ಚೆಕ್ ಡ್ಯಾಮ್ ನಿರ್ಮಿಸಲು ಜಿಲ್ಲಾಧಿಕಾರಿ ಮತ್ತು ಶಾಸಕರಿಂದ ಜಾಗ ಪರಿಶೀಲನೆ

09 Oct 2018 5:09 AM |
302 Report

ತೂಬಗೆರೆ ಹೋಬಳಿಯ ಚಿಲೇನಹಳ್ಳಿ ಬಳಿಯ ಅರಣ್ಯ ಪ್ರದೇಶದಲ್ಲಿ ಹರಿಯುತ್ತಿರುವ ಗೊರವೆ ಹಳ್ಳಕ್ಕೆ ತಡೆಗೋಡೆ ನಿರ್ಮಿಸುವಂತೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮುಖಂಡರು ಶನಿವಾರ ಮನವಿ ಸಲ್ಲಿಸಿದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಕರೀಗೌಡ ಸ್ಥಳ ಪರಿಶೀಲನೆ ನಡೆಸಿದರು. ಸುತ್ತ ಹಳ್ಳಿ, ಜಾಲಗೆರೆಯಲ್ಲಿ ಹುಟ್ಟುವ ಗೊರವೆಹಳ್ಳಾ ನೀರು ಗುಂಡಮಗೆರೆ ಕೆರೆ ಸೇರುತ್ತದೆ, ಅಲ್ಲಿಂದ ನಿರುಪಯುಕ್ತವಾಗಿ ಸಮುದ್ರ ಪಾಲಾಗುತ್ತಿದೆ, ಅಣೆಕಟ್ಟು ನಿರ್ಮಿಸಿದಲ್ಲಿ ಸುತಮುತ್ತಲ10 ಹಳ್ಳಿಗಳ ವ್ಯಾಪ್ತಿಯಲ್ಲಿ ಅಂತರ್ಜಲ ವೃದ್ಧಿಯಾಗುತ್ತದೆ ಎಂದು ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಕಾರ್ಯದರ್ಶಿ ಮುತ್ತೇಗೌಡ ಮನವರಿಕೆ ಮಾಡಿಕೊಟ್ಟರು.

ಡಿಸಿ ಕರಿಗೌಡ ಮಾತನಾಡಿ ಚಿಲೇನಹಳ್ಳಿಯಲ್ಲಿ ಅಣೆಕಟ್ಟು ನಿರ್ಮಿಸಿದಲ್ಲಿ ಸುಮಾರು 5೦೦ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ದೊರೆಯಲಿದ್ದು ಶೀಘ್ರವೇ ವರದಿ ಸಿದ್ಧಪಡಿಸಿ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು, ಅಕ್ಟೋಬರ್ 13 ರಂದು ದೇವನಹಳ್ಳಿಗೆ ಮುಖ್ಯ ಮಂತ್ರಿ ಭೇಟಿ ನೀಡಲಿದ್ದಾರೆ, ಅಷ್ಟರಲ್ಲಿ ಅಣೆಕಟ್ಟು ನಿರ್ಮಾಣ ನೀಲಿನಕ್ಷೆ ತಯಾರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.  ಶಾಸಕ ಟಿ. ವೆಂಕಟರಮಯ್ಯ, ನೀರಾವರಿ ಇಲಾಕೆ ಇಂಜಿನಿಯರ್ ಮಂಜುನಾಥ್, ಶಾಶ್ವತ ನೀರಾವರಿ ಹೋರಾಟ ಸಮಿತಿ ಮುಖಂಡರಾದ ಸುಲೋಚನಮ್ಮ, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೈರೇಗೌಡ, ರೈತ ಸಂಘದ ಎಲ್ಲ ಮುಖಂಡರು, ಓಬಿಸಿ ರಾಜ್ಯ ಕಾರ್ಯದರ್ಶಿ ರಾಜ್ ಕುಮಾರ್, ಕೆಪಿಸಿಸಿ ಸಾಮಾಜಿಕ ಜಾಲತಾಣದ ಸಂಚಾಲಕ ಕಿರಣ್ ವಿ ಗೌಡ, ಯುವ ಮುಖಂಡರಾದ ಶಶಾಂಕ್, ನಿತಿನ್, ಅಶ್ವಥ್ ರೆಡ್ಡಿ, ಎಲ್ಲ ಅಧಿಕಾರಿಗಳು ಹಾಗೂ ಹಲವಾರು ಗ್ರಾಮಗಳ ಮುಖಂಡರು ಹಾಜರಿದ್ದರು.

 

Edited By

Ramesh

Reported By

Ramesh

Comments