ಘಾಟಿ ಶ್ರೀ ಸುಬ್ರಮಣ್ಯಸ್ವಾಮಿ ಬ್ರಹ್ಮರಥೋತ್ಸವ

12 Jan 2019 2:30 PM |
372 Report

ದೊಡ್ಡಬಳ್ಳಾಪುರ ತಾಲ್ಲೂಕಿನ ಪ್ರಸಿದ್ದ ಧಾರ್ಮಿಕ ಕ್ಷೇತ್ರ ಘಾಟಿ ಶ್ರೀ ಸುಬ್ರಮಣ್ಯ ಕ್ಷೇತ್ರದಲ್ಲಿ ಪುಷ್ಯ ಶುದ್ಧ ಷಷ್ಠಿಯ ಇಂದು [12-1-2019 ಶನಿವಾರ 11-45 ರಿಂದ 12-05 ಘಂಟೆಗೆ] ಬ್ರಹ್ಮರಥೋತ್ಸವ ವಿಜೃಂಭಣೆಯಿಂದ ನೆಡೆಯಿತು. ರಥೋತ್ಸವದ ಅಂಗವಾಗಿ ಮುಂಜಾನೆ 3 ಘಂಟೆಯಿಂದಲೇ ಪೂಜಾಕಾರ್ಯಕ್ರಮಗಳು ಆರಂಭವಾಗಿ 5-30 ಕ್ಕೆ ಮಹಾ ಮಂಗಳಾರತಿ ನೆಡೆಯಿತು ಶ್ರೀ ಸುಬ್ರಮಣ್ಯಸ್ವಾಮಿ ಹಾಗೂ ಶ್ರೀ ಲಕ್ಷ್ಮೀನರಸಿಂಹಸ್ವಾಮಿಯವರಿಗೆ ಕ್ಷೀರಾಭಿಷೇಕ, ಪಂಚಾಂಮೃತಾಭಿಷೇಕ, ರುದ್ರಾಭಿಷೇಕ, ಶ್ರೀಗಂಧಾಭಿಷೇಕ, ಭಸ್ಮಾಭಿಷೇಕದೊಂದಿಗೆ ಹೂವಿನ ಅಲಂಕಾರ ಹಾಗೂ ದೇವಾಲಯದಲ್ಲಿ ವಿಶೇಷ ಅಲಂಕಾರ ಮತ್ತು ವಿವಿಧ ಪೂಜಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ರಥದ ಮೇಲೆ ವಲ್ಲಿದೇವಸೇನಾ ಸಮೇತ ಸುಬ್ರಮಣ್ಯಸ್ವಾಮಿಯ ಹಾಗೂ ಸರ್ಪದೇವರ ವಿಗ್ರಹಗಳನ್ನು ಪ್ರತಿಷ್ಠಾಪಿಸಿ ರಥೊತ್ಸವ ನೆಡೆಸಿದರು.

ದೊಡ್ಡಬಳ್ಳಾಪುರ ತಾಲ್ಲೂಕು ಶಾಸಕ ಟಿ.ವೆಂಕಟರಮಣಯ್ಯ, ಜಿಲ್ಲಾಧಿಕಾರಿ ಕರೀಗೌಡ, ಘಾಟಿ ಕ್ಷೇತ್ರ ವ್ಯವಸ್ಥಾಪಕ ಸಮಿತಿಯ ಅಧ್ಯಕ್ಷ ಜಗನ್ನಾಥಾಚಾರ್ ಮತ್ತು ನಿರ್ದೇಶಕರುಗಳು, ಇ.ಓ. ಕೃಷ್ಣಪ್ಪ ಹಾಜರಿದ್ದರು. ಗೌರೀಬಿದನೂರು, ದೇವನಹಳ್ಳಿ, ಬೆಂಗಳೂರು, ಮದುಗಿರಿ ಮತ್ತು ಘಾಟಿಯ ಸುತ್ತಮುತ್ತಲಿನ ಊರುಗಳ ಹಾಗೂ ವಿವಿಧ ಜಿಲ್ಲೆಗಳಿಂದಲ್ಲದೆ ನೆರೆಯ ಆಂದ್ರ ಪ್ರದೇಶ, ತಮಿಳುನಾಡಿನಿಂದ ಮೂವತ್ತು ಸಾವಿರಕ್ಕೂ ಹೆಚ್ಚು ಮಂದಿ ಭಕ್ತಾದಿಗಳು ಆಗಮಿಸಿದ್ದರು.  ದೊಡ್ಡಬಳ್ಳಾಪುರ ತಾಲ್ಲೂಕು ಖಾಸಗಿ ಬಸ್ ಮಾಲೀಕರು ಮತ್ತು ಕಾರ್ಮಿಕರ ಸಂಘ, ಅಪ್ಪಕಾರನಳ್ಳಿ ಟಿ.ರಾಮಣ್ಣ, ಹೆಚ್. ಅಪ್ಪಯ್ಯಣ್ಣ ಮತ್ತು ಕುಟುಂಬ ಹಾಗೂ ಮೋದಿಜಿ ಬಾಯ್ಸ್ ವತಿಯಿಂದ ಜಾತ್ರೆಗೆ ದೊಡ್ಡಬಳ್ಳಾಪುರ ನಗರದ ಹಳೇ ಬಸ್ ನಿಲ್ದಾಣದಿಂದ ಭಕ್ತಾದಿಗಳಿಗೆ ಉಚಿತ ಬಸ್ ವ್ಯವಸ್ಥೆ ಮಾಡಲಾಗಿತ್ತು.  ಆಗಮಿಸಿದ ಭಕ್ತಾದಿಗಳಿಗೆ ತಿಂಡಿ ಮತ್ತು ಊಟದ ವ್ಯವಸ್ಥೆಯನ್ನು ಹಲವಾರು ಸಂಘ ಸಂಸ್ಥೆಗಳವತಿಯಿಂದ ಬೆಳಿಗ್ಗೆಯಿಂದಲೇ ಏರ್ಪಡಿಸಿದ್ದರು.

Edited By

Ramesh

Reported By

Ramesh

Comments