ಈ ಮರ ಕಡಿದ ಫೋಟೋಗೂ ನನ್ನ ನಡಿಗೆಗೂ ಒಂದು ಸಂಬಂಧವಿದೆ......ಹೀಗೊಂದು ಸ್ವಗತ

11 Oct 2018 7:05 AM |
400 Report

ಐದಾರು ವರ್ಷದ ಹಿಂದೆ ನನ್ನ ಬಳಿ ಸೈಕಲ್ ಆಗಲಿ ಬೈಕ್ ಆಗಲಿ ಇರಲಿಲ್ಲ ನಡೆದುಕೊಂಡೆ ಎಲ್ಲ ಕಡೆಗೂ ಓಡಾಡುವುದು ಅನಿವಾರ್ಯವಾಗಿತ್ತು, ಅದರಲ್ಲಿ ಒಂತರ ಮಜಾನು ಸಿಕ್ತಿತ್ತು, ಹಾಗಾಗಿ ಈವತ್ತಿಗೂ ಸಹಾ ನಾನು ಬಿಡುವಾದಾಗ ನಡಿತಾ ಇರ್ತೀನಿ ಹಾಗೂ ಕಾಲ್ನಡಿಗೆ ಜಾಥಗಳಲ್ಲೂ ಪಾಲ್ಗೋಳ್ತ ಇರ್ತೀನಿ...

ಆರು ವರ್ಷದ ಹಿಂದೆ ದೊಡ್ಡಬಳ್ಳಾಪುರ ನಗರದ ಟೋಲ್ ಗೇಟ್ ಸರ್ಕಲ್ ನಿಂದ ತಾಲ್ಲೂಕು ಆಫೀಸ್ ಗೆ ಹೋಗುವ ರಸ್ತೆಯಲ್ಲಿ ಹಲವಾರು 60-70 ವರ್ಷಗಳಿಗಿಂತ ಮೇಲ್ಪಟ್ಟ ವಿವಿಧ ಜಾತಿಯ ಮರಗಳಿವೆ.  ಅದರಲ್ಲಿ ಈ ಆಲದ ಮರವೂ ಸಹಾ ಒಂದು, ಹೀಗೆ ಮರದ ಹತ್ತಿರ ನಡೆದುಕೊಂಡು ಹೋಗುತ್ತಿರುವಾಗ ಆ ಮರದ ಬುಡದಲ್ಲಿ ಒಂದು ಅಜ್ಜಿ ಕೂತು ಕಲ್ಲಿನ ಚಕ್ಕೆ ಹಿಡಿದು ಮರವನ್ನು ಕೆತ್ತುತ್ತ ಮರದಿಂದ ಬಂದಂತ ಹಾಲನ್ನು ವಿಳೆದೆಲೆಯ ಮೇಲೆ ಶೇಖರಿಸುತ್ತಿತ್ತು.  ಇದನ್ನು ನೋಡುತ್ತಿದ್ದಂತೆಯೆ ಅಜ್ಜಿ ಏನೋ ಮಾಡ್ತಿದೆ ಅದನ್ನು ತಿಳಿದುಕೊಳ್ಳಬೇಕೆನಿಸಿತು, ಪರಿಚಯವಿಲ್ಲದ ಆ ಅಜ್ಜಿಯನ್ನು ಮಾತಾನಾಡಿಸಲು ಮುಜುಗರದಿಂದಲೇ ಅಜ್ಜಿಯನ್ನು ಮಾತಾನಾಡಿಸದೇ ಮುಂದೆ ನಡೆದು ಬಿಟ್ಟೇ.  ಆದರೂ ಮನಸ್ಸು ಸುಮ್ಮನಿರಲಿಲ್ಲ ಮತ್ತೆ ಹಿಂದಕ್ಕೆ ಬಂದು ಅಜ್ಜಿಯನ್ನು ಕೇಳಿಯೇ ಬಿಟ್ಟೇ.  ಅಜ್ಜಿ ಏನು ಮಾಡ್ತಾ ಇದ್ದಿಯಾ ಅಂತಾ?  ಅಜ್ಜಿ ಹೇಳಿತು ಹೊಟ್ಟೆಗೆ ಬಟ್ಟಿ ಬಿದ್ದಾಗ ಈ ಹಾಲನ್ನು ಹಚ್ಚಿದರೆ ಬೇಗ ಸರಿ ಹೋಗುತ್ತಪ್ಪಾ......  ಮನೇಲಿ ಮೊಮ್ಮಗನಿಗೆ ಬಟ್ಟಿ ಬಿದ್ದೈತೆ ಅದಕ್ಕೆ ಹಾಲು ತಗೊಂಡು ಹೋಗ್ತಾ ಇದೀನಿ.
ಅಜ್ಜಿಗೆ ಸರಿಸುಮಾರು ಆ ಮರಕ್ಕೆ ವಯಸ್ಸಾದಷ್ಟು ವಯಸ್ಸಾಗಿದೆ ಅನಿಸುತ್ತೆ,  ಆ ರಸ್ತೆಯಲ್ಲಿ ಓಡಾಡಬೇಕಾದರೆ ನಾನು ಗಮನಿಸುತ್ತಿದ್ದೆ ಅಜ್ಜಿ ಕಾಣಿಸುತ್ತಾಳ ಅಂತಾ........ ಆದರೆ ಅಜ್ಜಿ ಮತ್ತೆ ಕಾಣಿಸಲೇ ಇಲ್ಲ.  ಆ ಮರ ನೊಡಿದಾಗಲೆಲ್ಲ ನನಗೆ ಅಜ್ಜಿ ನೆನಪಾಗೋದು, ಈಗ ರಸ್ತೆಯನ್ನು ನೋಡಿ ಅಲ್ಲಿ ಮರ ಇತ್ತು ಎಂದು ನೆನಪಿಸಿಕೊಳ್ಳ ಬೇಕಾಗಿದೆ, ಅಜ್ಜಿ ಸತ್ತಿದ್ಯೋ ಬದುಕಿದ್ಯೋ ಅಂತಾ ತಿಳಿದಿಲ್ಲಾ,  ಆದರೆ ಆ ಮರವನ್ನು ಮಾತ್ರ ತುಂಡು ತುಂಡಾಗಿ ಕತ್ತರಿಸಿ ಕೊಂದಿದ್ದಾರೆ. ಅಜ್ಜಿ ಹಾಗೂ ಮರ ಈ ಪ್ರಕೃತಿಗೆ ಹಾಗೂ ಸಮಾಜಕ್ಕೆ ತುಂಬಾಲಾಗದಷ್ಟು ನಷ್ಟವಾಗಿದೆ ಎಂಬುದು ನನಗೆ ಅನಿಸಿದ್ದು...... ಅಸಹಾಯಕ ತನದಿಂದ ನಿಮ್ಮೊಂದಿಗೆ ಹಂಚಿಕೊಂಡಿದ್ದೆನೆ.

:- ಚಿದು ಯುವ ಸಂಚಲನ

Edited By

Ramesh

Reported By

Ramesh

Comments