ಜೆಡಿಎಸ್‌- ಬಿಎಸ್ಪಿ ಪಕ್ಷದ ಜಂಟಿ ಸಭೆಯಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಬಗ್ಗೆ ಸುಳಿವು..!!

13 Mar 2018 5:48 PM |
520 Report

ಜೆಡಿಎಸ್‌- ಬಿಎಸ್ಪಿ ಮೈತ್ರಿಯ ಬಳಿಕ ರಾಜ್ಯದಲ್ಲಿ ಬಿಎಸ್ಪಿಗೆ 20 ಸೀಟುಗಳನ್ನು ಬಿಟ್ಟುಕೊಡಲಾಗಿದೆ. ಈ ಪೈಕಿ ಬೀದರ್‌ನ ಉತ್ತರ ವಿಧಾನಸಭಾ ಕ್ಷೇತ್ರವನ್ನು ಬಿಎಸ್ಪಿಗೆ ನೀಡಲಾಗಿದೆ. ಈ ಕ್ಷೇತ್ರದಲ್ಲಿ ಪಕ್ಷದ ವರಿಷ್ಠರಾದ ಮಾಯಾವತಿ ಅವರ ಸೂಚನೆ ಮೇರೆಗೆ ನಾನೇ ಸ್ಪರ್ಧಿಸಲಿದ್ದೇನೆ ಎಂದು ಬಹುಜನ ಸಮಾಜ ಪಕ್ಷದ ರಾಜ್ಯ ಸಂಚಾಲಕ ಮಾರಸಂದ್ರ ಮುನಿಯಪ್ಪ ಹೇಳಿದರು.

ಬೀದರ್‌ನಲ್ಲಿ ನಡೆದ ಜೆಡಿಎಸ್‌- ಬಿಎಸ್ಪಿ ಪಕ್ಷದ ಜಂಟಿ ಸಭೆಯಲ್ಲಿ ಮಾತನಾಡಿದ ಅವರು,ಬೀದರ್‌ ಉತ್ತರ ಕ್ಷೇತ್ರದಿಂದ ಬಿಎಸ್ಪಿಯ ಮಾಜಿ ಶಾಸಕ ಸೈಯದ್‌ ಝುಲ್ಫೇಕಾರ್‌ ಹಾಷ್ಮಿ ಅವರು ಬಿಎಸ್ಪಿಯಿಂದ ಸ್ಪರ್ಧಿಸುವುದಾಗಿ ಹೇಳಿದ್ದರು. ಜತೆಗೆ, ಇಂದಿನ ಸಭೆಗೆ ಅವರು ಗೈರಾಗಿದ್ದಾರಲ್ಲ ಎನ್ನುವ ಪ್ರಶ್ನೆಗೆ ಹಾಗೇನಿಲ್ಲ, ಹಾಷ್ಮಿ ವೈಯಕ್ತಿಕ ಕೆಲಸಗಳಿಂದಾಗಿ ಇಂದು ಗೈರಾಗಿದ್ದಾರೆ. ನಾನು ಅವರೊಂದಿಗೆ ಮಾತನಾಡಿದ್ದೇನೆ. ಹಾಷ್ಮಿ ಅವರು ಬೀದರ್‌ ಉತ್ತರ ಕ್ಷೇತ್ರದ ಅಭ್ಯರ್ಥಿಯಾಗಲಿದ್ದಾರೆ ಎಂಬ ವಿಷಯ ಎಲ್ಲಿಯೂ ಪ್ರಸ್ತಾಪವಾಗಿರಲಿಲ್ಲ. ಇದೀಗ ಬಿಎಸ್ಪಿ ಹೈ ಕಮಾಂಡ್‌ ಸೂಚಿಸಿರುವ ಹಿನ್ನೆಲೆ ಸ್ಪರ್ಧಿಸುವೆ ಎಂದರು.

ಈ ಕುರಿತು ಬೀದರ್‌ ಉತ್ತರ ಕ್ಷೇತ್ರದ ಬಿಎಸ್ಪಿ ಕಾರ‍್ಯಕರ್ತರೊಂದಿಗೆ ಚರ್ಚಿಸಿದ್ದೀರಾ ಎಂಬ ಪ್ರಶ್ನೆಗೆ ಹೌದು ಚರ್ಚಿಸಲಾಗಿದೆ ಎಂದೂ ಮುನಿಯಪ್ಪ ಹೇಳಿದರು. ಹುಮನಾಬಾದ್‌ ಕ್ಷೇತ್ರದಲ್ಲಿ ಬಿಎಸ್ಪಿ ಜಿಲ್ಲಾಧ್ಯಕ್ಷ ಅಂಕುಶ ಗೋಖಲೆ ತಮಗೆ ಟಿಕೆಟ್‌ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರಲ್ಲ ಎನ್ನುವ ಪ್ರಶ್ನೆಗೆ, ಹಾಗೇನಿಲ್ಲ. ಅವರೊಂದಿಗೆ ನಾನು ಮಾತನಾಡಿದ್ದೇನೆ. ಅವರು ನಮ್ಮೊಂದಿಗೆ ಇದ್ದಾರೆ ಎಂದು ಮಾರಸಂದ್ರ ಮುನಿಯಪ್ಪ ವಿವರಿಸಿದರು.ರಾಜ್ಯದ 20 ಸೀಟುಗಳ ಪೈಕಿ ಬೀದರ್‌ ಉತ್ತರದಿಂದ ಮಾರಸಂದ್ರ ಮುನಿಯಪ್ಪ, ಕೊಳ್ಳೆಗಾಲದಿಂದ ಪಕ್ಷದ ಹಿರಿಯರಾದ ಎನ್‌. ಮಹೇಶ್‌ ಸ್ಪರ್ಧಿಸುವ ಕುರಿತು ಅಂತಿಮವಾಗಿದೆ. ಕಲಬುರಗಿ ಗ್ರಾಮೀಣದಿಂದ ನಿಂಬಾಳ್ಕರ್‌ ಸ್ಪರ್ಧಿಸುವರು. ಚಿತ್ತಾಪುರದಲ್ಲೂ ಬಿಎಸ್ಪಿ ಅಭ್ಯರ್ಥಿ ಸ್ಪರ್ಧಿಸಲಿದ್ದಾರೆ. ನಾಲ್ಕೈದು ದಿನಗಳಲ್ಲಿ ಎಲ್ಲ ಅಭ್ಯರ್ಥಿಗಳ ಹೆಸರನ್ನು ಘೋಷಿಸಲಾಗುವುದು ಎಂದು ಮಾರಸಂದ್ರ ಮುನಿಯಪ್ಪ ವಿಕಕ್ಕೆ ತಿಳಿಸಿದರು. ಬೀದರ್‌ ಉತ್ತರಿಂದ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದ ಮಾಜಿ ಶಾಸಕ ಸೈಯದ್‌ ಝುಲ್ಪೇಕಾರ ಹಾಷ್ಮಿ ಹಾಗೂ ಹುಮನಾಬಾದ್‌ನ ಬಿಎಸ್ಪಿ ಟಿಕೆಟ್‌ ಆಕಾಂಕ್ಷಿಯಾಗಿರುವ ಬಿಎಸ್ಪಿ ಜಿಲ್ಲಾಧ್ಯಕ್ಷ ಅಂಕುಶ ಗೋಖಲೆ ಅವರುಗಳು ಸಭೆಗೆ ಗೈರಾಗಿದ್ದರು. ಈ ಇಬ್ಬರೂ ನಾಯಕರ ಗೈರು ಬಿಎಸ್ಪಿಗೆ ಎರಡೂ ಕ್ಷೇತ್ರಗಳಲ್ಲಿ ಬಂಡಾಯದ ಮುನ್ಸೂಚನೆ ನೀಡಿದಂತಾಗಿದೆ.

 

Edited By

Shruthi G

Reported By

hdk fans

Comments