ಹೊಸ ಸದಸ್ಯನಿಗೆ ಹಳೆಯ ಸಮಸ್ಯೆಗಳ ಸರಮಾಲೆ! ಪರಿಹಾರದ ನಿರೀಕ್ಷೆ?

23 Jun 2018 2:56 PM |
718 Report

ಹೇಮಾವತಿಪೇಟೆಯ ಓವರ್ ಹೇಡ್ ಟ್ಯಾಂಕ್ ಸುತ್ತಲಿನ ಪ್ರದೇಶದಲ್ಲಿ ಅನೇಕ ಸಮಸ್ಯೆಗಳು ಮನೆ ಮಾಡಿವೆ, ರಸ್ತೆ, ಚರಂಡಿ, ಖಾಲಿ ಜಾಗ ಮತ್ತು ಕಸದ ಸಮಸ್ಯೆ ಸ್ಥಳೀಯರಿಗೆ ತಲೆನೋವಾಗಿ ಪರಿಣಮಿಸಿದೆ. ಈ ಹಿಂದೆ ಸದಸ್ಯರಾಗಿ ಆಯ್ಕೆ ಯಾಗಿದ್ದ ಕಾಂಗ್ರೆಸ್ ಪಕ್ಷದ ರಘುರಾಂ ನಿಧನದಿಂದಾಗಿ ಖಾಲಿಯಾಗಿದ್ದ ಸ್ಥಾನಕ್ಕೆ ನಡೆದ ಮರು ಚುನಾವಣೆಯಲ್ಲಿ ಆಯ್ಕೆಯಾಗಿ ಬಂದಿರುವ ಭಾಸ್ಕರ್ ರವರಿಗೆ ಮಾಡಬೇಕಿರುವ ಕೆಲಸಗಳ ಸರಮಾಲೆ ಕಾಯ್ದು ಕುಳಿತಿದೆ, ಆರು ತಿಂಗಳ ಅವಧಿಯಲ್ಲಿ ಆಗಬೇಕಾಗಿರುವ ಕೆಲಸಗಳ ಕುರಿತು ವಾರ್ಡಿನ ಜನತೆ ಭರವಸೆಗಳ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ.

  1.  ಕುಡುಕರ ಹಾವಳಿ....ಹೇಮಾವತಿಪೇಟೆಯ ನಡುವೆ ಇರುವ ಬಾರ್ ಗೆ ಮದ್ಯಪಾನಕ್ಕೆ ಆಗಮಿಸುವ ಕುಡುಕರು ರಸ್ತೆ ಬದಿಗಳಲ್ಲಿ ಬೆಳಿಗ್ಗೆ 4 ರಿಂದಲೇ ಕುಳಿತಿರುತ್ತಾರೆ, ಇದೇ ರಸ್ತೆಯಲ್ಲಿ ಗಂಗಮ್ಮದೇವಿ ದೇವಸ್ಥಾನ, ನಾಗರಕಲ್ಲು ಮತ್ತು ನವಗ್ರಹ ದೇವಸ್ಥಾನ ಇರುವ ಕಾರಣ ಬೆಳಗಿನ ಜಾವ ಮತ್ತು ಸಂಜೆ ಮಹಿಳೆಯರು ಮಕ್ಕಳು ಆಗಮಿಸುವಾಗ ಕುಡುಕರ ಹಾವಳಿ ಎದುರಾಗುತ್ತದೆ, ಬಾರ್ ರಸ್ತೆಯಲ್ಲೇ ಕುಡುಕರು ಮತ್ತು ಸಾರ್ವಜನಿಕರು ರಸ್ತೆಯನ್ನೇ ಶೌಚಾಲಯವನ್ನಾಗಿ ಮಾಡಿಕೊಂಡು ಪಾದಚಾರಿಗಳಿಗೆ ಮುಜುಗರ ಉಂಟು ಮಾಡುತ್ತಾರೆ.

  2.  ಶುದ್ಧ ನೀರಿನ ಘಟಕ...ಈ ಹಿಂದೆ ವಾರ್ಡ್ ಗೆ ನೀರಿನ ಘಟಕಕ್ಕಾಗಿ ಜಾರಿಯಾಗಿದ್ದ ಅನುದಾನ ಹಳೆಯ ಸದಸ್ಯ ರಘುರಾಂ ಇಚ್ಛಾಶಕ್ತಿಯ ಕಾರಣದಿಂದಾಗಿ ಬೇರೆ ವಾರ್ಡ್ ಪಾಲಾಯಿತು ಎಂದು ಸ್ಥಳೀಯ ಮತದಾರರೆ ಆರೋಪ ಮಾಡುತ್ತಾರೆ. ಶುದ್ಧ ನೀರಿನ ಘಟಕ ಒದಗಿಸುವ ಜವಾಬ್ದಾರಿಯೂ ಹೊಸ ಸದಸ್ಯನ ಮೇಲಿದೆ.

  3.  ರಸ್ತೆಗಳು...ಕಳೆದ ಎರಡು ವರ್ಷಗಳಿಂದ ವಾರ್ಡ್ ನಲ್ಲಿ ಆಗಿರುವ ಗುಂಡಿಗಳಿಗೆ ಮುಕ್ತಿ ಸಿಕ್ಕಿಲ್ಲ, ಹಿಂದಿನ ನಗರಸಭಾ ಸದಸ್ಯರ ಗಮನಕ್ಕೆ ತಂದರೂ ಏನೂ ಮಾಡಲಿಲ್ಲ.

  4.  ಯುಜಿಡಿ ಕಾಮಗಾರಿಯ ಅಧೋಗತಿ...ಕಾಮಗಾರಿಗಾಗಿ ಓವರ್ ಹೆಡ್ ಟ್ಯಾಂಕ್ ವೃತ್ತದಲ್ಲಿ ಅಗೆಯಲಾಗಿತ್ತು ನೂತನವಾಗಿ ನಿರ್ಮಿಸಿದ್ದ ಕಾಂಕ್ರೀಟ್ ರಸ್ತೆಯನ್ನೇ ಅಗೆದ ಪರಿಣಾಮ ಸಂಚಾರಕ್ಕೆ ತೊಂದರೆಯಾಗಿತ್ತು, ಕೆಲಸ ಮುಗಿದು ವರ್ಷಗಳೇ ಕಳೆದರೂ ಹಳ್ಳಗಳನ್ನು ಮುಚ್ಚದೆ ಇರುವುದು ವಾಹನ ಸವಾರರಿಗೆ, ಪಾದಚಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.

  5.  ಕಿರಿದಾದ ರಸ್ತೆಗಳು.... ಹೇಮಾವತಿಪೇಟೆ, ಬೆಸ್ತರಪೇಟೆ, ದರ್ಜಿಪೇಟೆಯ ರಸ್ತೆಗಳು ಚಿಕ್ಕ ಚಿಕ್ಕಗಲ್ಲಿಗಳಾಗಿವೆ, ಆದರೆ ಇಂದು ಇದೇ ಗಲ್ಲಿಗಳು ನಗರದ ಹೆಚ್ಚಿನ ಜನಸಂದಣಿಯಿಂದ ಕೂಡಿರುವ ರಸ್ತೆಗಳಾಗಿ ಬದಲಾಗಿವೆ, ಯಾವುದೇ ವಿಸ್ತರಣೆಯ ಭಾಗ್ಯ ದೊರೆಯದೆ ಅಭಿವೃದ್ಧಿಯಿಂದ ವಂಚಿತವಾಗಿವೆ. ಓವರ್ ಹೆಡ್ ಟ್ಯಾಂಕ್ ಇರುವ ರಸ್ತೆಯಲ್ಲಿ ಆಟೋಗಳು ಹಾಗೂ ಕಾರುಗಳ ಹಾವಳಿ ಮಿತಿ ಮೀರಿದೆ, ಇಲ್ಲಿನ ಕಿರಿದಾದ ರಸ್ತೆಯಲ್ಲೇ ದ್ವಿಚಕ್ರ ವಾಹನಗಳ ಪಾರ್ಕಿಂಗ್ ಹಾಗೂ ಆಟೋ ಕಾರುಗಳ ಓಡಾಟದಿಂದ ಪ್ರತಿ ನಿತ್ಯ ಸ್ಥಳೀಯರು ಪಾದಚಾರಿಗಳು ತೊಂದರೆ ಪಡುವುದು ಮಾಮೂಲು, ಕನಿಷ್ಠ ಆಟೋಗಳು ಮತ್ತು ಕಾರುಗಳು ಬೆಳಿಗ್ಗೆ 8 ರಿಂದ ರಾತ್ರಿ 8 ರವರೆಗೆ ಓಡಾಡದಂತೆ ಮಾಡಿದರೆ ಉತ್ತಮ.

ವರದಿ: ಎ.ನಾಗರಾಜು, ವರದಿಗಾರರು, ವಿಜಯಕರ್ನಾಟಕ.

Edited By

Ramesh

Reported By

Ramesh

Comments