ಬೆಂಗಳೂರು ನಗರಕ್ಕೆ ಬಜೆಟ್ ನಲ್ಲಿ ಸಿಗಲಿದೆ ಈ ಬಂಪರ್ ಗಿಫ್ಟ್ ಗಳು..!

03 Jul 2018 12:17 PM |
3881 Report

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಸರ್ಕಾರದಿಂದ ಬೆಂಗಳೂರು ನಗರಕ್ಕೆ ಸಿಗಲಿದೆ ಶುಭ ಸುದ್ದಿ. ಏನು ಅಂತೀರಾ? ಹಾಗಾದ್ರೆ ಮುಂದೆ ಓದಿ..

ರೈತರ ಸಾಲಮನ್ನಾದ ಹೊರೆಯನ್ನು ವಿವಿಧ ಕಂಪೆನಿಗಳಿಗೂ ಹಂಚಲು ಚಿಂತನೆ ನಡೆಸಿರುವ ಸಿಎಂ ಎಚ್‌.ಡಿ. ಕುಮಾರಸ್ವಾಮಿ, ಬೆಂಗಳೂರು ನಗರದ ವಿಸ್ತರಣೆಗೆ ಜು.5ರಂದು ಮಂಡಿಸಲಿರುವ ಬಜೆಟ್‌ನಲ್ಲಿ ಆದ್ಯತೆ ನೀಡುವ ನಿರೀಕ್ಷೆಯಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಕನಿಷ್ಠ ಒಂದು ಸ್ಯಾಟಲೈಟ್ ಟೌನ್‌ಷಿಪ್ ನಿರ್ಮಾಣದ ಗುರಿ ಹೊಂದಿರುವ ಕುಮಾರಸ್ವಾಮಿ, ಇದಕ್ಕೆ ಈ ಬಜೆಟ್‌ನಲ್ಲಿಯೇ ಚಾಲನೆ ನೀಡುವ ಸಾಧ್ಯತೆ ಇದೆ. ಬಿಡದಿ ಸಮೀಪ ಸರ್ಕಾರ ಈಗಾಗಲೇ 9 ಸಾವಿರ ಎಕರೆ ಪ್ರದೇಶವನ್ನು ಸ್ವಾಧೀನಪಡಿಸಿಕೊಂಡಿದೆ. ಹೀಗಾಗಿ ಸರ್ಕಾರದಿಂದ ನಿರ್ಮಾಣವಾಗುವ ಮೊದಲ ಟೌನ್‌ಷಿಪ್‌ಗೆ ಬಿಡದಿಯನ್ನು ಆಯ್ದುಕೊಳ್ಳಬಹುದು.

ಇಕ್ಕಟ್ಟಾದ ಬೆಂಗಳೂರನ್ನು ಹಿಗ್ಗಿಸುವ ಭಾಗವಾಗಿ ಸಮೀಪದ ತುಮಕೂರು ಪಟ್ಟಣದಂತೆ ವಿವಿಧೆಡೆಗೆ ಉಪನಗರ ರೈಲ್ವೆ ವ್ಯವಸ್ಥೆಯನ್ನು ವಿಸ್ತರಿಸುವ ಉದ್ದೇಶವೂ ಇದರಲ್ಲಿದೆ. ಜತೆಗೆ ಸುದೀರ್ಘಕಾಲದಿಂದ ನನೆಗುದಿಗೆ ಬಿದ್ದಿರುವ ಹೊರವಲಯದ ವರ್ತಲ ರಸ್ತೆಯ ಕೆಲಸವನ್ನು ತ್ವರಿತಗೊಳಿಸಲು ಬಜೆಟ್‌ನಲ್ಲಿ ಆದ್ಯತೆ ನೀಡುವ ನಿರೀಕ್ಷೆಯಿದೆ. ಬೆಂಗಳೂರಿನಲ್ಲಿ ಪ್ರತಿನಿತ್ಯ ಅಂದಾಜು 11 ಸಾವಿರ ಮೆಟ್ರಿಕ್ ಟನ್ ಕಸ ಉತ್ಪತ್ತಿಯಾಗುತ್ತದೆ. 2031ರ ವೇಳೆಗೆ ಇದರ ಪ್ರಮಾಣ 13,000 ಮೆಟ್ರಿಕ್ ಟನ್‌ಗೆ ತಲುಪಲಿದೆ ಎನ್ನುತ್ತದೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ. ಕಸದ ವಿಲೇವಾರಿ, ಸಂಸ್ಕರಣೆಗೆ ಸರ್ಕಾರ ಹೊಸ ಯೋಜನೆಗಳನ್ನು ರೂಪಿಸುವ ಸಾಧ್ಯತೆ ಇದೆ.

ಬಿಬಿಎಂಪಿಯನ್ನು ಮತ್ತಷ್ಟು ಪರಿಣಾಮಕಾರಿಯನ್ನಾಗಿಸುವ ಸಲುವಾಗಿ ಕೆಲವು ಆಡಳಿತಾತ್ಮಕ ಬದಲಾವಣೆಗಳನ್ನು ತರಬಹುದು. ಬೆಂಗಳೂರು ನಗರವನ್ನು ಕೇಂದ್ರವಾಗಿರಿಸಿಕೊಂಡು ನಗರದ ಅಭಿವೃದ್ಧಿಗೆ ಕೆಲವು ಹೊಸ ಮತ್ತು ಮಹತ್ವದ ಯೋಜನೆಗಳನ್ನು ಘೋಷಿಸುವ ನಿರೀಕ್ಷೆಯಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ರಚನೆ ವೇಳೆ ಬೆಂಗಳೂರಿನೊಂದಿಗೆ ಸೇರಿಸಿಕೊಂಡ 251 ಹಳ್ಳಿಗಳ ಅಭಿವೃದ್ಧಿ ಸರ್ಕಾರ ಹೆಚ್ಚು ಗಮನ ಹರಿಸಲಿದೆ. ನಗರದಲ್ಲಿ ರಿಯಲ್ ಎಸ್ಟೇಟ್ ವಲಯದ ಪ್ರಭಾವ ಕಡಿಮೆಯಾಗಿದೆ. ಮುಖ್ಯವಾಗಿ ನಗರದ ಹೊರವಲಯಗಳಲ್ಲಿ ಸರ್ಕಾರದ ಮಾರ್ಗದರ್ಶಿ ಸೂತ್ರ (ನಿರ್ದಿಷ್ಟ ಪ್ರದೇಶಕ್ಕೆ ಸರ್ಕಾರ ನಿಗದಿಪಡಿಸಿರುವ ಕನಿಷ್ಠ ಆಸ್ತಿ ದರ) ಮತ್ತು ಆಸ್ತಿಯ ಮಾರುಕಟ್ಟೆ ಮೌಲ್ಯಗಳ ನಡುವೆ ಅಗಾಧ ಪ್ರಮಾಣದ ಅಂತರವಿದೆ ಎಂದು ಸರ್ಕಾರ ಅಭಿಪ್ರಾಯ ವ್ಯಕ್ತಪಡಿಸಿದೆ.

ನಗರದ ಹೊರವಲಯಗಳಲ್ಲಿ ಸರ್ಕಾರವು ನಿಗದಿಪಡಿಸಿರುವ ಮಾರ್ಗದರ್ಶಿ ಮೌಲ್ಯದ ಶೇ 50-100 ಪಟ್ಟು ಹೆಚ್ಚು ಮಾರುಕಟ್ಟೆ ಮೌಲ್ಯ ದೊರಕುತ್ತಿದೆ. ಈ ಅಂತರವನ್ನು ತಗ್ಗಿಸುವ ಸಲುವಾಗಿ ಸರ್ಕಾರವು ಹೊರವಲಯದ ಆಸ್ತಿಯ ಮಾರ್ಗದರ್ಶಿ ಮೌಲ್ಯವನ್ನು ಶೇ 10-25ರವರೆಗೆ ಹೆಚ್ಚಿಸಬಹುದು. ಹೈವೇ ಕೃಷಿ ಮಾರುಕಟ್ಟೆಗಳ ಅಭಿವೃದ್ಧಿಗೂ ಸರ್ಕಾರ ಚಿಂತನೆ ನಡೆಸಿದೆ. ರೈತರು ತಾವು ಬೆಳೆದ ಉತ್ಪನ್ನಗಳನ್ನು ನೇರವಾಗಿ ಮಾರಾಟ ಮಾಡಲು ಅನುಕೂಲವಾಗುವಂತೆ ಹೈವೇಗಳಲ್ಲಿ ಅಂಗಡಿ ಮಳಿಗೆಗಳನ್ನು ಸ್ಥಾಪಿಸುವ ಉದ್ದೇಶವಿದೆ. ಈಗಾಗಲೇ ನಗರದ ಹೊರವಲಯ ರಸ್ತೆಗಳಲ್ಲಿ ಕೆಲವು ರೈತರು ಈ ರೀತಿ ಅಂಗಡಿಗಳನ್ನು ನಡೆಸುತ್ತಿದ್ದಾರೆ. ಸರ್ಕಾರವು ಕಟ್ಟಡದಂತಹ ಮೂಲಸೌಕರ್ಯವುಳ್ಳ ಕಟ್ಟಡ ಹಾಗೂ ತೂಕದ ಯಂತ್ರಗಳನ್ನು ಒದಗಿಸಲಿದೆ. ಇದಕ್ಕೆ ಸರ್ಕಾರ ತನ್ನದೇ ಜಾಗಗಳನ್ನು ಬಳಸಿಕೊಳ್ಳಬಹುದು ಅಥವಾ ಖಾಸಗಿಯವರಿಂದ ಖರೀದಿಸಬಹುದು. ಮಧ್ಯವರ್ತಿಗಳ ಹಾವಳಿಯಿಲ್ಲದೆ ರೈತರು ನೇರವಾಗಿ ಮಾರಾಟ ಮಾಡಲು ಇದರಿಂದ ಅನುಕೂಲವಾಗುತ್ತದೆ.

Edited By

Shruthi G

Reported By

hdk fans

Comments