ಇಲ್ಲದ ಎತ್ತಿನಹೊಳೆಯ ನೀರಲ್ಲಿ ಕಾರ್ಕಳಕ್ಕೆ ಕೊಚ್ಚಿ ಹೋದ ಮೊಯಿಲಿ

24 May 2019 5:06 AM |
508 Report

ಲೋಕಸಭಾ ಚುನಾವಣೆ 2019, ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಬಿ.ಎನ್. ಬಚ್ಚೇಗೌಡ ಎಲ್ಲರ ನಿರೀಕ್ಷೆಯಂತೆ ಗೆಲುವನ್ನು ತಮ್ಮದಾಗಿಸಿಕೊಂಡಿದ್ದಾರೆ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎಂ. ವೀರಪ್ಪಮೊಯಿಲಿ 5,63,396 ಮತಗಳನ್ನು ಪಡೆದು 1,81,079 ಮತಗಳ ಅಂತರದಿಂದ ಸೋತು ಮೂರನೇ ಬಾರಿ ಆಯ್ಕೆಯಾಗಿ ಸಂಸತ್ತನ್ನು ಪ್ರವೇಶಿಸುವ ಅವಕಾಶ ವಂಚಿತರಾಗಿ ಕಾರ್ಕಳ ದಾರಿ ಹಿಡಿದಿದ್ದಾರೆ. 2014 ರಲ್ಲಿ 9500 ಮತಗಳಷ್ಟು ಕಡಿಮೆ ಅಂತರದಿಂದ ಸೋತಿದ್ದ ಬಚ್ಚೇಗೌಡ ಈ ಬಾರಿ 7,44,475 ಮತಗಳನ್ನು ಪಡೆದು ಭರ್ಜರಿಯಾಗಿ ಗೆದ್ದಿದ್ದಾರೆ. ತೀವ್ರ ಕುತೂಹಲ ಸೃಷ್ಠಿಸಿದ್ದ ಈ ಕ್ಷೇತ್ರ ಅಂತಿಮವಾಗಿ ವಿಜಯಲಕ್ಷ್ಮಿ ಬಚ್ಚೇಗೌಡರ ಕೈಹಿಡಿದಿದ್ದಾಳೆ.

ಕಾರ್ಯಕರ್ತರಿಂದ ವಿಜಯೋತ್ಸವ ಆಚರಣೆ- ನಗರದ ಹಳೇ ಬಸ್ ನಿಲ್ದಾಣದ ವೃತ್ತದಲ್ಲಿ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು, ನಾಯಕರು ಹಾಗೂ ಸಾರ್ವಜನಿಕರು ಸಂಜೆ ಐದು ಘಂಟೆಗೆ ಸೇರಿ ಪ್ರಧಾನಿ ಮೋದಿ ಹಾಗೂ ಬಚ್ಚೇಗೌಡರಿಗೆ ಜೈಕಾರ ಹಾಕುತ್ತಾ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನೆಡೆಸಿದರು, ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ಕಾರ್ಯಕರ್ತರು ಪಟಾಕಿ ಸಿಡಿಸಿ ತಮಟೆ ಸದ್ದಿಗೆ ಕುಣಿದು ಕುಪ್ಪಳಿಸಿದರು.  ಹೊರವಲಯದ ಬಾಶೆಟ್ಟಿಹಳ್ಳಿಯಲ್ಲಿ ಬಜರಂಗದಳ ವತಿಯಿಂದ ವಿಜಯೋತ್ಸವ ಆಚರಣೆ ಮಾಡಲಾಯಿತು, ನಮೋ ಸೇನೆ, ಮೋದಿ ಭಾರತ್ ಹಾಗೂ ಹಿಂದೂ ಜಾಗರಣಾ ವೇದಿಕೆ ಸದಸ್ಯರು ಬೈಕ್ ರ‍್ಯಾಲಿ ನೆಡೆಸಿದರು.

ಮೊಯ್ಲಿ ಗೆಲುವನ್ನು ಆಚರಿಸಲು ಸಜ್ಜಾಗಿದ್ದ ಕೈ ಪಾಳಯ, ನಾಯಕರ ಅಣತಿಯಂತೆ ನೆನ್ನೆಯೇ ನಗರದ ಕಾಂಗ್ರೆಸ್ ಪಕ್ಷದ ಕಛೇರಿಯನ್ನು ಅಲಂಕರಿಸಿ ವಿಜಯೋತ್ಸವ ಆಚರಿಸಲು ಕಾರ್ಯಕರ್ತರು ತಳಿರು ತೋರಣ ಕಟ್ಟಿದ್ದರು, ಆದರೆ ಚಿಕ್ಕಬಳ್ಳಾಪುರ ಕ್ಷೇತ್ರದ ಮತದಾರ ಈ ಬಾರಿ ವಿಜಯೋತ್ಸವ ಆಚರಿಸುವ ಅವಕಾಶವನ್ನು ಬಿಜೆಪಿಗೆ ಕೊಟ್ಟಿದ್ದಾರೆ!  ಕಳೆದ ಹತ್ತು ವರ್ಷಗಳಿಂದ ಈ ಭಾಗದ ಜನರಿಗೆ ಎತ್ತಿನಹೊಳೆ ನೀರು ಕುಡಿಸುತ್ತೀನಿ ಎಂದು ಹೇಳಿಕೊಂಡು ಬರುತ್ತಿದ್ದ ಸುಳ್ಳುಗಾರ ಮೊಯಿಲಿಗೆ ಮತದಾರ ತಕ್ಕ ಪಾಠ ಕಲಿಸಿದ್ದಾನೆ.

Edited By

Ramesh

Reported By

Ramesh

Comments