'ಕೈ - ಕಮಲ' ಬಿಟ್ಟ ನಾಯಕರು ಜೆಡಿಎಸ್ ಗೆ ಸೇರ್ಪಡೆ....!!

29 Apr 2018 3:24 PM |
7809 Report

ವಿಧಾನಸಭಾ ಚುನಾವಣೆ ಹತ್ತಿರ ಸಮೀಪಿಸುತ್ತಿದಂತೆ ರಾಜ್ಯ ರಾಜಕೀಯ ರಂಗೇರುತ್ತಿದೆ. ಅಲ್ಲದೆ ಪಕ್ಷಾಂತರ ಪರ್ವ ಹೆಚ್ಚುತ್ತಿದ್ದು, ವಿಪಕ್ಷಗಳ ನಾಯಕರು ಜೆಡಿಎಸ್ ನತ್ತ ಮುಖ ಮಾಡುತ್ತಿದ್ದಾರೆ. ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್‌ ಮತ್ತು ಬಿಜೆಪಿ ಆಡಳಿತದಿಂದ ಬೇಸತ್ತ ಮತದಾರ ಜೆಡಿಎಸ್‌ ಕಡೆ ಮುಖ ಮಾಡಿದ್ದು, ಜೆಡಿಎಸ್‌ ಸರ್ಕಾರ ರಚನೆಯಾದ 24 ಗಂಟೆಯಲ್ಲಿ ರೈತರ ರಾಷ್ಟ್ರೀಕೃತ ಬ್ಯಾಂಕ್‌ ಹಾಗೂ ಸಹಕಾರಿ ಸಂಘಗಳ ಸಂಪೂರ್ಣ ಸಾಲಮನ್ನಾ ಮಾಡಲಿದೆ ಎಂದು ಮಾಜಿ ಸಚಿವ ಎಚ್‌.ಡಿ.ರೇವಣ್ಣ ಭರವಸೆ ನೀಡಿದರು.

ಪಟ್ಟಣದ ವೀರಶೈವ ಕಲ್ಯಾಣ ಮಂಟಪದಲ್ಲಿ ನಡೆದ ಬೃಹತ್‌ ಜೆಡಿಎಸ್‌ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಮಾಡಿರುವ ಸಾಲಮನ್ನಾ ಯೋಜನೆ ಬೂಟಾಟಿಕೆಯಿಂದ ಕೂಡಿದೆ ಎಂದು ಛೇಡಿಸಿದರು. ಜೆಡಿಎಸ್‌ ಸರ್ಕಾರ ರಚನೆಯಾದ ಬಳಿಕ ರೈತಾಪಿ ವರ್ಗದ ಸಂಪೂರ್ಣ ಸಾಲಮನ್ನಾ, ಸ್ತ್ರೀ ಸಂಘದ ಸಾಲಮನ್ನಾ ಹಾಗೂ ಸಂಕಷ್ಟದಲ್ಲಿರುವ ಕಾಫಿ ಬೆಳೆಗಾರರ ಸಾಲ ಮನ್ನಾ ಮಾಡಲು ಬದ್ಧವಾಗಿದ್ದು, ರೈತರ, ಶೋಷಿತ ಮತ್ತು ಬಡವರ ಬಗ್ಗೆ ಆಸಕ್ತಿ ಇಲ್ಲದ ಕಾಂಗ್ರೆಸ್‌, ಬಿಜೆಪಿ ದೇಶದಲ್ಲಿ ಸ್ವಾರ್ಥದಿಂದ ತುಂಬಿದ ಆಡಳಿತ ನಡೆಸುತ್ತಿದ್ದಾರೆ ಎಂದು ವಾಗ್ಧಾಳಿ ನಡೆಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಪುಕ್ಕಟ್ಟೆ ಪಡಿತರ ನೀಡುವ ಬಗ್ಗೆ ಹೇಳುವ ಇವರು ದೇಶಕ್ಕೆ ಈ ಯೋಜನೆ ಜಾರಿ ಮಾಡಿದ್ದು ಯಾರು? ಎಂಬ ಬಗ್ಗೆ ತಿಳಿದಿಲ್ಲವೇ, 30 ಕೆಜಿ ಯಿಂದ 7 ಕೆಜಿ ನೀಡಿದ ಕಾಂಗ್ರೆಸ್‌ ಭ್ರಷ್ಟ ಸರ್ಕಾರಕ್ಕೆ ನಾಚಿಕೆಯಾಗಬೇಕು, ನಮ್ಮ ಸರ್ಕಾರ ರಚನೆಯಾದ ಬಳಿಕ ಉಚಿತ 20 ಕೆಜಿ ಪಡಿತರ ನೀಡಲಾಗುತ್ತದೆ. ಅಂಗವಿಕಲರು ಮತ್ತು ವೃದ್ಧರ ಬಗ್ಗೆ ಹೆಚ್ಚು ಆಸಕ್ತಿ ವಹಿಸಿದೆ, ಪ್ರತ್ಯೇಕ ಅನುದಾನ ನೀಡುವ ವ್ಯವಸ್ಥೆಗೆ ಜೆಡಿಎಸ್‌ ಪ್ರಾಮಾಣಿಕ ಪ್ರಯತ್ನ ಮಾಡುತ್ತದೆ ಎಂದರು.

ಲೋಕಾಯುಕ್ತ ಸಂಸ್ಥೆಯನ್ನು ಪೂರ್ಣ ನಿಷ್ಕ್ರಿಯ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಲವು ಪ್ರಕರಣಗಳನ್ನು ಮುಚ್ಚಿ ಹಾಕಿದ್ದಾರೆ, ಕಾಂಗ್ರೆಸ್‌ ಸರ್ಕಾರದ ಪ್ರತಿ ಮಂತ್ರಿಗಳು ಒಂದಲ್ಲ ಒಂದು ಹಗರಣದಲ್ಲಿ ಸಿಲುಕಿದ್ದಾರೆ, ಅವರಿಗೆ ಧೈರ್ಯವಿದ್ದರೆ ತಮ್ಮ ಖಾತೆಯನ್ನು ತನಿಖೆ ನಡೆಸಿ ಎಂದು ಹೇಳಲಿ ಎಂದು ಸವಾಲ್‌ ಹಾಕಿದರು. ನಾನು ಇಂಧನ ಸಚಿವರಾಗಿದ್ದ ವೇಳೆ ತನಿಖೆ ನಡೆಸಿ ಎಂದ ಮೊದಲ ಮಂತ್ರಿಯಾಗಿದ್ದು, ರಾಜ್ಯ ಮತ್ತು ಹಾಸನ ಜಿಲ್ಲೆಯ ಸಮಗ್ರ ಅಭಿವೃದ್ಧಿ ನಮ್ಮ ಗುರಿಯಾಗಿದೆ, ಮುಂದಿನ ದಿನದಲ್ಲಿ ಬೇಲೂರಿನ ಸಮಗ್ರ ಕುಡಿಯುವ ನೀರಿಗೆ ಕಾಯಕಲ್ಪ ನೀಡಲಾಗುತ್ತದೆ ಎಂದು ಭರವಸೆ ನೀಡಿದರು. ಬಿಜೆಪಿ ಮುಖಂಡರಾದ ಬಲ್ಲೇನಹಳ್ಳಿ ರವಿಕುಮಾರ್‌, ಕನಾಯ್ಕನಹಳ್ಳಿ ಮಹಾದೇವ್‌, ಸೋಂಪುರ ಧರಣಿ, ಸೇರಿದಂತೆ ಸುಮಾರು 500ಕ್ಕೂ ಹೆಚ್ಚು ಬಿಜೆಪಿ ಮತ್ತು ಕಾಂಗ್ರೆಸ್‌ ಕಾರ್ಯಕರ್ತರು ಜೆಡಿಎಸ್‌ ಸೇರ್ಪಡೆಯಾದರು. ಜೆಡಿಎಸ್‌ ಅಭ್ಯರ್ಥಿ ಕೆ.ಎಸ್‌.ಲಿಂಗೇಶ್‌, ತಾಲೂಕು ಜೆಡಿಎಸ್‌ ಅಧ್ಯಕ್ಷ ತೊ.ಚ.ಅನಂತಸುಬ್ಬರಾಯ, ಕಾರ್ಯದರ್ಶಿ ಸಿ.ಎಚ್‌.ಮಹೇಶ್‌, ಯುವ ಅಧ್ಯಕ್ಷ ಉಮೇಶ್‌, ಎಚ್‌ಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ಎಂ.ಎ.ನಾಗರಾಜು, ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಬಿ.ಡಿ.ಚಂದ್ರೇಗೌಡ, ಪುರಸಭೆ ಅಧ್ಯಕ್ಷೆ ಭಾರತಿ, ಸದಸ್ಯರಾದ ಟಿ.ಎ.ಶ್ರೀನಿಧಿ, ಗಿರೀಶ್‌ ಬಿಎಸ್‌ಪಿ ಮುಖಂಡರಾದ ಗಂಗಾಧರ್‌ ಬಹುಜನ್‌, ಎನ್‌.ಯೊಗೀಶ್‌, ಜೆಡಿಎಸ್‌ ಮುಖಂಡಾದ ಬಿ.ಸಿ.ಮಂಜುನಾಥ್‌, ಲತಾಮಂಜೇಶ್ವರಿ, ಲತಾದಿಲೀಪ್‌, ಕಮಲ, ಎಚ್‌.ಎಂ.ದಯಾನಂದ್‌, ತಮ್ಮಣ್ಣಗೌಡ ದೊಡ್ಡವೀರೇಗೌಡ, ಭೋಜೆಗೌಡ, ಜಿ.ಟಿ.ಇಂದಿರಾ, ಭುವನೇಶ್‌ ಮುಂತಾದವರು ಹಾಜರಿದ್ದರು.

 

Edited By

Shruthi G

Reported By

hdk fans

Comments