ಜೆಡಿಎಸ್ 2ನೇ ಪಟ್ಟಿ ಬಿಡುಗಡೆಗೆ ಸಜ್ಜು…..ಇಲ್ಲಿದೆ ಅಭ್ಯರ್ಥಿಗಳ ಸುಳಿವು

19 Apr 2018 12:52 PM |
16463 Report

ಕರ್ನಾಟಕ ವಿಧಾನಸಭೆ ಚುನಾವಣೆಯ ಜೆಡಿಎಸ್ ಅಭ್ಯರ್ಥಿಗಳ 2 ನೇ ಪಟ್ಟಿ ನಾಳೆ ಬಿಡುಗಡೆಯಾಗುವ ಸಾಧ್ಯತೆಗಳಿವೆ. ರಾಷ್ಟ್ರೀಯ ಪಕ್ಷಗಳಿಗಿಂತ ಮೊದಲೇ 126 ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದ ಜೆಡಿಎಸ್ 2 ನೇ ಪಟ್ಟಿಯನ್ನು ಅಂತಿಮಗೊಳಿಸುತ್ತಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳಿಂದ ಟಿಕೆಟ್ ವಂಚಿತ ಮುಖಂಡರು ಜೆಡಿಎಸ್ ಸೇರುತ್ತಿದ್ದಾರೆ.

ಜೆಡಿಎಸ್ ಸೇರಿರುವ ಬಹುತೇಕ ಮಂದಿ ವಲಸಿಗರಿಗೆ ಟಿಕೆಟ್ ನೀಡುವ ಖಾತರಿಯನ್ನು ಕೂಡ ಈಗಾಗಲೇ ನೀಡಲಾಗಿದೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ. ಪಕ್ಷದ ಹಾಲಿ ಶಾಸಕರು ಸೇರಿದಂತೆ 126 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಲಾಗಿತ್ತು. ಮೊದಲ ಪಟ್ಟಿಯಲ್ಲಿ ಟಿಕೆಟ್ ನೀಡಿದ್ದರೂ ಸಕ್ರಿಯವಾಗಿ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಳ್ಳದ ಅಭ್ಯರ್ಥಿಗಳ ಬದಲಾವಣೆ ಮಾಡಲು ಜೆಡಿಎಸ್ ವರಿಷ್ಠರು ನಿರ್ಧರಿಸಿದ್ದಾರೆ. ಹೀಗಾಗಿ ಮೊದಲ ಪಟ್ಟಿಯಲ್ಲೂ ಕೆಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಬದಲಾವಣೆಯಾಗುವ ಸಾಧ್ಯತೆಗಳಿವೆ. 224 ವಿಧಾನಸಭಾ ಕ್ಷೇತ್ರಗಳ ಪೈಕಿ ಈಗಾಗಲೇ ಬಿಎಸ್‍ಪಿಯೊಂದಿಗೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ 20 ಕ್ಷೇತ್ರಗಳನ್ನು ಬಿಟ್ಟು ಕೊಟ್ಟಿದೆ.

ಬಾಕಿ ಉಳಿದಿರುವ 78 ವಿಧಾನಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆ ಅಂತಿಮ ಹಂತ ತಲುಪಿದ್ದು, ನಾಳೆ ಬಿಡುಗಡೆಯಾಗುವ ಸಾಧ್ಯತೆಗಳಿವೆ. ಈ ಪಟ್ಟಿಯಲ್ಲಿ ಇತ್ತೀಚೆಗೆ ಜೆಡಿಎಸ್‍ಗೆ ಸೇರ್ಪಡೆಯಾದ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರಿಗೆ ಸ್ಥಾನ ದೊರೆಯುವ ಸಾಧ್ಯತೆ ನಿಚ್ಚಳವಾಗಿದೆ. ಬೆಂಗಳೂರಿನ ಚಿಕ್ಕಪೇಟೆಗೆ ಡಾ.ಹೇಮಚಂದ್ರಸಾಗರ್, ಶಾಂತಿನಗರಕ್ಕೆ ಶ್ರೀಧರ್‍ರೆಡ್ಡಿ, ಚಾಮರಾಜಪೇಟೆಗೆ ಅಲ್ತಾಫ್‍ಖಾನ್, ಸಿ.ವಿ.ರಾಮನ್‍ನಗರಕ್ಕೆ ಪಿ.ರಮೇಶ್, ರಾಜರಾಜೇಶ್ವರಿನಗರಕ್ಕೆ ಜಿ.ಎಚ್.ರಾಮಚಂದ್ರ, ರಾಯಚೂರು ಗ್ರಾಮೀಣಕ್ಕೆ ರವಿ ಪಾಟೀಲ್, ತರೀಕೆರೆಗೆ ಜಿ.ಎಚ್.ಶ್ರೀನಿವಾಸ್, ಬಸವಕಲ್ಯಾಣಕ್ಕೆ ಎಂ.ಜಿ.ಮೂಳೆ ಅವರಿಗೆ ಟಿಕೆಟ್ ನೀಡುವ ಸಾಧ್ಯತೆಗಳು ಇವೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಇನ್ನು ಹಲವು ಮಂದಿ ಕಾಂಗ್ರೆಸ್-ಬಿಜೆಪಿಯಿಂದ ಟಿಕೆಟ್ ವಂಚಿತ ಅತೃಪ್ತರು ಜೆಡಿಎಸ್ ಸೇರುವ ಹಾದಿಯಲ್ಲಿದ್ದು, ಅವರಲ್ಲೂ ಕೆಲವರಿಗೆ ಜೆಡಿಎಸ್ ಟಿಕೆಟ್ ದೊರೆಯುವ ಸಾಧ್ಯತೆಗಳಿವೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.

Edited By

Shruthi G

Reported By

hdk fans

Comments