ಎಡಚರು, ಗುಲಾಮರು, ಕಮ್ಮಿನಿಷ್ಟರು, ಅತಿಬುದ್ಧಿವಂತರು, ಪ್ರಗತಿಪರರು, ಜಾತ್ಯಾತೀತರನ್ನು ಬೆತ್ತಲೆ ಮಾಡಿ ಬೀದಿಯಲ್ಲಿ ನಿಲ್ಲಿಸಿದ ನಿಮಗೆ ಅಭಿನಂದನೆಗಳು....

22 May 2019 6:18 AM |
96 Report

ನೀವು 'ಭಾಳಾ ಬುದ್ವಂತ್ರು. ಓದ್ಕೊಂಡೋರು. ಮೈಯೆಲ್ಲಾ ಮಿದುಳೇ ತುಂಬ್ಕೊಂಡಿರುವ ವಿಚಿತ್ರ ವಿಶೇಷ ಜನ' ಎಂದು ಭಾವಿಸಿದ್ದ ಎಡಗಡೆಯ ಪತ್ರಕರ್ತ/ಕರ್ತೆಯರು ಅದೊಂದು ಕಾಲದಲ್ಲಿ 'ಮೋದಿಯಿಂದಾಗಿ ದೇಶದಲ್ಲಿ ಅಶಾಂತಿ ಸೃಷ್ಟಿಯಾಗಿದೆ. ಅಸಹಿಷ್ಣುತೆಯಿಂದಾಗಿ ದೇಶ ಧಗಧಗನೆ ಹೊತ್ತಿ ಉರಿಯುತ್ತಿದೆ. ಕೋಮು ಸಂಘರ್ಷದ ಜ್ವಾಲೆ ಆಕಾಶ ಮುಟ್ಟಿದೆ. ಮೋದಿಯಿಂದಾಗಿ ಜನ ರಸ್ತೆ ರಸ್ತೆಗಳಲ್ಲಿ ಸಾಯುತ್ತಿದ್ದಾರೆ. ಬಡವರು ಹೊಟ್ಟೆಗೆ ತಣ್ಣೀರ ಬಟ್ಟೆ ಕಟ್ಟಿಕೊಂಡು ಮಲಗಿದ್ದಾರೆ. ಮೋದಿ ಈ ದೇಶದ ಬಡವರನ್ನು ಕೊಂದ. ಶ್ರೀಮಂತರಿಗೆ ಚಿನ್ನದ ಚಮಚೆ ಬಾಯಲ್ಲಿಟ್ಟ. ಮೋದಿ ಸರ್ವಾಧಿಕಾರಿ. ಮೋದಿ ರಾಕ್ಷಸ. ಮೋದಿ ದೆವ್ವ. ಮೋದಿ ರಣಪೀಡೆ...' ಎಂದೆಲ್ಲ ಬುಸುಗುಡುತ್ತಿದ್ದರು. ಈ ಪತ್ರಕರ್ತ-ಕರ್ತೆಯರು ಟಿವಿಯಲ್ಲಿ ಅರಚಾಡಿದರು, ಪತ್ರಿಕೆಗಳಲ್ಲಿ ಥಾನುಗಟ್ಟಲೆ ಮೋದಿಯ ವಿರುದ್ಧ ಬರೆದರು, ಟ್ವಿಟ್ಟರಿನಲ್ಲಿ ಮೈಮೇಲೆ ದೆವ್ವ ಬಂದಂತೆ ಮೋದಿಯನ್ನು ತೆಗಳಿ ಕಿಚಾಯಿಸಿ ಉಗುಳಿ ಬರೆದೇ ಬರೆದೇ ಬರೆದರು.

ಆದರೆ ನೀವು ಮೋದಿಯ ಮೇಲೆ ವಿಶ್ವಾಸವಿಟ್ಟಿದ್ದಿರಿ. ನಿಮ್ಮ ವಿಶ್ವಾಸವನ್ನು ಅಲುಗಾಡಿಸಲು ನೂರೆಂಟು ಯತ್ನಗಳಾದವು. ದೇಶ ಅಸಹಿಷ್ಣುತೆಯ ಬೆಂಕಿಯಲ್ಲಿ ಬೆಂದು ಬೋಗಾರು ಬಿದ್ದಿದೆ ಎಂದು ಬುದ್ಧಿವಂತರೆಲ್ಲ ತಂತಮ್ಮ ಕಪಾಟಿನ ತಗಡುಗಳನ್ನು ವಾಪಸು ಮಾಡುತ್ತಿದ್ದಾಗ ನಿಮಗೆ ಅಸಹಿಷ್ಣುತೆಯ ಅರ್ಥವೇ ಗೊತ್ತಿರಲಿಲ್ಲ! ಡಿಕ್ಷನರಿ ನೋಡಿ, 'ಓ ಅಸಹಿಷ್ಣುತೆ ಅಂದರೆ ಇದಾ? ಇದೀಗ ಈ ದೇಶದಲ್ಲಿ ಉಂಟಾ? ನಮಗೆಲ್ಲೂ ಕಾಣ್ತಾನೇ ಇಲ್ವಲ್ಲ!' ಎಂದು ಬೆದರಿದ್ದಿರಿ ನೀವು. ಆದರೂ ನೀವು ಬುದ್ವಂತರ ಮಾತುಗಳನ್ನು ನಂಬಲಿಲ್ಲ. ನಂಬಬಹುದು ಎನ್ನುವಷ್ಟರಲ್ಲಿ ಆ ಅಸಹಿಷ್ಣುತೆಯೇ ಎಲ್ಲೋ ಮಾಯವಾಗಿ ಹೋಗಿತ್ತು!

ನಿಮಗೆ ಸಾಹಿತಿಗಳ ಬಗ್ಗೆ ಭಯ, ಭಕ್ತಿ ಇತ್ತು. ಅವರು ಏನಾದರೂ ಹೇಳಿದರೆ ವೇದವಾಕ್ಯ, ಕಣ್ಮುಚ್ಚಿ ನಂಬಬಹುದು ಅಂತ ಅಂದುಕೊಂಡಿದ್ದಿರಿ ನೀವು. ನಾವು ಹತ್ತು ಜನ್ಮದಲ್ಲಿ ಓದುವಂಥಾದ್ದನ್ನೆಲ್ಲ ಅವರು ಒಂದೇ ಜನ್ಮದಲ್ಲಿ ಓದಿ ಬಿಟ್ಟಿದ್ದಾರೆ ಎಂಬ ಭಯಮಿಶ್ರಿತ ಗೌರವ ನಿಮಗೆ ಆ ಸಾಹಿತಿಗಳ ಮೇಲೆ ಇತ್ತು. ಆದರೆ ಅದೇ ಸಾಹಿತಿಗಳು ಶುರುವಿಟ್ಟುಕೊಂಡರು. "ಈ ದೇಶದಲ್ಲಿ ಈಗ ನಮ್ಮ ಇಷ್ಟದ ಬಟ್ಟೆ ಹಾಕೋದಕ್ಕೆ ಹೆದರಿಕೆ ಆಗುತ್ತೆ. ನಮ್ಮ ಇಷ್ಟದ ಊಟ ಮಾಡೊದಕ್ಕೆ ಭಯ ಆಗುತ್ತೆ. ಇಲ್ಲಿ ಬದುಕಲಿಕ್ಕೆ ಸಾಧ್ಯವಾಗದಂಥ, ಉಸಿರಾಡುವುದಕ್ಕೂ ಕಷ್ಟವಾಗುವಂಥ ಪರಿಸ್ಥಿತಿ ಇದೆ. ಮೋದಿ ಅಧಿಕಾರಕ್ಕೆ ಬಂದರೆ ಈ ದೇಶ ಸರ್ವನಾಶ ಆಗುತ್ತೆ. ಮೋದಿ ಬಂದರೆ ಎಲ್ಲಾ ದೇಶಗಳ ಜೊತೆ ಯುದ್ಧ ಮಾಡ್ತಾನೆ. ಇಲ್ಲಿ ಹೆಣಗಳ ರಾಶೀನೇ ಬೀಳುತ್ತೆ. ಮೋದಿ ವಿಧ್ವಂಸಕ. ಇಲ್ಲಿ ಸಾಹಿತಿಗಳು ಉಸಿರೆತ್ತಲೂ ಸಾಧ್ಯವಾಗದಂಥ ವಾತಾವರಣ ನಿರ್ಮಾಣ ಆಗಿದೆ. ಸಾಯ್ತಿದೇವೆ.. ಸಾಯ್ತಿದೇವೆ" ಎಂದು ಗೋಳಾಡಿದರು ಅವರು. ನಿಮಗೆ ಅಚ್ಚರಿಯಾಯಿತು. ಹೌದಾ? ಈ ದೇಶದಲ್ಲಿ ಹಾಗೆಲ್ಲ ಆಗಿದೆಯಾ? ನಾನಂತೂ ನನ್ನ ಇಷ್ಟದ ಬಟ್ಟೆ ಉಡ್ತಿದೀನಲ್ಲ? ಇಷ್ಟದ ಊಟ ಉಣ್ಣತಿದ್ದೀನಲ್ಲ? ನನಗಿಲ್ಲದ ತೊಂದರೆ ಈ ಸಾಹಿತಿಗಳನ್ನು ಮಾತ್ರ ಅಮರಿಕೊಂಡದ್ದು ಹೇಗೆ? ಉಸಿರೆತ್ತಲಿಕ್ಕೇ ಆಗಲ್ಲ ಅಂತಾರೆ, ಆದ್ರೂ ಇಷ್ಟೆಲ್ಲ ಮಾತಾಡ್ತಾರೆ! ಇದು ಹೇಗೆ ಸಾಧ್ಯ? ತಲೆ ಕೆರೆದುಕೊಂಡಿರಿ ನೀವು. ನೋಡೋಣ, ಯಾವನಾದ್ರೂ ಸಾಹಿತಿ ಅವನು ಹೇಳಿದಂತೆಯೇ ಸತ್ತುಹೋದರೆ ನೋಡೋಣ, ಆಮೇಲೆ ಸ್ವಲ್ಪ ಜಾಗ್ರತೆ ಮಾಡಿದರಾಯ್ತು ಅಂದ್ಕೊಂಡಿರಿ.

ನಿಮಗೆ ಭಯಭಕ್ತಿ ಇತ್ತು ವಿಜ್ಞಾನಿಗಳನ್ನು ಕಂಡರೆ, ಅರ್ಥಶಾಸ್ತ್ರಜ್ಞರನ್ನು ಕಂಡರೆ. ಅವರೂ ಹೇಳಿದರು, "ದೇಶ ಲಗಾಡಿ ಹೋಗುತ್ತಿದೆ. ಅರ್ಥವ್ಯವಸ್ಥೆ ಕುಸಿಯುತ್ತಿದೆ. ಡಿಮಾನಿಟೈಸೇಶನ್ ಆದ ಮೇಲೆ ನೂರು ಜನ ಸತ್ತಿದ್ದಾರೆ. ಬಡವರು ಬೀದಿಗೆ ಬಿದ್ದಿದ್ದಾರೆ. ದೇಶ ದಿವಾಳಿಯಾಗುವ ಅಂಚಿನಲ್ಲುಂಟು. ಇಂದೋ ನಾಳೆಯೋ ದಿವಾಳಿ ಆಗೇಹೋಗಲಿಕ್ಕುಂಟು. ವಿಜ್ಞಾನಿಗಳ ಕೈಕಾಲು ಕಟ್ಟಿಹಾಕಿದ್ದಾನೆ ಈ ಮೋದಿ. ಇವನ ಕಾಲದಲ್ಲಿ ಈ ದೇಶ ನೂರು ವರ್ಷ ಹಿಂದಕ್ಕೆ ಹೋಗುತ್ತೆ ನೋಡ್ತಿರಿ". ನೋಡಿದಿರಿ ನೀವು! ಮತ್ತು ಆ ವಿಜ್ಞಾನಿಗಳ, ಅರ್ಥಶಾಸ್ತ್ರಿಗಳ ಮಾತನ್ನು ಖರೇ ನಂಬಿದಿರಿ. ಹೌದೋ ಏನೋ, ದೇಶ ದಿವಾಳಿ ಬೀಳುತ್ತೋ ಏನೋ ಎಂದು ಕಾದಿರಿ. ಆದರೆ ಅಂಥ ಭೂಕಂಪ, ಥತ್, ಆಗಲೇ ಇಲ್ಲ! ದಿನಕ್ಕೊಂದರಂತೆ ಉಪಗ್ರಹಗಳು ಮೇಲೆ ಹೋಗುತ್ತಿವೆ. ಜನಸಾಮಾನ್ಯರಿಗೂ ಕೈಗೆಟುಕುವ ದರದಲ್ಲಿ ಔಷಧಿಗಳು ಸಿಗುತ್ತಿವೆ. ರೈತರಿಗೆ ಕಾಲಕ್ಕೆ ಸರಿಯಾಗಿ ಬೀಜ, ಗೊಬ್ಬರ ದೊರೆಯುತ್ತಿದೆ. ಬರ ಬಿದ್ದರೂ, ಅತಿವೃಷ್ಟಿ ಆದರೂ ತರಕಾರಿ, ಬೇಳೆಕಾಳುಗಳ ಬೆಲೆ ಏರಲೇ ಇಲ್ಲ. ಇನ್'ಫ್ಲೇಶನ್, ಇನ್'ಫ್ಲೇಶನ್ ಎಂದು ಎಕನಾಮಿಸ್ಟುಗಳು ಕೂಗಿ ಕೂಗಿ ಹೇಳಿದರೂ ಬೆಲೆಗಳು ಜಪ್ಪಯ್ಯ ಎನ್ನಲಿಲ್ಲ. ಒಂದೇ ಒಂದು ಇಂಚೂ ಮೇಲೆ ಹೋಗಲಿಲ್ಲ. ನಿಮಗೆ ಆಶ್ಚರ್ಯ! ಅಷ್ಟೆಲ್ಲ ಪಂಡಿತರು ಹೇಳುತ್ತಿರುವ ಒಂದೇ ಒಂದು ಅವಘಡವೂ ಆಗುತ್ತಿಲ್ಲವಲ್ಲ! ಇರಲಿ, ಹಣದುಬ್ಬರ ಹೆಚ್ಚಿ ದೇಶ ದಿವಾಳಿ ಬಿದ್ದಾಗ ನೋಡಿಕೊಳ್ಳೋಣ ಎಂದುಕೊಂಡಿರಿ.

ಅಂತಾರಾಷ್ಟ್ರೀಯ ಸಂಬಂಧಗಳ ತಜ್ಞರು ಹೇಳಿದರು, "ಈ ಮೋದಿ ಗದ್ದುಗೆಯಲ್ಲಿ ಕೂತರೆ ದೇಶದಲ್ಲಿ ಪ್ರಳಯ! ಮೂರನೇ ಮಹಾಯುದ್ಧ!". ಆದದ್ದು ಉಲ್ಟಾ! ಈತನನ್ನು ಪ್ರಪಂಚದ ಎಲ್ಲ ದೇಶಗಳವರು ಬೆರಗುಗಣ್ಣಿಂದ ನೋಡಿದರು, ಹತ್ತಿರ ಕರೆದರು, ಅಪ್ಪಿದರು, ಮುತ್ತಿಕ್ಕಿದರು. "ಈತ ಅಧಿಕಾರಕ್ಕೆ ಬಂದರೆ ಮುಸ್ಲಿಮರ ಸರ್ವನಾಶ!!", ಹೇಳಿದರು ಜಾತಿ-ಧರ್ಮಗಳ ವಿಷಯದಲ್ಲಿ ಡಬ್ಬಲ್ ಡಿಗ್ರಿ ಪಡೆದ ಜಾತ್ಯತೀತ ಪಂಡಿತರು. ಆಗಲೇ ಇಲ್ಲವಲ್ಲ ಅಂಥ ಯಾವುದೇ ದುರಂತ! ಮುಸ್ಲಿಮರ ದೇಶಗಳವರೇ ಕರೆದು ಅಪ್ಪಿ, "ನಮ್ಮೂರಲ್ಲೂ ನಾರಾಯಣಸ್ವಾಮಿಯ ದೇವಸ್ಥಾನ ಕಟ್ಟಿಬಿಡಿ" ಎಂದರು.

ಅರ್ಥಶಾಸ್ತ್ರಿಗಳು, ವಿಜ್ಞಾನಿಗಳು, ಪದ್ಮ ಪ್ರಶಸ್ತಿಗಳನ್ನು ಹೊಡೆದ ಸಾಹಿತಿಗಳು, ವಿಚಾರವಾದಿಗಳು, ಬುದ್ಧಿಜೀವಿಗಳು, ಪ್ರಗತಿಪರ ಚಿಂತಕರು, ಮಾನವತಾವಾದಿಗಳು, ಪರಿಸರವಾದಿಗಳು, ಸಮತಾವಾದಿಗಳು, ಪತ್ರಕರ್ತರು, ನಟರು, ನಾಯಕರು.... ಎಲ್ಲರೂ ಎಲ್ಲರೂ ತಂತಮ್ಮ ಜ್ಞಾನವನ್ನು ಧಾರೆ ಎರೆಯುತ್ತಿದ್ದರು. ಅಸಹಿಷ್ಣುತೆ ಇದೆ ಎಂದರವರು. ನೀವು ಹೇಳಿದ್ದು, 'ತೋರಿಸಿ!'.  ಮೂರನೇ ಮಹಾಯುದ್ಧ ನಡೆದೇ ಬಿಡುತ್ತೆ, ಎಂದರವರು.  ನೀವು ಹೇಳಿದಿರಿ, 'ಹೌದಾ ಡೇಟ್ ಹೇಳಿ, ರೆಡಿಯಾಗಿರುತ್ತೇವೆ'.  'ವಿಜ್ಞಾನಕ್ಕೆ ದಿಗ್ಬಂಧನ ಹಾಕಿದ್ದಾನೆ ಈ ಅವಿವೇಕಿ, ನಾವು ಶಿಲಾಯುಗಕ್ಕೆ ಹೋಗಲಿದ್ದೇವೆ' ಎಂದವರು ಕೂಗಿ ಹೇಳಿದರು. ನೀವು ಮಿಷನ್ ಶಕ್ತಿಯ ಭಾಷಣ ನೋಡುತ್ತ ನಿಂತಿದ್ದಿರಿ. 'ಈ ದೇಶವನ್ನು ಶತ್ರುಗಳಿಗೆ ಮಾರುತ್ತಾನೆ ಈ ಮುಟ್ಟಾಳ', ಸಹನೆ ಮೀರಿ ಕಿರುಚಿದರವರು. ನೀವು ಶತ್ರುಗಳ ದಾಳಿಗೆ ಪ್ರತಿದಾಳಿ ನಡೆಸಿ ಮಗ್ಗುಲ ದೇಶದ ಮಗ್ಗುಲು ಮುರಿದ ಕತೆಯ 'ಉರಿ' ಸಿನೆಮಾ ನೋಡುತ್ತ ಚಪ್ಪಾಳೆ ಹೊಡೆಯುತ್ತಿದ್ದಿರಿ. 'ಮೋದಿ ಬರಲ್ಲ. ಮತ್ತೆ ಖಂಡಿತಾ ಬರಲ್ಲ', ರಾಜಕೀಯ ವಿಶ್ಲೇಷಕರು ದನಿಯೆತ್ತಿ ಕೂಗು ಹಾಕಿದರು. ನೀವು ಮಾತ್ರ ಸೈಲೆಂಟಾಗಿ ಅವನಿಗೇ ಮತ ಹಾಕಿ ಈಗ ಸೈಲೆಂಟಾಗಿ ಕೂತುಬಿಟ್ಟಿದ್ದೀರಿ.

ಈ ಐದು ವರ್ಷದಲ್ಲಿ ಮೋದಿ ಏನು ಮಾಡಿದ ಎಂಬುದನ್ನು ನಾನು ಹೇಳಬೇಕಿಲ್ಲ. ಆದರೆ ಅದಕ್ಕಿಂತ ದೊಡ್ಡ ಸಾಧನೆ ನಿಮ್ಮದು! ಈ ಐದು ವರ್ಷಗಳಲ್ಲಿ ಈ ದೇಶದ ಅತಿಬುದ್ಧಿವಂತರ ಬಂಡವಾಳವನ್ನೆಲ್ಲ ನೀವು, ಸಾಮಾನ್ಯ ಜನ, ಸೈಲೆಂಟಾಗಿ ಬಯಲು ಮಾಡಿ ಆ ಅತಿಬುದ್ಧಿವಂತರನ್ನೆಲ್ಲ ಬೀದಿಯಲ್ಲಿ ಬೆತ್ತಲೆ ನಿಲ್ಲಿಸಿಬಿಟ್ಟಿದ್ದೀರಿ. ಈ ಸಾಧನೆ ಕಡಿಮೆಯದೇನಲ್ಲ! ಶುಭಾಶಯಗಳು ನಿಮಗೆ.

ಬರಹ ಕೃಪೆ- ರೋಹಿತ್ ಚಕ್ರತೀರ್ಥ

Edited By

Ramesh

Reported By

Ramesh

Comments