ಶಬರಿಮಲೆ ಕ್ಷೇತ್ರ ಸಂರಕ್ಷಣಾ ಸಮಿತಿ ವತಿಯಿಂದ ಕೇರಳ ಸರ್ಕಾರದ ವಿರುದ್ಧ ಪ್ರತಿಭಟನೆ

20 Nov 2018 12:54 PM |
324 Report

ಶಬರಿಮಲೆಯಲ್ಲಿ ಪೊಲೀಸ್ ಶಕ್ತಿ ಬಳಸಿಕೊಂಡು ಕೇರಳ ಸರ್ಕಾರ ಅಯ್ಯಪ್ಪ ಭಕ್ತರ ಮೇಲೆ ನಡೆಸುತ್ತಿರುವ ದೌರ್ಜನ್ಯ ಹಾಗೂ ಕಾನೂನಿನ ನೆಪದಲ್ಲಿ ಹಿಂದುಗಳ ಧಾರ್ಮಿಕ ಹಾಗೂ ಭಾವನಾತ್ಮಕ ವಿಚಾರಗಳನ್ನು ಹತ್ತಿಕ್ಕುವ ಕ್ರಮವನ್ನು ಖಂಡಿಸಿ ಇಂದು ಬೆಳಿಗ್ಗೆ 10.30 ಕ್ಕೆ ದೊಡ್ಡಬಳ್ಳಾಪುರ ತಾಲ್ಲೂಕು ಕಛೇರಿಯ ಮುಂದೆ ಶಬರಿಮಲೆ ಕ್ಷೇತ್ರ ಸಂರಕ್ಷಣಾ ಸಮಿತಿ, ಬಜರಂಗದಳ, ಹಿಂದೂ ಜಾಗರಣ ವೇಧಿಕೆ ಮತ್ತು ತಾಲ್ಲೂಕು ಭಾರತೀಯ ಜನತಾ ಪಕ್ಷದ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಅಯ್ಯಪ್ಪಸ್ವಾಮಿಯ ಭಜನೆ ಮಾಡುವುದರ ಮೂಲಕ ಪ್ರತಿಭಟನೆಯನ್ನು ಪ್ರಾರಂಭ ಮಾಡಲಾಯಿತು. ನಂತರ ಮಾತನಾಡಿದ ಮೋದಿ ಭಾರತ್ ಸಂಸ್ಥಾಪಕ, ವಕೀಲ ರವಿ ಮಾವಿನಕುಂಟೆ ನ್ಯಾಯಾಲಯದ ತೀರ್ಪಿನಿಂದ ಬಹುಸಂಖ್ಯಾತ ಹಿಂದೂಗಳ ಭಾವನೆಗಳಿಗೆ ಧಕ್ಕೆಯಾಗಿದೆ, ತೀರ್ಪು ನೀಡುವ ಮೊದಲು ಒಂದು ಕಮಿಟಿಯನ್ನು ರಚಿಸಿ ಬಹುಸಂಖ್ಯಾತ ಹಿಂದೂಗಳು ಅಯ್ಯಪ್ಪ ದೇವಸ್ಥಾನದಲ್ಲಿ ನಡೆಸಿಕೊಂಡು ಬಂದಿರುವ ಆಚಾರ, ಧರ್ಮ, ನಂಬಿಕೆ ತಿಳಿದು ತೀರ್ಪು ನೀಡಬೇಕಿತ್ತು ....

ಈ ಸಂಪ್ರದಾಯ ನಿನ್ನೆ ಮೊನ್ನೆಯದಲ್ಲ, ಎಂಟುನೂರು ವರ್ಷಗಳಿಂದ ನಡೆಸಿಕೊಂಡು ಬಂದಿರುವುದು, ಭಕ್ತರಿಗೆ ಮೂಲ ಸೌಕರ್ಯ ಕಲ್ಪಿಸದೇ, ಕುಡಿಯುವ ನೀರು, ವಾಹನ ಉಳಿಯಲು ಸ್ಥಳ ನೀಡದೇ, ಭಕ್ತರ ಮೇಲೆ ದರ್ಪ ತೋರುವ ಕೇರಳ ಸರ್ಕಾರ ಹಾಗೂ ತಿರುವಾಂಕೂರು ದೇವಸ್ವಂ ಬೋರ್ಡ್ ಗೆ ಹಿಂದೂಗಳಾದ ನಾವು ಸರಿಯಾಗಿ ಬುದ್ದಿ ಕಲಿಸಿ, ಅಯ್ಯಪ್ಪಸ್ವಾಮಿ ದೇವಸ್ಥಾನದ ಪರಂಪರೆಯನ್ನು ಉಳಿಸಲು ನಾವು ಕೈ ಜೋಡಿಸೋಣ ಎಂದು ಹೇಳಿದರು.

ಬೆಂ.ಗ್ರಾ.ಜಿಲ್ಲಾ ಅಧ್ಯಕ್ಷೆ ಪುಷ್ಪಾ ಶಿವಶಂಕರ್ ಮಾತನಾಡಿ ಯಾವ ಹಿಂದೂ ಹೆಣ್ಣು ಮಕ್ಕಳೂ ಮಸೀದಿ ಅಥವ ಚರ್ಚಿಗೆ ಹೋಗುತ್ತೇವೆ ಅಲ್ಲಿನ ಆಚಾರ ನಂಬಿಕೆಗಳನ್ನು ಹಾಳು ಮಾಡುತ್ತೇವೆ ಎಂದು ಹೇಳಲಿಲ್ಲ, ಯಾವ ನ್ಯಾಯಾಲಯದಲ್ಲೂ ಕೇಸ್ ಹಾಕಲಿಲ್ಲ, ಹಿಂದೂಗಳಾದ ನಾವೇ ಐವತ್ತು ವರ್ಷ ಆಗುವವರೆಗೂ ಕಾಯಲು ಸಿದ್ದರಿದ್ದೇವೆ, ಆದರೆ ಮುಸ್ಲಿಂ ಮತ್ತು ಕ್ರಿಸ್ಚಿಯನ್ ಮಹಿಳೆಯರಿಗೆ ಯಾಕೆ ಹಿಂದೂಗಳ ನಂಬಿಕಿಯನ್ನು ಹಾಳುಮಾಡುವ ಈ ಉಸಾಬರಿ? ಎಂದು ಹೇಳಿದರು.

ಗುರುಸ್ವಾಮಿ ವಾಸುದೇವ್ ಮಾತನಾಡುತ್ತಾ ಶಬರಿಮಲೆ ತೀರ್ಪಿನ ವಿರುದ್ದ ಮೇಲ್ಮನವಿ ಸಲ್ಲಿಸದೇ ಭಕ್ತರ ಮೇಲೆ ಲಾಠಿ ಚಾರ್ಜ್ ಮಾಡಿಸಿದ ದೇವಸ್ವಂ ಬೋರ್ಡ್ ನ ಎಲ್ಲ ಸದಸ್ಯರು ಅಧ್ಯಕ್ಷರು ನಾವು ಹುಂಡಿಗೆ ಹಾಕಿದ ಕೋಟಿ ಕೋಟಿ ಹಣ ದಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದಾರೆ, ಎಸಿ ಕಾರಿನಲ್ಲಿ ತಿರುಗುತ್ತಿದ್ದಾರೆ ಆದರೆ ಹುಂಡಿಗೆ ದುಡ್ಡು ಸುರಿಯುವ ಭಕ್ತರು ಮಾತ್ರ ಬೀದಿಯಲ್ಲಿ ಮಲಗುತ್ತಿದ್ದಾರೆ,  ದಯಮಾಡಿ ಈ ಬಾರಿ ಅಪ್ಪ, ಅರವಣ ಪ್ರಸಾದಗಳನ್ನ ಕೊಳ್ಳದಿರಿ ಇದರ ಹಣ ನೇರವಾಗಿ ಗೂಂಡಾಗಿರಿ ಮಾಡುವ ಅಯ್ಯಪ್ಪ ಭಕ್ತರನ್ನ ದೌರ್ಜನ್ಯ ಮಾಡುವ, ಹಿಂದೂಗಳನ್ನು ಹಿಂಸೆ ಮಾಡುವ ಕೇರಳದ ಕಮ್ಯುನಿಸ್ಟ್ ಸರ್ಕಾರಕ್ಕೆ ಹಾಗೂ ಅದರ ಅಡಿಯಾಳು ತಿರುವಾಂಕೂರು ದೇವಸ್ವಂ ಗೆ ಹೋಗುತ್ತದೆ ನೆನಪಿರಲಿ ಎಂದು ಅಯ್ಯಪ್ಪ ಭಕ್ತರನ್ನು ಎಚ್ಚರಿಸಿದರು.

ಶಬರಿಮಲೆ ಕ್ಷೇತ್ರ ಸಂರಕ್ಷಣಾ ಸಮಿತಿ ವತಿಯಿಂದ ತಹಸೀಲ್ದಾರ್ ಬಿ.ಎ.ಮೋಹನ್ ರವರಿಗೆ ಮನವಿ ಸಲ್ಲಿಸಲಾಯಿತು, ಪತ್ರದಲ್ಲಿ ಶಬರಿಮಲೆಯಲ್ಲಿ ಶ್ರೀ ಸಾಮಾನ್ಯ ಅಯ್ಯಪ್ಪ ಭಕ್ತರ ಮೇಲೆ ಕೇರಳ ಸರ್ಕಾರದಿಂದ ನಡೆಯುತ್ತಿರುವ ದೌರ್ಜನ್ಯ,ಧಾರ್ಮಿಕ ನಂಬಿಕೆ,ಆಚರಣೆ ಮೇಲೆ ಪ್ರಹಾರ ಮಾಡುತ್ತಿರುವ, ಪೋಲೀಸರಿಂದ ಭಕ್ತಾದಿಗಳ ಮೇಲೆ ಹಲ್ಲೆ ಹಾಗೂ ಕರ್ನಾಟಕದಿಂದ ತೆರಳುವ ಭಕ್ತಾದಿಗಳಿಗೆ ಸೂಕ್ತವಾದ ಭದ್ರತೆ, ವಸತಿ ವ್ಯವಸ್ಥೆಗಳನ್ನು ಕಲ್ಪಿಸಲು ಒತ್ತಾಯಿಸುವ ಮನವಿ ಪತ್ರ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಅಯ್ಯಪ್ಪ ಮಾಲಾಧಾರಿಗಳು, ಗುರುಸ್ವಾಮಿಗಳು, ಬಜರಂಗದಳ, ಹಿಂದೂ ಜಾಗರಣ ವೇಧಿಕೆ ಕಾರ್ಯಕರ್ತರು ಭಾಗವಹಿಸಿದ್ದರು.

 

 

Edited By

Ramesh

Reported By

Ramesh

Comments