ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಸಿಎಂ ಎಚ್’ಡಿಕೆ ಕೊಟ್ಟ ಈ ಬಂಪರ್ ಕೊಡುಗೆ..!!

29 Jun 2018 5:11 PM |
6755 Report

ನಗರದ ಅರಮನೆ ಮೈದಾನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆಯ ನಿವಾರಣೆಗಾಗಿ ಕೆಂಪೇಗೌಡ ಕೌಶಲ್ಯಾಭಿವೃದ್ಧಿ ವಿಶ್ವವಿದ್ಯಾಲಯ ಸ್ಥಾಪನೆ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.

ರಾಜ್ಯದಲ್ಲಿ ದಿನದಿಂದ ದಿನಕ್ಕೆ ನಿರುದ್ಯೋಗದ ಸಮಸ್ಯೆ ಹೆಚ್ಚಾಗುತ್ತಿದೆ. ಅದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಸಲುವಾಗಿ ಹಾಗೂ ಕೆಂಪೇಗೌಡರ ಹೆಸರು ಚಿರಸ್ಥಾಯಿಯಾಗಿ ಉಳಿಸಲು ಕೌಶಲ್ಯಾಭಿವೃದ್ಧಿ ವಿಶ್ವವಿದ್ಯಾಲಯ ಸ್ಥಾಪಿಸಲು ಚಿಂತನೆ ನಡೆಸಲಾಗಿದೆ. ಅದು ನನ್ನ ಕನಸಾಗಿದೆ ಎಂದು ಹೇಳಿದರು. ಬೆಂಗಳೂರು ನಗರ ಭಾರತಕ್ಕೆ ಮಾತ್ರವಲ್ಲ, ಇಡೀ ವಿಶ್ವಕ್ಕೆ ಪೈಪೋಟಿಯನ್ನೊಡ್ಡುತ್ತಿದೆ. ದೇಶ-ವಿದೇಶಗಳಲ್ಲಿನ ಖ್ಯಾತ ನಗರಗಳ ಪಟ್ಟಿಗೆ ಬೆಂಗಳೂರು ಸೇರ್ಪಡೆಯಾಗಿದೆ. ಅಲ್ಲದೆ, ಇಲ್ಲಿ ಬಂಡವಾಳ ಹೂಡಿಕೆ ಮಾಡಲು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಇಂದು ಇಷ್ಟು ದೊಡ್ಡ ಪ್ರಮಾಣದಲ್ಲಿ ಬೆಂಗಳೂರು ಅಭಿವೃದ್ಧಿಯಾಗಲು ಕೆಂಪೇಗೌಡರು ಬುನಾದಿ ಹಾಕಿಕೊಟ್ಟಿದ್ದಾರೆ. ಅವರನ್ನು ಎಲ್ಲರೂ ಸ್ಮರಿಸಿಕೊಳ್ಳಬೇಕಾಗಿದೆ ಎಂದು ತಿಳಿಸಿದರು.

ವಿಶ್ವಮಟ್ಟದಲ್ಲಿ ಖ್ಯಾತಿ ಗಳಿಸಿರುವ ಬೆಂಗಳೂರು ನಗರದಲ್ಲಿ ಕೇವಲ ಒಂದು ಸಮುದಾಯದವರು ವಾಸ ಮಾಡುತ್ತಿಲ್ಲ. ವಿಭಿನ್ನ ಭಾಷೆ, ಧರ್ಮ, ಜಾತಿಯ ಜನರು ವಾಸಿಸುತ್ತಿದ್ದಾರೆ. ಕೆಂಪೇಗೌಡರು ನಗರವನ್ನು ನಿರ್ಮಾಣ ಮಾಡಿದ ಸಂದರ್ಭದಲ್ಲಿ ತಮ್ಮ ದೂರದೃಷ್ಟಿಯಿಂದ ಎಲ್ಲ ಸಮುದಾಯಗಳಿಗೂ ಸಮಾನವಾದ ನ್ಯಾಯ ಕಲ್ಪಿಸಿಕೊಟ್ಟಿದ್ದಾರೆ. ಹಲವಾರು ಸಮುದಾಯಗಳನ್ನು ರಕ್ಷಿಸಿದ್ದಾರೆ. ಅಲ್ಲದೆ, ಅನೇಕ ಬಡಾವಣೆಗಳನ್ನು ನಿರ್ಮಾಣ ಮಾಡಿರುವುದು ಇಂದಿಗೂ ಪ್ರಸ್ತುತವಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು. ದಿನದಿಂದ ದಿನಕ್ಕೆ ಶರವೇಗದಲ್ಲಿ ಬೆಳೆಯುತ್ತಿರುವ ಬೆಂಗಳೂರು ನಗರದಲ್ಲಿ ಅನೇಕ ಸಾಮಾಜಿಕ ಸಮಸ್ಯೆಗಳನ್ನು ರಾಜಕೀಯ ವ್ಯಕ್ತಿಗಳು ಸೃಷ್ಟಿಸಿದ್ದಾರೆ. ಹಲವಾರು ಕುಟುಂಬಗಳಿಗೆ ಮನೆಗಳಿಲ್ಲ. ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ತಲೆದೋರಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಅಲ್ಲದೆ, ಸಾಕಷ್ಟು ಮೂಲಭೂತ ಸೌಲಭ್ಯಗಳ ಕೊರತೆಯಿದೆ. ಎಲ್ಲ ರೀತಿಯ ಸೌಲಭ್ಯಗಳನ್ನು ಕಲ್ಪಿಸುವುದು ಅಧಿಕಾರದಲ್ಲಿರುವ ಸರಕಾರದ ಜವಾಬ್ದಾರಿಯಿದೆ. ಅದನ್ನು ನನ್ನ ಅಧಿಕಾರದ ಅವಧಿಯಲ್ಲಿ ಪೂರೈಸುತ್ತೇನೆ ಎಂದು ತಿಳಿಸಿದರು.

Edited By

Shruthi G

Reported By

hdk fans

Comments