ಅಮಿತ್ ಷಾ, ಭಾರತದ ಅಗೋಚರ ಪ್ರಧಾನಿ, ಈಗ ಮತ್ತಷ್ಟು ಶಕ್ತಿಶಾಲಿ ಮತ್ತು ಅಪಾಯಕಾರಿ!

05 Jun 2019 6:33 PM |
578 Report

ನರೇಂದ್ರ ಮೋದಿ ಸರ್ಕಾರ ಮತ್ತೊಮ್ಮೆ ಹಿಂದೆಂದಿಗಿಂತಲೂ ಹೆಚ್ಚಿನ ಬಹುಮತದೊಂದಿಗೆ ಆರಿಸಿ ಬಂದಿದೆ. ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕಾರ ಮಾಡುವಾಗ ಕಾಂಗ್ರೆಸ್ನ ಬಹುತೇಕ ಎಲ್ಲ ನಾಯಕರೂ ಬಂದಿದ್ದರು. ಎಲ್ಲರೂ ತಾವು ಮೋದಿಯ ಬಗ್ಗೆ, ಮೋದಿ ಸರ್ಕಾರದ, ರಾಜಕಾರಣಿಗಳ ವಿರುದ್ಧ ಮಾಡಿದ ಷಡ್ಯಂತ್ರ, ಆಡಿದ ಮಾತು ಎಲ್ಲವನ್ನೂ ಮರೆತು ಬಂದಿದ್ದರು ಎಂದೇ ಭಾವಿಸೋಣ. ಮೋದಿಯೂ ಹಾಗೇ ಇದ್ದರು ಎಂದುಕೊಳ್ಳೋಣ.

ಆದರೆ ಒಬ್ಬ ಮನುಷ್ಯ ಮಾತ್ರ ಯಾವುದನ್ನೂ ಮರೆಯಲಿಕ್ಕೆ ಸಾಧ್ಯವಿಲ್ಲ. ಮರೆಯುವುದೂ ಇಲ್ಲ. ಆ ಒಬ್ಬ ವ್ಯಕ್ತಿಯೇ ಅಮಿತ್‌ ಷಾ!  ಇವರು ಗೃಹ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದೋ ಅಥವಾ ದುಷ್ಟರ ಸಂಹಾರಕ್ಕಾಗಿ ತೆಗೆದುಕೊಂಡ ಪ್ರಮಾಣವೋ ಇನ್ನು ಮುಂದಷ್ಟೇ ಗೊತ್ತಾಗಬೇಕಿದೆ. ಏಕೆ ಹೀಗೆ ಎಂಬುದಕ್ಕೆ ಉತ್ತರ ಒಂದಷ್ಟು ವರ್ಷ ಹಿಂದೆ ಹೋಗಿ ಹುಡುಕಿದರೆ ಸಿಗುತ್ತದೆ.  ನೆನಪು ಮಾಡಿಕೊಳ್ಳಿ.  2010ರ ಜುಲೈ ತಿಂಗಳ 25ನೇ ತಾರೀಖು. ಸೊಹ್ರಾಬುದ್ದೀನ್‌ ಎನ್‌ಕೌಂಟರನ್ನು ನಕಲಿ ಎನ್‌ಕೌಂಟರ್‌ ಎಂದು ಸಿಬಿಐ ಬಂಧಿಸಿದ್ದು,  ಆಗ ಗುಜರಾತ್‌ ಗೃಹ ಸಚಿವರಾಗಿದ್ದ ಇದೇ ಅಮಿತ್‌ ಷಾ ಅವರನ್ನ.  ದೇಶದ ರಾಜಕೀಯ ಇತಿಹಾಸದಲ್ಲಿ ಮೊದಲ ಬಾರಿಗೆ ಅಧಿಕಾರದಲ್ಲಿರುವ ಗೃಹ ಸಚಿವರೊಬ್ಬರನ್ನು ಸಿಬಿಐ ಬಂಧಿಸುವ ಘಟನೆ ನಡೆದಿದ್ದು.

ಹಾಗಾದರೆ ಅದು ನಕಲಿ ಎನ್‌ಕೌಂಟರ್‌ ಹೌದಾ ಅದೂ ಅಲ್ಲ. ಸೊಹ್ರಾಬುದ್ದೀನ್‌ ಎಂಬ ವ್ಯಕ್ತಿಯ ವಿರುದ್ಧ ಸುಲಿಗೆ, ಬೆದರಿಕೆ, ಕೊಲೆ ಸೇರಿದಂತೆ 60ಕ್ಕೂ ಹೆಚ್ಚು ಪ್ರಕರಣಗಳು ಅದಾಗಲೇ ದಾಖಲಾಗಿತ್ತು. ಅಷ್ಟೇ ಅಲ್ಲ, ಆತ ಲಷ್ಕರ್‌-ಎ-ತಯ್ಯಬಾ ಮತ್ತು ಪಾಕಿಸ್ಥಾನಿ ಗುಪ್ತಚರ ಇಲಾಖೆಗೂ ಕೆಲಸ ಮಾಡುತ್ತಿದ್ದ. ಗುಜರಾತ್‌ನ ಒಬ್ಬ ಪ್ರಮುಖ ರಾಜಕಾರಣಿಯನ್ನು ಕೊಂದು ರಾಜ್ಯದಲ್ಲಿ ಅಶಾಂತಿ ಸೃಷ್ಟಿ ಮಾಡುವ ದುರಾಲೋಚನೆ ಆ ಉಗ್ರನದ್ದಾಗಿತ್ತು. ಆಗ ಮುಖ್ಯಮಂತ್ರಿಯಾಗಿ ಗುಜರಾತ್‌ನಲ್ಲಿ ಬಹಳ ಹೆಸರು ಮಾಡಿದ್ದು ನರೇಂದ್ರ ಮೋದಿ ಮಾತ್ರ. ಆಗಿನಿಂದಲೂ ನರೇಂದ್ರ ಮೋದಿಯೇ ಉಗ್ರರ ಟಾರ್ಗೆಟ್‌. ಅಲ್ಲೇ ಸೊಹ್ರಾಬುದ್ದೀನ್‌ಗೆ ದಾವೂದ್‌ ಇಬ್ರಾಹಿಂ, ಷರೀಫ್‌ಖಾನ್‌ ಪಠಾಣ್‌, ಅಬ್ದುಲ್‌ ಲತೀಫ್‌, ರಸೂಲ್‌ ಪಾರ್ತಿ, ಬ್ರಜೇಶ್‌ ಸಿಂಗ್‌ ಹೀಗೆ ಎಲ್ಲರೊಂದಿಗೂ ವ್ಯವಹರಿಸುತ್ತಿದ್ದ. ಅಲ್ಲದೇ ಮನೆಯಲ್ಲೇ ಎ.ಕೆ. 47 ರೈಫಲ್‌ಗಳನ್ನೂ ಇಟ್ಟುಕೊಂಡಿದ್ದ ವ್ಯಕ್ತಿಯನ್ನು ಕೊಲ್ಲದೇ ಇನ್ನೇನು ಮಾಡಬೇಕು? ಪೊಲೀಸರು ಹೊಡೆದು ಬಿಸಾಕಿದ್ದಾರೆ.  ಆಗ ಇದು ಸುದ್ದಿಯಾಗಲಿಲ್ಲ, ಆದರೆ ಒಂದು ವರ್ಷದ ನಂತರ ಅಂದರೆ, 2006ರಲ್ಲಿ ಪ್ರಶಾಂತ್‌ ದಯಾಳ್‌ ಎಂಬ ಪತ್ರಕರ್ತ ದೈನಿಕ್‌ ಭಾಸ್ಕರ್‌ ಪತ್ರಿಕೆಯಲ್ಲಿ ಬರೆದ ನಂತರವೇ ಈ ಎನ್‌ಕೌಂಟರ್‌ ಬಗ್ಗೆ ತಿಳಿದಿದ್ದು.  ಸತ್ತವನು ಮುಸ್ಲಿಂ ಸಮುದಾಯಕ್ಕೆ ಸೇರಿದ ವ್ಯಕ್ತಿ ಎಂದ ತಕ್ಷಣ, ಅವನು ಉಗ್ರನಾ ಸಜ್ಜನನಾ ಎಂದೂ ನೋಡದ ಕಾಂಗ್ರೆಸ್‌ಗೆ ರಾಜಕೀಯದ ಕರುಳು ಚುರ್ರ್‌ ಎಂದಿತ್ತು.

ಇದರ ಸಂಬಂಧ ಎಲ್ಲ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಂಡ ನಂತರ ಅದು ಅಮಿತ್‌ ಷಾ ಬುಡಕ್ಕೆ ಬಂತು.  ಬುಡಕ್ಕೆ ಬರುವಂತೆ ಮಾಡಿದ್ದು ಮಾತ್ರ ಕಾಂಗ್ರೆಸ್‌ನ ಕೆಲ ಹಿರಿಯ ರಾಜಕಾರಣಿಗಳು ಮತ್ತು ಅಹ್ಮದ್‌ ಪಟೇಲ್‌! ಪೊಲೀಸರು ಮಾಡುವ ಎನ್‌ಕೌಂಟರ್‌ಗಳಿಗೆ, ಪ್ರಕರಣವನ್ನು ಭೇದಿಸುವ ಚಾಕಚಕ್ಯತೆಗೆ ಗೃಹ ಸಚಿವರನ್ನು ಹೊಣೆಯನ್ನಾಗಿಸುವುದಕ್ಕೆ ಸಾಧ್ಯವೇ? ಸಾಧ್ಯವಿತ್ತು. ಕಾಂಗ್ರೆಸ್‌ ಸರ್ಕಾರ ಸಾಧಿಸುತ್ತಿದ್ದ ದ್ವೇಷ ರಾಜಕಾರಣದಿಂದ.  ಅಮಿತ್‌ ಷಾ ಅವತ್ತು ಮಾತಾಡಲಿಲ್ಲ. ನೇರ ಸಬರಮತಿ ಜೈಲಿನಲ್ಲಿ ಅವರನ್ನು ಇರಿಸಲಾಯಿತು. ಕೆಟ್ಟ ಹೆಸರು ಬಂತು. ಅವರ ಸ್ನೇಹಿತರು, ಹಿತೈಷಿಗಳು ಎಲ್ಲರೂ ಅವರಿಂದ ದೂರವಾದರು. ಎಲ್ಲವನ್ನೂ ಸಹಿಸಿಕೊಂಡಿದ್ದರು. ಒಂದಲ್ಲ ಎರಡಲ್ಲ, ಬರೋಬ್ಬರಿ ಮೂರು ತಿಂಗಳು ಜೈಲಿನಲ್ಲೇ ಕೂರುವಂತಾಯಿತು. ಅಂತೂ ಇಂತು ಜಾಮೀನು ಸಿಕ್ಕಿತು. ಷರತ್ತು ಏನು ಗೊತ್ತಾ?  ಗುಜರಾತ್‌ ಒಳಗೆ ಕಾಲಿಡಬಾರದು. ತನ್ನ ತಾಯ್ನಾಡಿಗೆ ತಾನೇ ಕಾಲಿಡುವುದಕ್ಕೆ ಬಿಡದ ಹಾಗೆ ಮಾಡಿದ ಕಾಂಗ್ರೆಸನ್ನು ಎಲ್ಲಾದರೂ ಕ್ಷಮಿಸುವುದುಂಟಾ? ಆದರೆ ಅದಕ್ಕಿನ್ನೂ ಸಮಯ ಬಂದಿರಲಿಲ್ಲ. ಎಲ್ಲದಕ್ಕೂ ಒಪ್ಪಿ ಸಹಿ ಹಾಕಿದ ಅಮಿತ್‌ ಷಾ ಹೊರಗೆ ಬಂದರು.

ಹೊರಗೆ ಬರುತ್ತಿದ್ದಂತೆ ಆಡಿದ್ದು ಒಂದೇ ಮಾತು: ‘ಮಾರಿ ಓವತ್‌ ಜೋಯಿ ಕಿನಾರೆ ಘರ್‌ ನಾ ಬಂಧ್ತಾ ಸಮುಂದರ್‌ ಚು ಪಾಚೊ ಅವಿಶ್‌’. ಅಂದರೆ, ‘ನಾನು ಈಗ ಹೋಗ್ತೇನೆ, ನನ್ನನ್ನು ಅಷ್ಟು ಸುಲಭವಾಗಿ ಪರಿಗಣಿಸಬೇಡಿ. ನಾನು ಮತ್ತೆ ಬಂದೇ ಬರ್ತೀನಿ’ ಎಂದಿದ್ದರು.  ಯಾವ ಗೃಹ ಖಾತೆ ಇಟ್ಟುಕೊಂಡು ಕಾಂಗ್ರೆಸ್‌ನವರು ಅಮಿತ್‌ ಷಾರನ್ನು ಕುಣಿಸುತ್ತಿದ್ದರೋ, ಅದೇ ಗೃಹ ಖಾತೆ ಈಗ ಅಮಿತ್‌ ಷಾ ಅವರ ಬಳಿ ಇದೆ.

ಇತಿಹಾಸ ಮರುಕಳಿಸುತ್ತಿದೆ!

ಪ್ರಸಕ್ತ ರಾಜಕಾರಣದಲ್ಲೂ ಹೀಗೇ ನಡೆಯುತ್ತಿಲ್ಲವೇ? ದುಷ್ಟರಿಗೆ ದೃಷ್ಟದ್ಯುಮ್ನನಾಗಿ, ಸಜ್ಜನರನ್ನು ಕಚ್ಚಿ ಕೊಲ್ಲುತ್ತಿರುವ ಸರ್ಪಗಳ ಪಾಲಿಗೆ ಜನಮೇಜಯನಾಗಿ ಅಮಿತ್‌ ಷಾ ಬಂದಿದ್ದಾರೆ. 2010 ರ ಲೆಕ್ಕ ಇನ್ನೂ ಚುಕ್ತಾ ಆಗೇ ಇಲ್ಲ.  ಎಲ್ಲೆಲ್ಲೂ ನಗರ ನಕ್ಸಲರು ಕಾಂಗ್ರೆಸ್‌ ಗಿಡದಂತೆ ಬೆಳೆದು ನಿಂತಿದ್ದಾರೆ. ಉಗ್ರಗಾಮಿಗಳ ಕಣ್ಣು, ಪಾಕ್‌ ಕಣ್ಣು ಭಾರತದ ಮೇಲಿದೆ. ಒಂದೇ ಸಲ ಎಲ್ಲರ ಲೆಕ್ಕವೂ ಚುಕ್ತಾ ಆಗದಿದ್ದರೂ, ಖಂಡಿತವಾಗಿಯೂ ಸಾಲಾಗಿ, ಹಳೆಯ ಲೆಕ್ಕದಿಂದ ಬರುವುದಕ್ಕೂ ಸಾಕು. ಬಹುಶಃ ಇದೇ ಕಾರಣಕ್ಕೇ ಇರಬೇಕು, ರಾಜಕಾರಣಿಗಳಿಂದ ಹಿಡಿದು ಪತ್ರಕರ್ತರವರೆಗೂ, ದೇಶದಿಂದ ವಿದೇಶದವರೆಗೂ ಎಲ್ಲರೂ ಅಮಿತ್‌ ಷಾರನ್ನು ಕಂಡರೆ ಹೆದರುತ್ತಿರುವುದು.  ಅಮಿತ್‌ ಷಾ ಗೃಹ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಮೇಲೆ ಅಮೆರಿಕದ ಪ್ರತಿಷ್ಠಿತ ದಿನಪತ್ರಿಕೆ ವಾಷಿಂಗ್ಟನ್‌ ಪೋಸ್ಟ್‌ ಒಂದು ಲೇಖನಕ್ಕೆ ನೀಡಿರುವ ತಲೆಬರಹವಿದು – Amit Shah, India’s invisible prime minister, gets more powerful – and dangerous (ಅಮಿತ್‌ ಷಾ, ಭಾರತದ ಅಗೋಚರ ಪ್ರಧಾನಿ, ಈಗ ಮತ್ತಷ್ಟು ಶಕ್ತಿಶಾಲಿ – ಮತ್ತು ಅಪಾಯಕಾರಿ). ಇದರಲ್ಲಿ ಅಮಿತ್‌ ಷಾ ಬಗ್ಗೆ ಇಲ್ಲಸಲ್ಲದ್ದು ಬರೆದು ದ್ವೇಷ ಕಾರಿದ್ದಾರೆ ಎಂಬ ಸಂಗತಿಯನ್ನು ಸ್ವಲ್ಪ ಬದಿಗೊತ್ತಿ ನೋಡಿದರೆ, ಅವರು ನೀಡಿರುವ ತಲೆಬರಹವೇ ಅವರೆಷ್ಟು ಗಾಬರಿಗೊಂಡಿದ್ದಾರೆ ಎಂಬುದಕ್ಕೆ ಕನ್ನಡಿಯಿದ್ದಂತೆ. ಅಮಿತ್‌ ಷಾ ಇನ್ನೂ ಗೃಹಸಚಿವರಾಗಿ ಕೆಲವನ್ನು ಕೈಗೆತ್ತಿಕೊಂಡೇ ಇಲ್ಲ, ಆಗಲೇ ಇವರೆಲ್ಲ ಈ ಪಾಟಿ ಹೆದರಿದ್ದಾರೆಂದರೆ, ಇನೈದು ವರ್ಷ ಅಮಿತ್‌ ಷಾ ಅವರನ್ನು ಸಹಿಸಿಕೊಳ್ಳುವುದಾದರೂ ಹೇಗೆ? ಪ್ರಧಾನಿ ಮೋದಿಯವರನ್ನೂ ಹೀಗೇ ಅಪಾಯಕಾರಿ, ಕೊಲೆಗಡುಕ, ಸಾವಿನ ವ್ಯಾಪಾರಿ ಎಂದೆಲ್ಲ ಕರೆದು ಜನರಲ್ಲಿ ಭಯ ಹುಟ್ಟಿಸಿದ್ದನ್ನು ನಾವಿಲ್ಲಿ ನೆನೆಯಬಹುದು. ಹಾಗೆ ಭಯ ಹುಟ್ಟಿಸುವುದೇ ಪ್ರಗತಿಪರರ, ಕಾಂಗ್ರೆಸ್‌ನ ಪ್ರೀಪೇಯ್ಡ್‌ ಪತ್ರಕರ್ತರ ಮೊದಲ ಹೆಜ್ಜೆ ಎಂಬುದನ್ನು ನಾನು ಹೇಳಿಯೇ ತಿಳಿಯಬೇಕಿಲ್ಲ.

ನೆನಪಿರಲಿ, ಅಮಿತ್‌ ಷಾ ಸಾಧಾರಣ ರಾಜಕಾರಣಿಯೇ ಅಲ್ಲ. ಪ್ಲಾನ್‌ ಹೇಗಿರುತ್ತದೆಂದರೆ, ಇಟ್ಟ ಗುರಿ ಎಲ್ಲೂ ಯಾವುದೇ ಕಾರಣಕ್ಕೂ ಮಿಸ್‌ ಆಗುವ ಪ್ರಮೇಯವೇ ಇರುವುದಿಲ್ಲ. 1989ರಿಂದ ಈ ಮನುಷ್ಯ ಒಟ್ಟು 29 ಚುನಾವಣೆಗಳಲ್ಲಿ ಸ್ಪರ್ಧಿಸಿದ್ದಾರೆ. ಒಂದೇ ಒಂದು ಸೋಲನ್ನೂ ಕಂಡಿಲ್ಲ. 1997, 98, 2002, 2007ರಲ್ಲಿ ಸತತವಾಗಿ ಜಯ ಸಾಧಿಸುತ್ತಲ್ಲೇ ಇದ್ದಾರೆ. ಒಮ್ಮೆಯಂತೂ 12 ಖಾತೆಗಳನ್ನು ಅವರೇ ನಿಭಾಯಿಸುತ್ತಿದ್ದರು.  ಅಟಲ್‌ ಬಿಹಾರಿ ವಾಜಪೇಯಿ ಮತ್ತು ಆಡ್ವಾಣಿಯವರದ್ದು ಹೇಗೆ ಆಗ ಡೆಡ್ಲಿ ಕಾಂಬಿನೇಷನ್‌ ಎಂದು ಕರೆಯುತ್ತಿದ್ದರೋ ಅದಕ್ಕಿಂತ ಉನ್ನತ ಮಟ್ಟದ, ಕೆಟ್ಟವರಿಗೆ ಕೆಟ್ಟದಾರಿಯಲ್ಲೇ ಉತ್ತರಿಸುವ, ದುಷ್ಟರಿಗೆ ಶಿಕ್ಷಿಸುವ ಕಾಂಬಿನೇಷನ್‌ ನರೇಂದ್ರ ಮೋದಿ ಮತ್ತು ಅಮಿತ್‌ ಷಾರದ್ದು.  ಇವರ ಅನುಮತಿ ಇಲ್ಲದೇ, ಉಗ್ರರು ಒಳ ಬರುವುದು ಮತ್ತು ದುಷ್ಟರು ಭಾರತ ಬಿಟ್ಟು ಹೋಗುವುದು ಎರಡೂ ಅಸಾಧ್ಯ. ಅದಕ್ಕೆ ಸಾಕ್ಷಿಯೇ, ಮೇ 23ನೇ ತಾರೀಖು ಮೋದಿ ಸರ್ಕಾರ ಪ್ರಚಂಡ ಬಹುಮತದಿಂದ ಆಯ್ಕೆಯಾಗಿದ್ದನ್ನು ಕಂಡು, ಜೆಟ್‌ ಏರ್‌ವೇಸ್‌ನ ಮಾಲಿಕ ಮತ್ತು ಅವರ ಪತ್ನಿ ಮೆಲ್ಲಗೆ ಮುಂಬೈನಿಂದ ಯು.ಕೆ ದುಬೈ ಮಾರ್ಗವಾಗಿ ಹೋಗಲು ವಿಮಾನ ಹತ್ತಿ ಕುಳಿತಿದ್ದವರನ್ನು, ಇಳಿಸಿ ಭಾರತದಲ್ಲೇ ಇರುವುದಕ್ಕೆ ಸೂಚಿಸಿದ್ದು.ಅಮಿತ್‌ ಷಾ ಅವರು ನಗರ ನಕ್ಸಲರು, ಉಗ್ರರ ಬಗ್ಗೆ ಹಾಗೂ ಇನ್ನಿತರ ಭದ್ರತೆ ಸಂಬಂಧ ಕೆಲ ಕಡತಗಳನ್ನು ಅಧಿಕಾರಿಗಳಿಂದ ತರಿಸಿಕೊಂಡಿದ್ದಾರೆ ಎಂಬುದು ಹೊಸ ಸುದ್ದಿ. ಅಧಿಕಾರದ ಮದದಿಂದ, ದುರಹಂಕಾರದಿಂದ ಮೆರೆದವರಿಗೆ ರಾಮಾಯಣ-ಮಹಾಭಾರತದಿಂದಲೂ ಜನ್ಮದಲ್ಲೇ ಮರೆಯಲಾರದ ಪಾಠ, ಪೆಟ್ಟು ಎರಡೂ ಸಿಕ್ಕಿದೆ. ಈಗ ಎಲ್ಲೋ ಇದ್ದ ವ್ಯಾಪಾರಿಯೊಬ್ಬ ರಾಜಕಾರಣಕ್ಕೆ ಬಂದಿದ್ದಾರೆ. ಅಲ್ಲದೇ, ದುಷ್ಟರಿಂದ ಹೊಡೆತ ತಿಂದು ಗಾಯಗೊಂಡಿದ್ದಾರೆ. ಸುಮ್ಮನೆ ಬಿಡ್ತಾರಾ? ದೈವೇಚ್ಛೆಯೇ ಹಾಗಿದ್ದರೆ ಯಾರೇನು ಮಾಡಲು ಸಾಧ್ಯ?! ಏಕೆಂದರೆ, ಅಮಿತ್‌ ಷಾ ಅವರೇ ಹೇಳಿದಂತೆ, ಅವರನ್ನು ಅಷ್ಟು ಸುಲಭ ಎಂದು ಪರಿಗಣಿಸಬೇಡಿ.

ಕೃಪೆ....ಫೇಸ್ ಬುಕ್

   

 

Edited By

Ramesh

Reported By

Ramesh

Comments