ಜೆಡಿಎಸ್ ಭದ್ರ ಕೋಟೆಯಾಗಿರುವ ಹಾಸನದ ಜನತೆ ಮುಂದೆ ರಾಹುಲ್ ಗೆ ತಿರುಗೇಟು ಕೊಟ್ಟ ಎಚ್ ಡಿಕೆ

03 Apr 2018 12:53 PM |
4128 Report

ರಾಹುಲ್ ಗಾಂಧಿ ಜಿಲ್ಲೆಯ ಜೆಡಿಎಸ್ ಭದ್ರ ಕೋಟೆಗೆ ಬಂದು, ಇಲ್ಲಿನ ಜನತೆಯನ್ನು ಕೆಣಕಿ ಹೋಗಿದ್ದಾರೆ. ಜೆಡಿಎಸ್ ಅಧಿಕಾರಕ್ಕೆ ಬಂದರೆ ರೈತರ ಎಲ್ಲಾ ಬ್ಯಾಂಕುಗಳ ಸಾಲಮನ್ನಾದ ಜೊತೆಗೆ ಹೊಸ ಕೃಷಿ ನೀತಿ ಜಾರಿಗೆ ತರುವುದಾಗಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ ಜೆಡಿಎಸ್ ಪಕ್ಷದ ವಿಕಾಸ ಪರ್ವ ಸಮಾವೇಶ ಉದ್ದೇಶಿಸಿ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು, ಎರಡು ರಾಷ್ಟ್ರೀಯ ಪಕ್ಷಗಳು ನಾಡಿನ ಜನತೆ ಬಗ್ಗೆ ಯಾವುದೇ ಚರ್ಚೆ ಮಾಡಲಿಲ್ಲ. ಕೆಲ ದಿನಗಳ ಹಿಂದೆ ಹಾಸನಕ್ಕೆ ರಾಹುಲ್ ಗಾಂಧಿ ಬಂದು ಕೇವಲ ನಮ್ಮ ಪಕ್ಷವನ್ನು ಟೀಕೆ ಮಾಡಿ ಹೋದರು. ಇವರಿಗೆ ನಮ್ಮ ಬಗ್ಗೆ ಮಾತನಾಡಲು ಸಮಯವಿದೆ. ಆದರೆ ರೈತರ ಬಗ್ಗೆ ಯಾವುದೇ ಪ್ರಸ್ತಾಪ ಮಾಡಲಿಲ್ಲ ಎಂದು ದೂರಿದರು. ಜೆಡಿಎಸ್ ಭದ್ರ ಕೋಟೆ ಎಂಬ ಲೇಬಲ್ ಇರುವ ಹಾಸನದಲ್ಲಿನ ಜನತೆಯನ್ನು ಕೆಣಕಿ ಹೋಗಿದ್ದಾರೆ. ಸೋಮವಾರ ನಡೆದ ಐತಿಹಾಸಿಕ ಸಮಾವೇಶದ ಮೂಲಕವೇ ಇದಕ್ಕೆ ಉತ್ತರ ನೀಡಿರುವ ಜನತೆ ಹಾಸನ ಜಿಲ್ಲೆಯ ಏಳು ಕ್ಷೇತ್ರದಲ್ಲೂ ನಮ್ಮನ್ನು ಗೆಲ್ಲಿಸಲಿದ್ದಾರೆ ಎಂದು ಭರವಸೆಯ ಮಾತನಾಡಿದರು.

ಬಿಜೆಪಿ ಹಾಗು ಕಾಂಗ್ರೆಸ್ ಪಕ್ಷಗಳು ತಮ್ಮ ಸ್ವಾರ್ಥಕ್ಕಾಗಿ ಪ್ರಚಾರ ನಡೆಸಿವೆಯೇ ಹೊರತು ಎಲ್ಲಿಯೂ ಕೂಡ ಜನಹಿತವನ್ನು ಪ್ರದರ್ಶಿಸಲಿಲ್ಲ. ರಾಜ್ಯ ಪ್ರವಾಸ ಮಾಡಿದ ರಾಹುಲ್ ಗಾಂಧಿಗೆ ಇಲ್ಲಿಯ ಆಲೂ, ತೆಂಗು, ಶುಂಠಿ, ಅರಿಶಿಣ, ಕಾಫೀ, ಏಲಕ್ಕಿ ಇತ್ಯಾದಿ ಬೆಳೆಗಾರರ ಸಮಸ್ಯೆಗಳು ಕಾಣಲೇ ಇಲ್ಲ ಎಂದು ಟೀಕಿಸಿದ ಅವರು, 2018 ಮೇ 14 ರ ನಂತರ ರಾಜ್ಯದಲ್ಲಿ ಜನತಾದಳದ ಜನಪರ ಸರಕಾರ ಆರಂಭಗೊಳ್ಳಲಿದೆ. ಮುಂದೆ ಕೇವಲ ಸಾಲ ಮನ್ನಾ ಅಷ್ಟೇ ಅಲ್ಲ, ಬೆಳೆಹಾನಿಯಾದ ರೈತರ ಸಂಕಷ್ಟಕ್ಕೆ ಸೂಕ್ತ ಪರಿಹಾರ, ಗರ್ಭಿಣಿಯರಿಗೆ, ವಯೋವೃದ್ದರಿಗೆ ಆರ್ಥಿಕ ನೆರವು ನೀಡುವ ವಿಚಾರ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೆ ತರುವ ಪ್ರಯತ್ನ ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಜಿಲ್ಲೆಯ ಪುಣ್ಯ ಭೂಮಿಯಲ್ಲಿ ಜನ್ಮ ತಾಳಿರುವ ನಾನು, ಈ ನಾಡಿಗೆ ಸೇವೆ ಸಲ್ಲಿಸುವುದು ಕರ್ತವ್ಯ. ತಂದೆ ಹೆಚ್.ಡಿ. ದೇವೇಗೌಡ ಮತ್ತು ತಾಯಿ ಚೆನ್ನಮ್ಮರ ಮನದಾಸೆಯನ್ನು ಈಡೇರಿಸುವ ಮಹಾದಾಸೆ ನನಗಿದೆ. ಹೆಚ್.ಡಿ ದೇವೇಗೌಡರ 60 ವರ್ಷದ ಜಿಲ್ಲಾ ರಾಜಕಾರಣದಲ್ಲಿ ಸುದೀರ್ಘವಾಗಿ ಅವರನ್ನು ಆಶೀರ್ವದಿಸಿದ್ದೀರಿ. ಜಿಲ್ಲೆಯ ಅಭಿವೃದ್ದಿ ವಿಚಾರದಲ್ಲಿ ಸಹೋದರ ರೇವಣ್ಣ ಕಂಡ ಕನಸು ಅರ್ಧದಷ್ಟು ಈಡೇರಿದೆ. ಇನ್ನು ಉಳಿದಿರುವ ಕೆಲಸಕ್ಕೆ ಮತ್ತೆ ನೀವು 113 ಮ್ಯಾಜಿಕ್ ಸಂಖ್ಯೆಗೆ ಜಿಲ್ಲೆಯ 7 ಸಂಖ್ಯೆಯನ್ನು ಕೊಡುಗೆಯಾಗಿ ನೀಡಬೇಕು ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು. ನಂತರ 2018 ರ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿ ಘೋಷಣೆ ಮಾಡಿರುವಂತೆ, ಹಾಸನ ಜಿಲ್ಲೆಯಲ್ಲಿ ಹೊಳೆನರಸೀಪುರ ಕ್ಷೇತ್ರದಲ್ಲಿ ಹೆಚ್.ಡಿ. ರೇವಣ್ಣ, ಅರಸೀಕೆರೆಯಲ್ಲಿ ಕೆ.ಎಂ. ಶಿವಲಿಂಗೇಗೌಡ, ಅರಕಲಗೂಡಿನಲ್ಲಿ ಎ.ಟಿ. ರಾಮಸ್ವಾಮಿ, ಹಾಸನದಲ್ಲಿ ಹೆಚ್.ಎಸ್. ಪ್ರಕಾಶ್, ಚನ್ನರಾಯಪಟ್ಟಣದಲಿ ಚಿ.ಎನ್. ಬಾಲಕೃಷ್ಣ, ಸಕಲೇಶಪುರದಲ್ಲಿ ಹೆಚ್.ಕೆ. ಕುಮಾರಸ್ವಾಮಿ, ಬೇಲೂರಿನಲ್ಲಿ ಲಿಂಗೇಶ್ ಹೆಸರನ್ನು ಬಹಿರಂಗಪಡಿಸಿದರು.

Edited By

Shruthi G

Reported By

hdk fans

Comments