ಸುಳ್ಳಿನ ಸರದಾರ ಮೋಯ್ಲಿ ವಿರುದ್ಧ ಬಚ್ಚೇಗೌಡ ತೀವ್ರ ವಾಗ್ದಾಳಿ

04 Apr 2019 6:12 PM |
136 Report

ವೀರಪ್ಪ ಮೋಯ್ಲಿ ಒಂದು ಕಡೆ ಎತ್ತಿನಹೊಳೆಯಿಂದ ಎರಡು ತಿಂಗಳಲ್ಲಿ ನೀರು ತರುತ್ತೇನೆ ಎನ್ನುತ್ತಾರೆ, ಇನ್ನೊಂದು ಕಡೆ ಎರಡು ವರ್ಷದಲ್ಲಿ ತರುತ್ತೇನೆ ಎನ್ನುತ್ತಾರೆ, ಮತ್ತೊಂದು ಕಡೆ ಎತ್ತಿನಹೊಳೆ ನೀರು ಹರಿಸಿ ನಾನು ಸಾಯುತ್ತೇನೆ ಎನ್ನುತ್ತಾರೆ. ನಿರ್ದಿಷ್ಟ ಸಮಯವನ್ನು ಹೇಳಲು ಸಾಧ್ಯವಿಲ್ಲದ ಮೋಯ್ಲಿ, ಸುಳ್ಳಿನ ಸರಮಾಲೆಯನ್ನೇ ಪೋಣಿಸುತ್ತಿದ್ದಾರೆ. ಬಹುಶಃ ಅವರು ಡಾಕ್ಟರೇಟ್ ಪಡೆದಿರೋದೇ ಸುಳ್ಳು ಹೇಳೋದರಲ್ಲಿ ಅನ್ನಿಸುತ್ತೆ ಎಂದು ಬಿಜೆಪಿ ಅಭ್ಯರ್ಥಿ ಬಿ.ಎನ್.ಬಚ್ಚೇಗೌಡ, ಮೋಯ್ಲಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ದೊಡ್ಡಬೆಳವಂಗಲದಲ್ಲಿ ಆಯೋಜಿಸಿದ್ದ ಹೋಬಳಿ ಮಟ್ಟದ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು, ಬೆಂಗಳೂರಿನ ಕೊಳಚೆ ನೀರನ್ನು ಯೋಗ್ಯ ರೀತಿಯಲ್ಲಿ ಶುದ್ದೀಕರಿಸದೆ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯ ಕೆರೆಗಳಿಗೆ ಹರಿಸಲುಮುಂದಾಗಿದ್ದರು. ಇದರ ವಿರುದ್ಧ ಹೋರಾಟಗಾರರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರೆ, ನಾನು ಹೋರಾಟಗಾರರಿಗೆ ಕುಮ್ಮಕ್ಕು ನೀಡಿ ತಡೆಯಾಜ್ಞೆ ಮಾಡಿಸಿದ್ದೇನೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಇದು ಹೋರಾಟಗಾರರಿಗೆ ಮಾಡಿದ ಅವಮಾನ ಎಂದರು. ಅತ್ತ ಎತ್ತಿನಹೊಳೆಯಲ್ಲಿ ಕೇವಲ 29ಕಿಲೋಮೀಟರಿನಷ್ಟು ಮಾತ್ರ ಕಾಮಗಾರಿ ಮುಗಿದಿದೆ.‌ ಎರಡು ತಿಂಗಳಲ್ಲಿ ಮೋಯ್ಲಿ ಎತ್ತಿನಹೊಳೆ ನೀರನ್ನು ಟ್ಯಾಂಕರುಗಳಲ್ಲಿ ತಂದು ಹರಿಸಬೇಕಷ್ಟೇ ಎಂದು ಲೇವಡಿ ಮಾಡಿದರು.

ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗೆಂದು ಶುರುವಾದ ಯೋಜನೆ ಇದಾಗಿದ್ದರೂ, ದೊಡ್ಡಬಳ್ಳಾಪುರ ತಾಲ್ಲೂಕಿನ ಕೇವಲ 7 ಕೆರೆಗಳಿಗೆ ಮಾತ್ರ ನೀರು ಬರುವಂತೆ ಯೋಜನೆ ಬದಲಾಯಿಸಿದ್ದಾರೆ. ಅದರಲ್ಲಿ ಸಾಸಲು ಹೋಬಳಿಯ ಆರು, ದೊಡ್ಡಬೆಳವಂಗಲ ಹೋಬಳಿಯ ಒಂದು ಕೆರೆ ಮಾತ್ರ ಇದೆ. ಗುಂಡುಂಮಗೆರೆ ಗ್ರಾಮದ ಕೆರೆ ಬಿಟ್ಟರ ಉಳಿದ ಕೆರೆಗಳು ನಿಮ್ಮ ಊರಿನ ಕುಂಟೆಗಳಷ್ಟೇ ಚಿಕ್ಕವು. ಇದರಿಂದ ತಾಲ್ಲೂಕಿನ ಸಮಗ್ರ ನೀರಾವರಿ ಪರಿಹಾರವಾಗಲು ಹೇಗೇ ಸಾಧ್ಯ? ಎಂದು ಪ್ರಶ್ನಿಸಿದರು. ದೇಶದಲ್ಲಿ ಮತ್ತೊಮ್ಮೆ ಮೋದಿಯವರ ಸರ್ಕಾರ ರಚನೆಯಾಗುವುದು ಖಚಿತ. ನಾನು ಸಂಸದನಾಗಿ ಆಯ್ಕೆಯಾದಲ್ಲಿ ಕೇಂದ್ರ ಸರ್ಕಾರದ ಯೋಜನೆಗಳನ್ನು ನಿಮ್ಮ ಮನೆ ಬಾಗಿಲಿಗೆ ತಲುಪಿಸುವುದು ಸುಲಭವಾಗುತ್ತದೆ. ಶಾಶ್ವತ ನೀರಾವರಿ ಪರಿಹಾರವಾಗಿ, ಎತ್ತಿನಹೊಳೆ ಯೋಜನೆಯನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸುವ ಜೊತೆಗೆ, ಪರಮಶಿವಯ್ಯನವರ ವರದಿ ಜಾರಿ, ನದಿ ಜೋಡಣೆಯಂತಹ ಎಲ್ಲಾ ಸಾಧ್ಯತೆಗಳನ್ನು ಮುಕ್ತವಾಗಿರಿಸಿಕೊಂಡಿದ್ದೇನೆ. ನೀರಾವರಿ ಸೌಲಭ್ಯಕ್ಕೆ ನನ್ನ ಮೊದಲ ಆದ್ಯತೆ, ಆದ್ದರಿಂದ ನನ್ನನ್ನು ಗೆಲ್ಲಿಸಿ, ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಅ.ದೇವೇಗೌಡ, ಕೇಂದ್ರ ರೇಷ್ಮೆ ಮಂಡಳಿ ಅಧ್ಯಕ್ಷ ಕೆ.ಎಂ.ಹನುಮಂತರಾಯಪ್ಪ, ಮಾಜಿ ಶಾಸಕ ಜೆ.ನರಸಿಂಹಸ್ವಾಮಿ, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರುಗಳಾದ ಸತ್ಯನಾರಾಯಣಗೌಡ,ಟಿ.ವಿ.ಲಕ್ಷ್ಮೀನಾರಾಯಣ್, ಮುಖಂಡ ಬಿ.ಸಿ.ವೆಂಕಟೇಶ್ ಮಾತನಾಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪುಷ್ಪಾ ಶಿವಶಂಕರ್, ಮಾಜಿ ಜಿಲ್ಲಾಧ್ಯಕ್ಷ ಬಿ.ಸಿ.ನಾರಾಯಣಸ್ವಾಮಿ, ಜಿಲ್ಲಾ ವಕ್ತಾರ ಅಮರನಾಥ್, ಮಹಿಳಾ ಮೋರ್ಚಾಜಿಲ್ಲಾಧ್ಯಕ್ಷೆ ವತ್ಸಲ, ಯುವಮೋರ್ಚಾ ಜಿಲ್ಲಾಧ್ಯಕ್ಷ ಶಿವಶಂಕರ್, ತಾಲ್ಲೂಕು ಅಧ್ಯಕ್ಷ ನಾರಾಯಣಸ್ವಾಮಿ, ನಗರ ಅಧ್ಯಕ್ಷ ಕೆ.ಎಚ್.ರಂಗರಾಜು, ಮುಖಂಡರಾದ ಚನ್ನೇಗೌಡ, ಸುಬ್ಬೇಗೌಡ, ರಾಜಣ್ಣ, ವೆಂಕಟೇಶ್ ಮೊದಲಾದವರು ಭಾಗವಹಿಸಿದ್ದರು.

Edited By

Ramesh

Reported By

Ramesh

Comments