ.ಎಲ್.ಸೀತಾರಾಂ, ಡಿ.ವಿ.ಗಿರೀಶ್, ಎಂ.ಕೆ.ವತ್ಸಲ, ಬಿ.ಪಿ.ಸನಾತನಮೂರ್ತಿ, ಬಿ.ಜಿ.ಅಮರನಾಥ್ ಹಾಜರಿದ್ದರು.  ನಗರದ ಪ್ರಭುದೇವ ಯೋಗ ಕೇಂದ್ರ, ಶ್ರೀ ವೇದಾದ್ರಿ ಧ್ಯಾನ ಕೇಂದ್ರ, ನಿಸರ್ಗ ಯೋಗ ಕೇಂದ್ರ, ಅಮರನಾಥ್ ಯೋಗ ಕೇಂದ್ರ ಸೇರಿದಂತೆ ಹಲವಾರು ಯೋಗ ಕೇಂದ್ರದ ಸದಸ್ಯರು, ಎಂ.ಎ.ಬಿ.ಎಲ್, ಸ್ವಾಮಿ ವಿವೇಕಾನಂದ ಶಾಲೆ, ಕಾರ್ಮೆಲ್ ಸ್ಕೂಲ್, ಎಂ.ಎಸ್.ವಿ. ಲಿಟಲ್ ಏಂಜೆಲ್ ಸ್ಕೂಲ್, ದೇವಲ ಮಹರ್ಷಿ ಶಾಲೆಯ ಮಕ್ಕಳು ಭಾಗವಹಿಸಿದ್ದರು. ಕಾರ್ಯಕ್ರಮದ ನಂತರ ಭಾಗವಹಿಸಿದ್ದ ಎಲ್ಲರಿಗೂ ಬಿಸ್ಕತ್ ಮತ್ತು ಹಣ್ಣು ನೀಡಲಾಯಿತು.

Edited By

Ramesh

Reported By

Ramesh

Comments