ರಾಜ್ಯದ ಅಭಿವೃಧಿಗಾಗಿ ಕನಸು ಕಂಡಿರುವ ಕುಮಾರಣ್ಣ ಹೇಳಿದ್ದು ಹೀಗೆ...!!

20 Feb 2018 9:53 AM |
1739 Report

ಅನ್ನದಾತರನ್ನು ಸಾಲ ಮುಕ್ತ, ಸ್ವಾವಲಂಬಿಗಳಾಗಿ ಮಾಡಬೇಕು. ಆರ್ಥಿಕವಾಗಿ ಬಲಾಢ್ಯರಾಗಿಸಬೇಕು. ಇದಕ್ಕಾಗಿ ಮರಳುಗಾಡಿನಲ್ಲೂ ಉತ್ತಮ ಬೆಳೆ ತೆಗೆಯುವ ಇಸ್ರೇಲ್ ಮಾದರಿಯ ಕೃಷಿ ಪದ್ಧತಿಯನ್ನು ರಾಜ್ಯದಲ್ಲೂ ಅಳವಡಿಸುವುದಾಗಿ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಇಂಗಿತ ವ್ಯಕ್ತಪಡಿಸಿದರು.20 ತಿಂಗಳ ಆಡಳಿತ ಅನುಭವ, ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯುವ ಕಡೆಗಿನ ನಡೆಯ ಬಗ್ಗೆ 'ಪ್ರಜಾವಾಣಿ' ಓದುಗರ ಜೊತೆ ಅವರು ಮನಬಿಚ್ಚಿ ಮಾತನಾಡಿದರು.

ಇತ್ತೀಚೆಗೆ ಇಸ್ರೇಲ್ ಗೆ ಹೋಗಿದ್ದಾಗ ಅಲ್ಲಿನ ಕೃಷಿ ಪದ್ಧತಿ ಗಮನಿಸಿದ್ದೇನೆ. ಹೊಸ ತಳಿ ಸಂಶೋಧನೆ ಇನ್ನೂ ಅಲ್ಲಿ ಮುಂದುವರಿದಿದೆ. ಆರು ವಿಧದ ಪಾಪಸ್ ಕಳ್ಳಿಗಿಡ (ಕ್ಯಾಕ್ಟಸ್) ಬೆಳೆಯುವ ರೈತರು ಅದರ ಹಣ್ಣಿನಿಂದ ಭಾರಿ ಲಾಭ ಪಡೆಯುತ್ತಿದ್ದಾರೆ. ರೈತ ಹೆಸರಿನಲ್ಲಿ ಪ್ರತೀ ವರ್ಷ ಇಸ್ರೇಲ್ ಗೆ ಯಾರನ್ನೋ ಕಳುಹಿಸಿ ಸರ್ಕಾರದ ಹಣ ವೆಚ್ಚ ಮಾಡುವ ಬದಲು ಅಲ್ಲಿಂದಲೇ 200 ಕೃಷಿ ತಜ್ಞರನ್ನು ಕರೆಸಿಕೊಳ್ಳಬೇಕು. ಪ್ರತಿ ಜಿಲ್ಲೆಗೆ 6 ತಜ್ಞರನ್ನು ಕಳುಹಿಸಿ, ಅವರಿಗೆ ಎಲ್ಲ ಸೌಲಭ್ಯಗಳನ್ನು ನೀಡಿ, ರಾಜ್ಯದ  ಕೃಷಿ ಪದ್ಧತಿ ಸ್ವರೂಪವನ್ನೇ ಬದಲಿಸುತ್ತೇನೆ ಎಂದು ಮಾತುಕೊಟ್ಟರು.

ಎಂಜಿನಿಯರಿಂಗ್ ಸೇರಿದಂತೆ ಕೌಶಲ ಹೊಂದಿದ ಉದ್ಯೋಗಾಕಾಂಕ್ಷಿಗಳಿಗೆ ಅವಕಾಶ ಒದಗಿಸುವ ಜೊತೆಗೆ ಸ್ವ ಉದ್ಯೋಗ ಕಂಡುಕೊಳ್ಳುವ ದಾರಿ ಮಾಡಿಕೊಡಬೇಕು. ಆ ಮೂಲಕ ಮಾತ್ರ, ಉದ್ಯೋಗ ಇಲ್ಲದೆ ಅಪರಾಧ ಸೇರಿದಂತೆ ತಪ್ಪು ಹಾದಿ ತುಳಿಯುವ ಯುವ ವರ್ಗದ ಮನಸ್ಸು ಬದಲಾಯಿಸಲು ಸಾಧ್ಯ. ಆಡಳಿತದ ಚುಕ್ಕಾಣಿ ಕೈಗೆ ಸಿಕ್ಕ ತಕ್ಷಣ ಆ ದಿಸೆಯಲ್ಲಿ ಹೆಜ್ಜೆ ಇಡುವುದು ಖಚಿತ' ಎಂದೂ ಅವರು ಆಶ್ವಾಸನೆ ನೀಡಿದರು.ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಅರಿವಿದೆ. ಕೃಷ್ಣಾ ನದಿಕೊಳ್ಳದಲ್ಲಿ ರಾಜ್ಯದ ಪಾಲಿನ ನೀರು ವ್ಯರ್ಥವಾಗದಂತೆ ನೋಡಿಕೊಳ್ಳಬೇಕಾದ ಸವಾಲಿದೆ. ಹೈದರಾಬಾದ್ ಕರ್ನಾಟಕಕ್ಕೆ 371 ಜೆ ಅಡಿ ನೀಡಲಾದ ಮೀಸಲಾತಿಯ ಫಲ ಸಿಕ್ಕಿಲ್ಲ. ಆ ಭಾಗದಲ್ಲಿ ಅಪೌಷ್ಟಿಕತೆ ಕೊರತೆಯಿಂದ ಬಳಲುತ್ತಿರುವ ಗರ್ಭಿಣಿ, ಬಾಣಂತಿ ಹಾಗೂ ಮಕ್ಕಳ ಸಮಸ್ಯೆ ಪರಿಹಾರಕ್ಕೆ ಸೂಕ್ತ ಯೋಜನೆ ರೂಪಿಸುತ್ತೇನೆ' ಎಂದರು.'ಪ್ರಜಾವಾಣಿ' ಓದುಗರಾದ ಮಲ್ಲೇಶ್ವರದ ಅರುಣ್ ಕುಮಾರ್, ಸುಮಂತ್, ರಾಮನಗರದ ಮೂರ್ತಿ, ಮಾಗಡಿ ಶ್ರೀಧರ್, ಪದ್ಮನಾಭ ನಗರದ ಎಸ್. ರಾಜಶೇಖರ್, ಶೇಷಾದ್ರಿಪುರದ ಚಂದ್ರಶೇಖರ್, ಯಲಹಂಕದ ಎಸ್.ಪಿ. ರೆಡ್ಡಿ, ಬಸವನಗುಡಿ ಮೋಹನ್, ಮಾರಸಂದ್ರದ ದಯಾನಂದ, ಹಲಸೂರಿನ ಪ್ರಹ್ಲಾದ್, ವಿಜಯನಗರದ ಪ್ರಕಾಶ್, ಜಿ.ಆರ್. ಕೃಷ್ಣಪ್ಪ ಸಂವಾದದಲ್ಲಿ ಪಾಲ್ಗೊಂಡಿದ್ದರು.

Edited By

Shruthi G

Reported By

hdk fans

Comments