ಆಟೋ, ಟ್ಯಾಕ್ಸಿ, ಲಾರಿ ಚಾಲಕರ ಸಂವಾದದಲ್ಲಿ ಎಚ್ ಡಿಕೆ ಕೊಟ್ಟ ಭರವಸೆ ಏನು ಗೊತ್ತಾ?

15 Feb 2018 10:33 AM |
600 Report

ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ನಾನು ನೆಪಮಾತ್ರಕ್ಕೆ ಮುಖ್ಯಮಂತ್ರಿಯಷ್ಟೇ. ಜನರೇ ನಿಜವಾದ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ನಗರದ ಪುರಭವನದಲ್ಲಿ ಇಂದು ಆಯೋಜಿಸಿದ್ದ ಆಟೋ, ಟ್ಯಾಕ್ಸಿ, ಲಾರಿ ಚಾಲಕರು ಹಾಗೂ ಮಾಲೀಕರೊಂದಿಗಿನ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದ ಅವರು, ತಿಂಗಳಿಗೊಮ್ಮೆ ಸರ್ಕಾರದ ಆಡಳಿತದ ಬಗ್ಗೆ ಜಿಲ್ಲಾವರು ಮಾಹಿತಿ ಪಡೆಯಲಾಗುವುದು ಎಂದರು.  ಆಟೋ, ಟ್ಯಾಕ್ಸಿ, ಲಾರಿ ಚಾಲಕರು ಪ್ರತಿನಿತ್ಯ ಅನುಭವಿಸುವ ಸಮಸ್ಯೆಗಳಿಗೆ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಪರಿಹಾರ ನೀಡುವುದಾಗಿ ಅವರು ಭರವಸೆ ನೀಡಿದರು. ನೀವು ಅನುಭವಿಸುತ್ತಿರುವ ಕಷ್ಟಗಳ ಬಗ್ಗೆ ನನಗೆ ಅರಿವಿದೆ. ಮುಂದಿನ ಚುನಾವಣೆಯಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಚಾಲಕರು ಅನುಭವಿಸುತ್ತಿರುವ ತೊಂದರೆಗಳನ್ನು ಪ್ರತಿ ತಿಂಗಳು ಆಲಿಸಿ ಪರಿಹಾರ ಕಂಡುಕೊಳ್ಳಲಾಗುವುದು. ಅಧಿಕಾರಿಗಳ ಸಲಹೆಯಂತೆ ಆಡಳಿತ ನಡೆಸುವ ಬದಲು ಜನಸಾಮಾನ್ಯರ ಸಲಹೆಯಂತೆ ಆಡಳಿತ ನಡೆಸುವುದಾಗಿ ಹೇಳಿದರು.ಆಟೋದಲ್ಲಿ ಕುಳಿತು ಸಂವಾದ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕುಮಾರಸ್ವಾಮಿ, ನಿತ್ಯ ಚಾಲಕರು ಹಗಲು-ರಾತ್ರಿ ಅನುಭವಿಸುತ್ತಿರುವ ಸಮಸ್ಯೆಗಳನ್ನು ಆಲಿಸಿದರು. ಸಮಾಜದ ಪ್ರತಿಯೊಂದು ವರ್ಗದ ಅಭಿವೃದ್ಧಿಯೇ ತಮ್ಮ ಆಡಳಿತದ ಮೂಲ ಮಂತ್ರವಾಗಿದೆ ಎಂದರು.  

ಚುನಾವಣೆಗೂ ಮುನ್ನ ಎಲ್ಲ ವರ್ಗದ ಜನರೊಂದಿಗೆ ಸಂವಾದ ನಡೆಸಿ ಆಯಾಯ ವರ್ಗದ ಸಮಸ್ಯೆಗಳನ್ನು ಆಲಿಸಲಾಗುತ್ತಿದೆ. ಈಗಾಗಲೇ ರೈತರು, ವಿದ್ಯಾರ್ಥಿಗಳು, ಉದ್ಯಮಿಗಳು, ಹಿರಿಯ ನಾಗರಿಕರ ಜೊತೆ ಸಂವಾದ ನಡೆಸಿ ಸಮಸ್ಯೆ ಮತ್ತು ಸಲಹೆಗಳನ್ನು ಪಡೆಯಲಾಗಿದೆ. ಮುಂದಿನ ಚುನಾವಣೆಯಲ್ಲಿ ಪಕ್ಷದ ಪ್ರಣಾಳಿಕೆಯಲ್ಲಿ ಈ ಸಲಹೆಗಳಿಗೆ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.ನನ್ನ ಬಳಿ ನಾಗಮಂಗಲದಿಂದ ಬಂದ ಕುಟುಂಬ ನೋವು ತೋಡಿಕೊಂಡಾಗ ನನಗೆ ಸಹಾಯ ಮಾಡಬೇಕೆನಿಸಿ ಆರ್ಥಿಕ ಸಹಾಯ ಮಾಡಿದ್ದೇನೆ ಎಂದ ಅವರು, ನಾಗಮಂಗಲ, ಮಾಗಡಿ ಕ್ಷೇತ್ರಗಳಲ್ಲಿ ಕೆಲವು ಅಭ್ಯರ್ಥಿಗಳು ಚುನಾವಣೆಗಾಗಿ 50 ರಿಂದ 100 ಕೋಟಿ ಖರ್ಚು ಮಾಡಲು ಸಿದ್ಧರಾಗಿದ್ದಾರಂತೆ. ಆದರೆ, ಬಡವರಿಗೆ ಸಹಾಯ ಮಾಡಲು ಅವರಿಂದ ಆಗಲ್ಲ ಎಂದು ಕುಮಾರಸ್ವಾಮಿಯವರು ಟಾಂಗ್ ನೀಡಿದರು.ಓಲಾ, ಉಬರ್‌ನಂತೆ ಆಟೋ, ಟ್ಯಾಕ್ಸಿ ಚಾಲಕರಿಗೆ ಸಂಸ್ಥೆ ನಿರ್ಮಿಸಿಕೊಡಲು ನಾನು ಹೊಸ ಯೋಜನೆ ಬಗ್ಗೆ ಚಿಂತಿಸಿದ್ದೇನೆ. 6.5 ಕೋಟಿ ಜನರಿಂದ ಸರ್ಕಾರ ನಡೆಯಬೇಕೆ ಹೊರತು ಐಎಎಸ್ ಅಧಿಕಾರಿಗಳಿಂದಲ್ಲ. ವೃತ್ತಿ ಮಾಡುವವರು ನೋವಲ್ಲಿ ಇರಬಾರದು. ಹಾಗಾಗಿ ಅವರಿಗೆ ಸಹಾಯ ಮಾಡುವ ಬಗ್ಗೆ ಯೋಚಿಸಿದ್ದೇನೆ ಎಂದರು.

ಸರ್ಕಾರ ಯುವಜನತೆಗೆ ಉದ್ಯೋಗ ನೀಡಿದರೆ ಅವರು ಯಾವುದೇ ಅಡ್ಡದಾರಿ ಹಿಡಿಯುವುದಿಲ್ಲ. ಇಂದು ಯುವಜನತೆಯಲ್ಲಿ ಪಿಕ್ ಪ್ಯಾಕೆಟ್, ಕಳ್ಳತನಗಳನ್ನು ಗಮಿಸುತ್ತಿದ್ದೇವೆ. ಅವರು ಉದ್ಯೋಗದಲ್ಲಿ ತೊಡಗಿಸಿಕೊಂಡರೆ ಇಂತಹ ಅಚಾತುರ್ಯಗಳಿಗೆ ಅವಕಾಶವಾಗುವುದಿಲ್ಲ ಎಂದು ಹೇಳಿದರು.ಈ ವೇಳೆ ತೀವ್ರ ಕಾಯಿಲೆಯಿಂದ ಬಳಲುತ್ತಿದ್ದ ಬಾಲಕಿಗೆ 30 ಲಕ್ಷ ರೂ. ಸಹಾಯ ಮಾಡಿದ ಕುಮಾರಸ್ವಾಮಿಯವರ ಔದಾರ್ಯವನ್ನು ಸ್ಮರಿಸಿದ ಬಾಲಕಿ ತಾಯಿ, ತನ್ನ ಮಗಳು ಸಾಯುತ್ತಿದ್ದ ಸಂದರ್ಭದಲ್ಲಿ ಕುಮಾರಣ್ಣನವರು ದೇವರಂತೆ ಬಂದು ಆಕೆಯ ಜೀವನವನ್ನು ಉಳಿಸಿದ್ದಾರೆ ಎಂದು ಭಾವುಕರಾದರು. ಈ ಸಂದರ್ಭದಲ್ಲಿ ಮಾತನಾಡಿದ ಕುಮಾರಸ್ವಾಮಿಯವರು, ಮನುಷ್ಯರಾದವರಲ್ಲಿ ಸಹಾಯ ಗುಣ ಇರಬೇಕು ಎಂದು ಪ್ರತಿಕ್ರಿಸಿದರು. 

Edited By

hdk fans

Reported By

hdk fans

Comments