ಬಿಜೆಪಿಗೆ ಖಡಕ್ ಟಾಂಗ್ ಕೊಟ್ಟ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ

24 May 2018 11:34 AM |
8137 Report

ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಎಚ್.ಡಿ. ಕುಮಾರಸ್ವಾಮಿಯವರು ಸಿಎಂ ಆಗಿ ತಮ್ಮ ಮೊದಲ ಸುದ್ದಿಗೋಷ್ಠಿಯನ್ನು ನಡೆಸಿದರು. ಸಾಲ ಮನ್ನಾ ಮಾಡಬೇಕು ಎಂಬ ವಿಚಾರದಲ್ಲಿ ಹಿಂದಕ್ಕೆ ಸರಿಯಲ್ಲ, ರೈತರ ಸಾಲ ಮನ್ನಾ ವಿಚಾರದಲ್ಲಿ ಕೆಲವು ಆರ್ಥಿಕ ತಜ್ಞರು ವ್ಯಕ್ತಪಡಿಸಿರುವ ಅಭಿಪ್ರಾಯವನ್ನು ಗಮನಿಸಿದ್ದೇನೆ. ಅವರ ಲೆಕ್ಕಾಚಾರವೇ ಬೇರೆ, ನಾವು ರಾಜಕೀಯವಾಗಿ ಆಲೋಚಿಸುವುದು ಬೇರೆ ಎಂದರು.

ರಾಜ್ಯ ಸರಕಾರದ ಆರ್ಥಿಕ ಪರಿಸ್ಥಿತಿಯನ್ನು ಸುಸ್ಥಿತಿಯಲ್ಲಿಟ್ಟು ರೈತರ 53 ಸಾವಿರ ಕೋಟಿ ರೂ.ಸಾಲ ಮನ್ನಾ ಮಾಡಬೇಕು ಎಂಬ ವಿಚಾರದಲ್ಲಿ ಹಿಂದಕ್ಕೆ ಸರಿಯದೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರೆಯುತ್ತೇನೆ ಈ ವಿಚಾರದಲ್ಲಿ ಮುಂದುವರೆಯುತ್ತೇನೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು. ರೈತರ ಸಾಲವನ್ನು ಯಾವ ರೀತಿಯಲ್ಲಿ ಮನ್ನಾ ಮಾಡಬೇಕು ಎಂಬುದರ ಕುರಿತು ಒಂದು ಬ್ಲೂ ಪ್ರಿಂಟ್ ಸಿದ್ಧಮಾಡಿಕೊಂಡಿದ್ದೇನೆ ಎಂದು ಸಿಎಂ ಕುಮಾರಸ್ವಾಮಿ ಅವರು ಹೇಳಿದರು. ರೈತರ ಸಾಲ ಮನ್ನಾ ಬಗ್ಗೆ ಕೆಲವು ಮಾಧ್ಯಮಗಳಲ್ಲಿ ಕುಮಾರಸ್ವಾಮಿ ಯೂಟರ್ನ್ ಎಂದು ಬಿಂಬಿಸಲಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ರೈತರ ಸಾಲ ಮನ್ನಾ ಮಾಡದಿದ್ದರೆ ರೈತರನ್ನು ದಂಗೆ ಎಬ್ಬಿಸಿ ಹೋರಾಟ ಮಾಡುವುದಾಗಿ ಹೇಳಿದ್ದಾರೆ. ರಾಜ್ಯದ ಯಾರೊಬ್ಬರೂ ಬೀದಿಗಿಳಿದು ಪ್ರತಿಭಟನೆ ನಡೆಸುವಂತಹ ಅಸ್ತ್ರ ನೀಡುವುದಿಲ್ಲ ಎಂದು ಕುಮಾರಸ್ವಾಮಿ ತಿಳಿಸಿದರು.

ರಾಜ್ಯದಲ್ಲಿ ವಿಚಿತ್ರ ಪರಿಸ್ಥಿತಿ ಉದ್ಭವಾಗಿದೆ. ಜನಸಾಮಾನ್ಯರಲ್ಲಿ ಈ ರಾಜಕೀಯ ಮೈತ್ರಿ ಕುರಿತು ಪರ-ವಿರೋಧ ಮಾತನಾಡುವವರು ಇದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿರುವ ಪ್ರತಿಕ್ರಿಯೆಗಳನ್ನು ಗಮನಿಸಿದ್ದೇನೆ. ಈ ಹೊಂದಾಣಿಕೆ ಒಂದು ವರ್ಗದ ಜನರಲ್ಲಿ ಮೂಡಿಸಿರುವ ಅನುಮಾನಗಳು ತಪ್ಪು ಎಂಬುದನ್ನು ನನ್ನ ನಡವಳಿಕೆಗಳ ಮೂಲಕ ಸಾಬೀತುಪಡಿಸುತ್ತೇನೆ ಎಂದು ಅವರು ತಿಳಿಸಿದರು. ಮೈತ್ರಿ ವಿಚಾರವನ್ನು ಪ್ರಸ್ತಾಪಿಸಿ ಬಿಜೆಪಿ ನಾಯಕರು ನೈತಿಕತೆ, ಅನೈತಿಕತೆಯ ಮಾತುಗಳನ್ನಾಡಿದ್ದಾರೆ. ಈ ಸರಕಾರ ಅತ್ಯಂತ ಸುಭದ್ರ, ಸದೃಢವಾಗಿ ನಡೆಯುತ್ತದೆ. ಯಾವುದೆ ಭಿನ್ನಾಭಿಪ್ರಾಯಗಳಿಗೆ ಅವಕಾಶ ನೀಡದೆ, ನಾಡಿನ ಜನತೆಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಈ ಸರಕಾರ ನಡೆಯಲಿದೆ. ನಮ್ಮ ಪಕ್ಷಕ್ಕೆ ಸ್ಪಷ್ಟ ಬಹುಮತ ಬರದಿದ್ದರೆ, ವಿರೋಧ ಪಕ್ಷದಲ್ಲಿ ಕೂರುತ್ತೇನೆ ಎಂದು ಹೇಳಿದ್ದೆ. ಸಾಂದರ್ಭಿಕ ಶಿಶು ನಾನು. ವೈಯಕ್ತಿಕ ಆಸೆ, ತೀರ್ಮಾನಗಳನ್ನು ಬದಿಗಿಡುವ ಅನಿವಾರ್ಯತೆ ನನ್ನ ಮೇಲಿದೆ ಎಂದು ಕುಮಾರಸ್ವಾಮಿ ಸ್ಪಷ್ಟಿಕರಣ ನೀಡಿದರು. ರೈತರನ್ನು ಆರ್ಥಿಕವಾಗಿ ಸದೃಢರನ್ನಾಗಿಸಬೇಕು, ಹಿರಿಯ ನಾಗರಿಕರು, ಶಿಕ್ಷಣ, ವಸತಿ, ವೈದ್ಯಕೀಯ ಕ್ಷೇತ್ರಕ್ಕೆ ನನ್ನದೆ ಆದ ಕಲ್ಪನೆಗಳನ್ನು ಇಟ್ಟುಕೊಂಡಿದ್ದೇನೆ. ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯೂ ನಮ್ಮ ಮುಂದಿದೆ. ಹಿಂದಿನ ಸರಕಾರದ ಜನಪ್ರಿಯ ಕಾರ್ಯಕ್ರಮಗಳನ್ನು ಮುಂದುವರೆಸಿಕೊಂಡು ಹೋಗುವುದರ ಜೊತೆಗೆ, ಹೊಸ ಕಾರ್ಯಕ್ರಮಗಳನ್ನು ಜಾರಿಗೆ ತರುವ ಜವಾಬ್ದಾರಿ ನನ್ನ ಮೇಲಿದೆ ಎಂದರು.

ಇದೆ ಸಂದರ್ಭದಲ್ಲಿ ಬಿಜೆಪಿಗೆ ಟಾಂಗ್ ಕೊಟ್ಟ ಕುಮಾರಸ್ವಾಮಿ ಮೋದಿ ಅಶ್ವಮೇಧದ ಕುದುರೆಯನ್ನು ಕಟ್ಟಿ ಹಾಕಿದ್ದೇವೆ. ಇನ್ನೇನಿದ್ದರೂ ಅಮಿತ್ ಶಾ ಅವರು ಸತ್ತ ಕುದುರೆಯನ್ನು ಮೋದಿ ಬಳಿ ತೆಗೆದುಕೊಂಡು ಹೋಗಬೇಕಷ್ಟೇ' ಎಂದು ವ್ಯಂಗ್ಯವಾಡಿದರು. ಇನ್ನು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಬಿಜೆಪಿ ನಾಯಕರು ನಮ್ಮನ್ನು ಟೀಕಿಸುವುದರಲ್ಲೇ ಕಾಲ ಕಳೆಯುತ್ತಿದ್ದಾರೆ ಎಂದು ಕಿಡಿ ಕಾರಿದರು. ಮಹದಾಯಿ ವಿಚಾರದಲ್ಲಿ ಪ್ರಧಾನಿ ಮೋದಿ ಚುನಾವಣೆ ಪ್ರಚಾರಕ್ಕೆ ಬಂದಾಗ ಭಾಷಣ ಮಾಡಿ ಹೋಗಿದ್ದಾರಲ್ಲ, ಸರಿಪಡಿಸಿ ನೋಡೋಣ ಅಂತ ಕುಮಾರಸ್ವಾಮಿ ಸವಾಲು ಹಾಕಿದ್ದಾರೆ. ಟ್ರಿಬನಲ್ ತೀರ್ಪು ಬಂದ ಬಳಿಕ ಮುಂದಿನ ಹೋರಾಟದ ಬಗ್ಗೆ ನಿರ್ಧರಿಸಲಾಗುವುದು ಎಂದು ಹೇಳಿದ್ದಾರೆ.

Edited By

Shruthi G

Reported By

hdk fans

Comments