ನಾಗಮಂಗಲ ಕ್ಷೇತ್ರದಲ್ಲಿ ಬಂಡಾಯ ಶಾಸಕ ಚೆಲುವರಾಯಸ್ವಾಮಿಗೆ ಸೆಡ್ಡು ಹೊಡೆದ ಜೆಡಿಎಸ್‍

31 Mar 2018 11:20 AM |
20859 Report

ಜೆಡಿಎಸ್‍ನಿಂದ ಬಂಡಾಯ ಎದ್ದು ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಹಕಾರದಿಂದ ಕಾಂಗ್ರೆಸ್‍ ಸೇರ್ಪಡೆಯಾಗಿರುವ ಚೆಲುವರಾಯಸ್ವಾಮಿ ಅವರಿಗೆ ಅವರ ಸ್ವಕ್ಷೇತ್ರ ನಾಗಮಂಗಲದಲ್ಲೇ ಜೆಡಿಎಸ್‍ನಿಂದ ಕುಮಾರಪರ್ವ ಬೃಹತ್ ಸಮಾವೇಶವನ್ನು ಮಾಡುವ ಮೂಲಕ ದೇವೇಗೌಡರು ಮತ್ತು ಕುಮಾರಸ್ವಾಮಿ ತಮ್ಮ ಶಕ್ತಿಯನ್ನು ತೋರಿಸಿದ್ದಾರೆ.

ಸಮಾವೇಶಕ್ಕೆ ಬೃಹತ್ ಸಂಖ್ಯೆಯಲ್ಲಿ ಜನರನ್ನು ಸೇರಿಸುವ ಮೂಲಕ ಜೆಡಿಎಸ್‍ನ ಭದ್ರಕೋಟೆಯನ್ನು ಯಾರಿಂದಲೂ ಛಿದ್ರ ಮಾಡಲು ಸಾಧ್ಯವಿಲ್ಲ ಎಂಬ ಸಂದೇಶವನ್ನು ಬಂಡಾಯ ಶಾಸಕರಿಗೆ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ನೇರವಾಗಿ ರವಾನಿಸಿದ್ದಾರೆ. ಚೆಲುವರಾಯಸ್ವಾಮಿ ವಿರುದ್ಧ ಹರಿಹಾಯ್ದ ದೇವೇಗೌಡರು, 'ಹಣದಾಸೆಗಾಗಿ ತಮ್ಮನ್ನು ಮಾರಿಕೊಂಡು, ಜೆಡಿಎಸ್‌ಗೆ ಮೋಸ ಮಾಡಿ ಹೋಗಿರುವ ಮುಂದಿನ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಈ ಕ್ಷೇತ್ರದ ಜನತೆಗೆ ವಂಚನೆ ಹಾಗೂ ದ್ರೋಹ ಎಸಗಿದ್ದಾರೆ ಅವರಿಗೆ ತಕ್ಕಪಾಠ ಕಲಿಸುವಂತೆ' ಕರೆ ನೀಡಿದರು.ಜೆಡಿಎಸ್ ಪಕ್ಷದ ಬೆನ್ನಿಗೆ ಚೂರಿ ಹಾಕಿದವರ ಬಗ್ಗೆ ಮಾತನಾಡಿ ಪ್ರಯೋಜನವಿಲ್ಲ. ಈ ಬಾರಿ ಕಾಂಗ್ರೆಸ್ ಸರಕಾರ ಕಿತ್ತೊಗೆಯಲು ಜನರು ತೀರ್ಮಾನಿಸಿದ್ದಾರೆ. ಅದಕ್ಕೆ ಈ ಸಮಾವೇಶದಲ್ಲಿ ಸೇರಿರುವ ಜನಸಾಗರವೇ  ಸಾಕ್ಷಿ. ಸುರೇಶ್‍ಗೌಡ ಹಣವಿಲ್ಲದೆ ಪರದಾಡುತ್ತಿದ್ದರೆ, 50 ಕೋಟಿ ಆದರೂ ಖರ್ಚು ಮಾಡಿ ಗೆದ್ದು ಬರ್ತೀನಿ ಅಂತ ಚಲುವರಾಯಸ್ವಾಮಿ ಬೀಗುತ್ತಿದ್ದಾರೆ. ಆಸೆ, ಆಮಿಷಕ್ಕೆ ಒಳಗಾಗದೆ ಸುರೇಶ್‍ಗೌಡರನ್ನು ಗೆಲ್ಲಿಸಿ ಎಂದು ಅವರು ಕಾರ್ಯಕರ್ತರಿಗೆ ಕರೆ ನೀಡಿದರು.ಕೆ.ಸುರೇಶ್‍ಗೌಡ ಮಾತನಾಡಿ, ನಾನು ಐಶ್ವರ್ಯ, ಅಂತಸ್ತು ಕಳೆದುಕೊಂಡಿರಬಹುದು. ಆದರೆ, ಜನರ ಪ್ರೀತಿ, ವಿಶ್ವಾಸ ಕಳೆದುಕೊಂಡಿಲ್ಲ. ಈ ಬಾರಿ ಗೆಲ್ಲಿಸುವ ಮೂಲಕ ದರ್ಪದಿಂದ ಮೆರೆಯುತ್ತಿರುವವರಿಗೆ ಬುದ್ದಿ ಕಲಿಸಬೇಕು ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು. ಈಗಾಗಲೇ ಮಂಡ್ಯ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಕುಮಾರ ಪರ್ವ ಬೃಹತ್ ಸಮಾವೇಶ ನಡೆಸಲು ತೀರ್ಮಾನಿಸಲಾಗಿದ್ದು, ಇದುವರೆಗಿನ ಸಮಾವೇಶಗಳು ಯಶಸ್ವಿಯಾಗಿದ್ದು, ಬಂಡಾಯ ಶಾಸಕರ ರಾಜಕೀಯ ಜೀವನಕ್ಕೆ ಅಂತ್ಯ ಹಾಡಲು ಮುಂದಾಗಿದ್ದಾರೆ.

Edited By

Shruthi G

Reported By

hdk fans

Comments