ಜೆಡಿಎಸ್ ಬಾವುಟ ಹಿಡಿದ ದೊಡ್ಡಬಳ್ಳಾಪುರ ಕಾಂಗ್ರೆಸ್ ಕಾರ್ಯಕರ್ತರು

ಚಿಕ್ಕಬಳ್ಳಾಪುರ ಕ್ಷೇತ್ರ ವ್ಯಾಪ್ತಿಯ ದೊಡ್ಡಬಳ್ಳಾಪುರ ವಿಧಾನಸಭೆ ಕ್ಷೇತ್ರದಲ್ಲಿ ಜೆಡಿಎಸ್ ಮುಖಂಡರು ಕೈ ಅಭ್ಯರ್ಥಿ ಪರ ಪ್ರಚಾರದಲ್ಲಿ ಪಾಲ್ಗೊಳ್ಳಲು ಇನ್ನೂ ಮೀನಮೇಷ ಎಣಿಸುತ್ತಿದ್ದು, ಶುಕ್ರವಾರ ತಾಲೂಕಿನ ರಾಜಘಟ್ಟ ಆಂಜನೇಯಸ್ವಾಮಿ ದೇವಾಲಯದಿಂದ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪ್ರಚಾರ ಕಾರ್ಯ ಚಾಲನೆಗೆ ಜೆಡಿಎಸ್ ಮುಖಂಡರು ಬಂದಿರಲಿಲ್ಲ. ಆದರೆ ಮತದಾರರ ಮುಂದೆ ಈ ಒಳಬೇಗುದಿ ಕಾಣಿಸಿಕೊಳ್ಳಬಾರದೆಂದು ಕಾಂಗ್ರೆಸ್ ಕಾರ್ಯಕರ್ತರೇ ಜೆಡಿಎಸ್ ಭಾವುಟ ಹಿಡಿದು ಪ್ರದರ್ಶಿಸಿದ್ದು, ಚುನಾವಣೆಯ ತಂತ್ರಗಾರಿಕೆಗೆ ಸಾಕ್ಷಿ ಎನಿಸಿತು.
ಕಾಂಗ್ರೆಸ್ ಶಾಸಕ ಟಿ.ವೆಂಣಕಟರಮಣಯ್ಯ ಮಾತನಾಡಿ ಚಿಕ್ಕಬಳ್ಳಾಪುರ 8 ಕ್ಷೇತ್ರಗಳ ಪೈಕಿ 7 ಕ್ಷೇತ್ರಗಳಲ್ಲೂ ಜೆಡಿಎಸ್-ಕಾಂಗ್ರೆಸ್ ಜೊತೆಗೂಡಿ ಮೊಯ್ಲಿ ಪರವಾಗಿ ಪ್ರಚಾರ ಆರಂಭ ಮಾಡಿದ್ದಾರೆ. ಆದರೆ ದೊಡ್ಡಬಳ್ಳಾಪುರದಲ್ಲಿ ಜೆಡಿಎಸ್ ಪಕ್ಷ ದವರು ಎರಡು ದಿನ ಸಮಯ ಕೇಳಿದ್ದಾರೆ, ಚುನಾವಣೆ ಸಮೀಪ ಇರುವುದರಿಂದ ನಾವು ಪ್ರಚಾರಕ್ಕೆ ಚಾಲನೆ ನೀಡಿದ್ದೇವೆ. ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ಕಾರ್ಯಕರ್ತರು ನೇರವಾಗಿ ನಮ್ಮ ಜೊತೆ ಪ್ರಚಾರಕ್ಕೆ ಹೋಗುವವರಿಗೆ ಎಚ್.ಡಿ.ಕುಮಾರಸ್ವಾಮಿ, ಎಚ್.ಡಿ.ದೇವೇಗೌಡ ಅವರು ಮಾತನಾಡಿ ಬಗೆಹರಿಸಬೇಕಾಗಿದೆ. ಈ ಕುರಿತು ಅವರಲ್ಲಿ ಸಚಿವ ಶಿವಶಂಕರರೆಡ್ಡಿ, ಡಾ.ಎಂ.ವೀರಪ್ಪಮೋಯ್ಲಿ ಸೇರಿದಂತೆ ನಾನು ಚರ್ಚಿಸಿದ್ದೇನೆ. ದೊಡ್ಡಬಳ್ಳಾಪುರದ ಜೆಡಿಎಸ್ ಪಾಳಯದಲ್ಲಿ 2-3 ಪಂಗಡಗಳಿರುವುದರಿಂದ ಅವರನ್ನು ಸೇರಿಸಿ ಮಾತನಾಡಿ ಒಮ್ಮತಕ್ಕೆ ಬಂದು ನಿಮ್ಮ ಜೊತೆ ಪ್ರಚಾರಕ್ಕೆ ಬರುತ್ತೇವೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಬಿ.ಮುನೇಗೌಡ ತಿಳಿಸಿದ್ದಾರೆ ಎಂದು ಹೇಳಿದರು.
Comments