ನಾಳೆ ರೈತರ ಈ ಮೊತ್ತದ ಸಾಲಮನ್ನಾ ಮಾಡಲು ಸಿಎಂ ಎಚ್’ಡಿಕೆ ಭರ್ಜರಿ ಸಿದ್ಧತೆ..!ಎಪಿಎಲ್ ಕಾರ್ಡ್ ದಾರರಿಗೆ ಸಬ್ಸಿಡಿ ಕಟ್..!!

04 Jul 2018 6:14 PM |
8793 Report

ಜೆಡಿಎಸ್ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಪ್ರಮುಖ ಭರವಸೆಗಳಲ್ಲಿ ಒಂದಾದ ರೈತರ ಸಾಲ ಮನ್ನಾ ಮಾಡಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಭರ್ಜರಿ ಸಿದ್ಧತೆ ನಡೆಸಿದ್ದಾರೆ.

ಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವರಾಗಿ ನಾಳೆ ಮಂಡಿಸುತ್ತಿರುವ ತಮ್ಮ ಮೊದಲ ಬಜೆಟ್ ನಲ್ಲಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು, ರೈತರ ಸಾಲ ನಿರ್ಧಾರ ಪ್ರಕಟಿಸಲಿದ್ದಾರೆ ಮತ್ತು ಅದಕ್ಕಾಗಿ ಸಂಪನ್ಮೂಲಗಳನ್ನು ಕ್ರೋಢಿಕರಿಸುತ್ತಿದ್ದಾರೆ. ರೈತರ 30 ಸಾವಿರ ಕೋಟಿ ರುಪಾಯಿ ಸಾಲ ಮನ್ನಾ ಮಾಡಲು ಸಿಎಂ ನಿರ್ಧರಿಸಿದ್ದಾರೆ. ಆದರೆ ಇದನ್ನು ಏಕ ಕಾಲಕ್ಕೆ ಜಾರಿಗೊಳಿಸದೆ ಹಂತ ಹಂತವಾಗಿ ಸಾಲ ಮನ್ನಾ ಯೋಜನೆಯನ್ನು ಜಾರಿಗೊಳಿಸುವ ಮೂಲಕ ಸರ್ಕಾರದ ಮೇಲಿನ ಹೊರೆ ಕಡಿಮೆ ಮಾಡಿಕೊಳ್ಳಲು ಕುಮಾರಸ್ವಾಮಿ ಮುಂದಾಗಿದ್ದಾರೆ. ಹೀಗಾಗಿ ಸಾಲದಲ್ಲಿರುವ ರೈತರು ಒಂದಕ್ಕಿಂತ ಹೆಚ್ಚು ಬಜೆಟ್ ಗಾಗಿ ಕಾಯಬೇಕಾಗುತ್ತದೆ ಎಂದು ಸಿಎಂ ಆಪ್ತ ಮೂಲಗಳು ತಿಳಿಸಿವೆ. ಇನ್ನು ಸಾಲಮನ್ನಾಕ್ಕೆ ಹಣ ಹೊಂದಿಸಲು ರೈತ ಬೆಳಕು ಸೇರಿದಂತೆ ಕೆಲ ಯೋಜನೆಗಳನ್ನು ಮಂದೂಡುವ, ಇನ್ನು ಕೆಲವು ಯೋಜನೆಗಳನ್ನು ರದ್ದುಗೊಳಿಸುವ ಸಾಧ್ಯತೆ ಇದೆ. ಎಪಿಎಲ್ ಕಾರ್ಡ್ ದಾರರಿಗೆ ಸಬ್ಸಿಡಿ ದರದಲ್ಲಿ ನೀಡಲಾಗುತ್ತಿರುವ ಆಹಾರ ಧಾನ್ಯಗಳ ದುರ್ಬಳಕೆಯಾಗುತ್ತಿದೆ. ಕಳಪೆ ಗುಣಮಟ್ಟದ್ದು ಎಂಬ ಕಾರಣಕ್ಕೆ ಈ ಆಹಾರ ಧಾನ್ಯಗಳನ್ನು ಯಾರೂ ಖರೀದಿಸುತ್ತಿಲ್ಲ. ಹೀಗಾಗಿ ಅವುಗಳನ್ನು ನೇರವಾಗಿ ಹೋಟೆಲ್ ಗಳಿಗೆ ಸಾಗಿಸಲಾಗುತ್ತಿದೆ. ಇದರ ಸಬ್ಸಿಡಿ ಹಣ ಸದುಪಯೋಗಪಡಿಸಿಕೊಳ್ಳಲು ಸಿಎಂ ಮುಂದಾಗಿದ್ದಾರೆ ಎಂದು ಹಣಕಾಸು ಇಲಾಖೆ ಮೂಲಗಳು ತಿಳಿಸಿವೆ.

 

Edited By

Shruthi G

Reported By

hdk fans

Comments