ಗುಡ್ ನ್ಯೂಸ್ : ಸರ್ಕಾರಿ ಬಸ್ಸ್ (BMTC,KSRTC) ಪ್ರಯಾಣಿಕರಿಗೆ ಬಿಗ್ ರಿಲೀಫ್ ಕೊಟ್ಟ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ

09 Jul 2018 6:10 PM |
10071 Report

ಕಾಂಗ್ರೆಸ್- ಜೆಡಿಎಸ್ ಮೈತ್ರಿಕೂಟ ಸರ್ಕಾರದ ಮೊದಲನೇಯ ಬಜೆಟ್ ನಲ್ಲಿ ಡೀಸೆಲ್‌ ಮೇಲಿನ ಸೆಸ್‌ ಹೆಚ್ಚಳ ಮಾಡಿದ್ದರೂ ಸದ್ಯಕ್ಕೆ ಪ್ರಯಾಣ ದರ ಏರಿಕೆ ಇಲ್ಲ ಎಂದು ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ಸ್ಪಷ್ಟ ಪಡಿಸಿದ್ದಾರೆ.

ಡೀಸೆಲ್‌ ಮೇಲಿನ ಸೆಸ್‌ ಹೆಚ್ಚಿಸಿದ್ದರಿಂದ ಸಾರಿಗೆ ನಿಗಮಗಳ ಮೇಲೆ ಹೊರೆ ಆಗುತ್ತದೆ. ಆದರೆ, ಈ ಕಾರಣಕ್ಕಾಗಿ ಸದ್ಯಕ್ಕೆ ದರ ಏರಿಕೆ ಮಾಡುವುದಿಲ್ಲ. ಈ ಹೊರೆಯನ್ನು ನಿಗಮಗಳು ಸಮರ್ಪಕವಾಗಿ ನಿಭಾಯಿಸಲಿವೆ ಎಂದು ತಿಳಿಸಿದರು. ನಾಲ್ಕು ನಿಗಮಗಳಿಂದ ಸುಮಾರು ನಾಲ್ಕುವರೆ ಸಾವಿರ ಬಸ್‌ಗಳ ಖರೀದಿಗೆ ಬಜೆಟ್‌ನಲ್ಲಿ ಅನುಮೋದನೆ ಸಿಕ್ಕಿದೆ. ಇದರ ಜತೆಗೆ ಬಿಎಂಟಿಸಿಗೆ 100 ಕೋಟಿ ರೂ. ಸಹಾಯಧನ ನೀಡಿದ್ದಾರೆ. ಬಜೆಟ್‌ ಪೂರ್ವ ಸಭೆಯಲ್ಲಿ ಒಂದು ಸಾವಿರ ಕೋಟಿ ರು. ಅನುದಾನಕ್ಕೆ ಬೇಡಿಕೆ ಇರಿಸಿದ್ದೆವು. ಬಜೆಟ್‌ನಲ್ಲಿ ಖಾಸಗಿ ಬಸ್‌ ಸೇವೆಗಳ ತೆರಿಗೆ ಹೆಚ್ಚಳ ಮಾಡಿದ್ದು, ಇದರಿಂದ ಇಲಾಖೆಗೆ ವಾರ್ಷಿಕ 56 ಕೋಟಿ ರೂ. ಆದಾಯ ಬರಲಿದೆ. ಬೆಂಗಳೂರು ನಗರದಲ್ಲಿ ಎಲೆಕ್ಟ್ರಿಕ್‌ ಬಸ್‌ಗಳನ್ನು ಪರಿಚಯಿಸುವ ಉದ್ದೇಶದಿಂದ ಎಲೆಕ್ಟ್ರಿಕ್‌ ಬಸ್‌ ಖರೀದಿಗೆ ಮುಂದಾಗಿದ್ದೇವೆ. ನಗರದ ವಾರ್ಡ್‌ ಮಟ್ಟದಲ್ಲಿ ಸಭೆ ನಡೆಸಿ ಸಾರ್ವಜನಿಕ ಸಾರಿಗೆ ಬಳಸುವಂತೆ ಮನವಿ ಮಾಡಲಾಗುವುದು. ಸಾರಿಗೆ ಇಲಾಖೆ ಸುಧಾರಣೆಗಾಗಿ ಕೆಲ ಯೋಜನೆಗಳನ್ನು ರೂಪಿಸುವ ಸಂಬಂಧ ಶೀಘ್ರ ಸಭೆ ಕರೆದು ಚರ್ಚಿಸುವುದಾಗಿ ಸಚಿವರು ಹೇಳಿದರು.

Edited By

Shruthi G

Reported By

hdk fans

Comments