ಡೆತ್ ನೋಟ್ ಬರೆದಿಟ್ಟು ನವ ವಿವಾಹಿತರ ಆತ್ಮಹತ್ಯೆ

07 May 2019 7:56 AM |
310 Report

ರೈಲಿಗೆ ಸಿಲುಕಿ ನವ ವಿವಾಹಿತ ಪ್ರೇಮಿಗಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ವೀರಾಪುರದ ಬಳಿ ನಡೆದಿದೆ. ದೊಡ್ಡಬಳ್ಳಾಪುರ ಶಾಂತಿನಗರದ ಲೀಲಾವತಿ ಮತ್ತು ವಿಜಯಕುಮಾರ್ ಮೃತ ಪ್ರೇಮಿಗಳು. ವೀರಾಪುರದ ಬಳಿ ರೈಲ್ವೆ ಹಳಿಗಳ ಮೇಲೆ ಯುವಕ-ಯುವತಿಯ ಮೃತದೇಹ ಪತ್ತೆಯಾಗಿದೆ. ಮನೆಯವರ ವಿರೋಧದ ನಡುವೆಯೂ ಮದುವೆಯಾಗಿದ್ದ ಪ್ರೇಮಿಗಳು ಸೋಮವಾರ ನಗರದ ಹೊರವಲಯದ ವೀರಾಪುರ ರೈಲ್ವೆ ಹಳಿ ಬಳಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕಛೇರಿಪಾಳ್ಯ ನಿವಾಸಿ ವಿಜಯ್ [೨೨] ಹಾಗೂ ಶಾಂತಿನಗರದ ನಿವಾಸಿ ಲೀಲಾವತಿ [೧೭] ಮೃತ ದುರ್ದೈವಿಗಳು.  ಎರಡು ವರ್ಷದಿಂದ ಪ್ರೀತಿಸುತ್ತಿದ್ದ ಇಬ್ಬರೂ ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದರು, ಈ ಬಗ್ಗೆ ತಿಳಿದ ಎರಡೂ ಮನೆಯವರು ವಿರೋಧ ವ್ಯಕ್ತ ಪಡಿಸಿದ್ದರು.  ವಿರೋಧದ ನಡುವೆಯೂ ತಿಂಗಳ ಹಿಂದೆ ಪ್ರೇಮಿಗಳು ಹಸೆಮಣೆ ಏರಿದ್ದರು.  ಈ ವಿಚಾರವಾಗಿ ಹುಡುಗಿ ಕುಟುಂಬದವರು ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಲೀಲಾವತಿ ನಾಪತ್ತೆ ಪ್ರಕರಣ ದಾಖಲಿಸಿದ್ದರು, ದೂರಿನಲ್ಲಿ ಹುಡುಗಿಯ ವಯಸ್ಸು ೧೭ ಆಗಿದ್ದು ಅಪ್ರಾಪ್ತೆ ಎಂದು ಉಲ್ಲೇಖಿಸಲಾಗಿದೆ.

ಮೃತರ ಬಳಿ ಡೆತ್‍ ನೋಟ್,  ಡೆತ್ನೋಟ್ನಲ್ಲಿ ಏನಿದೆ?
ನನ್ನ ಹೆಸರು ಲೀಲಾವತಿ, ನಾನು ವಿಜಯ್ ಅನ್ನೋ ಹುಡುಗನನ್ನ ಇಷ್ಟಪಟ್ಟಿದ್ದೆ. ಮನೆಯಲ್ಲಿ ವಿಷಯ ಗೊತ್ತಾಗಿ ನನಗೆ ಹಿಂಸೆ ಕೊಟ್ಟರು. ಆದ್ದರಿಂದ ನಾವಿಬ್ಬರು ಮದುವೆ ಮಾಡಿಕೊಂಡಿದ್ದೇವೆ. ನಮಗೆ ಮದುವೆಯಾಗಿ ಒಂದು ತಿಂಗಳ ಆಗಿದೆ. ಆದರೆ ನಾವಿಬ್ಬರು ಮದುವೆಯಾಗಿದ್ದರು ನಮ್ಮ ಮಾವನಾದ ಮಂಜುನಾಥ್.ಆರ್ ನಮ್ಮಿಬ್ಬರಿಗೆ ಹಿಂಸೆಕೊಡುತ್ತಿದ್ದಾರೆ. ಅವರ ಹಿಂಸೆ ತಡೆಯಲಾರದೇ ನಾವಿಬ್ಬರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ. ನಮ್ಮ ಸಾವಿಗೆ ಮಾವ ಮಂಜುನಾಥ್ ಕಾರಣ ಎಂದು ಬರೆದಿದ್ದಾರೆ.

ಈ ಸಂಬಂಧ ರೈಲ್ವೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮೃತದೇಹಗಳನ್ನ ದೊಡ್ಡಬಳ್ಳಾಪುರ ಸರ್ಕಾರಿ ಆಸ್ಪತ್ರೆ ಶವಾಗಾರಕ್ಕೆ ರವಾನಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

Edited By

Ramesh

Reported By

Ramesh

Comments