ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿಕೆಗೆ ಗುಡುಗಿದ ಎಚ್.ಡಿ.ಕುಮಾರಸ್ವಾಮಿ

30 Jan 2018 6:19 PM |
632 Report

ಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಳಒಪ್ಪಂದದ ಬಗ್ಗೆ ಸ್ಪಷ್ಟ ಮಾಹಿತಿ ಇದ್ದರೆ ಜನತೆಯ ಮುಂದಿಡಲಿ. ಅದನ್ನು ಬಿಟ್ಟು ಈ ರೀತಿ ಸುಳ್ಳು ಹೇಳಿಕೆ ನೀಡುವುದು ಸರಿಯಲ್ಲ ಎಂದು ಹರಿಹಾಯ್ದ ಅವರು, ಕಾಂಗ್ರೆಸ್‍ಗೆ ಮುಸ್ಲಿಂ ಮತಗಳ ಹಿನ್ನಡೆಯಿಂದಾಗಿ ಕರ್ನಾಟಕದಲ್ಲಿ ಪಕ್ಷ ಧೂಳೀಪಟವಾಗುತ್ತದೆ ಎಂಬ ಭಯ ಅವರನ್ನು ಕಾಡುತ್ತಿದೆ ಎಂದು ಕಿಡಿಕಾರಿದರು.

ಕಾಂಗ್ರೆಸ್‍ನವರಿಗೆ ಕೇವಲ ಸುಳ್ಳು ಆರೋಪ ಮಾಡುವುದೇ ಕೆಲಸ. ಹಾಗಾಗಿ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದು ಬಿಜೆಪಿ ಓವೈಸಿ ಜೊತೆ ಒಳಒಪ್ಪಂದದ ಬಗ್ಗೆ ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿಕೆಗೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.ಗೃಹ ಸಚಿವರ ಬಳಿ ಈ ಬಗ್ಗೆ ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದ ಅವರು, ದೇವೇಗೌಡರು ಪ್ರಧಾನಿಯವರನ್ನು ಭೇಟಿ ಮಾಡಿದಾಗಲೂ ಇದೇ ರೀತಿ ಕಾಂಗ್ರೆಸ್‍ನವರು ಇಲ್ಲಸಲ್ಲದ ಆರೋಪ ಮಾಡಿದ್ದಾರೆ ಎಂದು ದೂರಿದರು. ಇಂತಹ ಅಪಪ್ರಚಾರದಲ್ಲೇ ಕಾಂಗ್ರೆಸ್‍ನವರು ಕಾಲ ಕಳೆಯುತ್ತಿದ್ದಾರೆ. ಒಂದು ಬಾರಿ ಕಾಂಗ್ರೆಸ್ ಹಾಗೂ ಒಂದು ಬಾರಿ ಬಿಜೆಪಿಯವರೊಂದಿಗೆ ಮೈತ್ರಿ ಮಾಡಿ ನೋಡಿದ್ದೇವೆ. ಆದರೆ ಈ ಬಾರಿ ಸ್ವತಂತ್ರವಾಗಿ 113 ಸಂಖ್ಯೆಯನ್ನು ಜನತೆ ಕೊಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ನಾಡಿನ ಜನತೆಯ ಮೇಲೆ 2.90 ಸಾವಿರ ಕೋಟಿ ಸಾಲದ ಹೊರೆಯನ್ನು ಸರ್ಕಾರ ಹೊರಿಸಿದೆ. ಇದೇ ಆ ಸರ್ಕಾರದ ಸಾಧನೆ. ಈ ಸರ್ಕಾರ ಮಂಡಿಸಲು ಹೊರಟಿರುವ ಬಜೆಟ್ ಕೇವಲ ಟೆಂಪರರಿ ಬಜೆಟ್. ಇದು ಸ್ಯಾಂಪಲ್ ಮಾತ್ರ ಅಭೀ ಪಿಕ್ಚರ್ ಬಾಕೀ ಹೈ ಎಂದು ಎಚ್‍ಡಿಕೆ ಟೀಕೆಗಳ ಸುರಿಮಳೆಗೈದರು.

ಐದು ಸಾವಿರ ಕೋಟಿ ರೂ.ಗಳ ಹಗರಣದ ದಾಖಲೆಗಳನ್ನು ಬಿಡುಗಡೆ ಮಾಡಿದ್ದೇನೆ. ಅದು ಸರ್ಕಾರದ ದಾಖಲೆಗಳು. ಈವರೆಗೂ ಅದಕ್ಕೆ ಮುಖ್ಯಮಂತ್ರಿಗಳು ಪ್ರತಿಕ್ರಿಯೆ ನೀಡಿಲ್ಲ. ಸಚಿವ ವಿನಯ್‍ಕುಲಕರ್ಣಿಗೆ ಬರೆದುಕೊಟ್ಟು ಹೇಳಿಕೆ ಕೊಡಿಸಿದ್ದಾರೆ. ಸದ್ಯಕ್ಕೆ ಭ್ರಷ್ಟಾಚಾರದ ವಿಷಯ ಪ್ರಸ್ತಾಪಿಸುವುದಿಲ್ಲ. ಭ್ರಷ್ಟಾಚಾರ ದಾಖಲೆ ಬಿಡುಗಡೆ ಮಾಡಿ, ಜನರ ಗಮನವನ್ನು ಬೇರೆಡೆ ಸೆಳೆಯಲು ಇಷ್ಟಪಡುವುದಿಲ್ಲ ಎಂದರು. ರಾಜ್ಯಸರ್ಕಾರ ಅಲ್ಪಸಂಖ್ಯಾತರ ಮೇಲಿನ ಕೇಸ್ ಹಿಂಪಡೆಯುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕೇಸ್ ಬುಕ್ ಮಾಡಲು ಹೇಳಿದ್ದು ಸರ್ಕಾರವೇ, ಈಗ ಹಿಂಪಡೆಯಲು ಹೇಳುತ್ತಿರುವುದು ಅವರೇ. ಚುನಾವಣೆಗಾಗಿ ಸಣ್ಣತನದ ರಾಜಕೀಯ ಮಾಡುತ್ತಿದ್ದಾರೆ. ಗೃಹ ಇಲಾಖೆ ಸಂಪೂರ್ಣ ವಿಫಲವಾಗಿದೆ ಎಂದು ವಾಗ್ದಾಳಿ ನಡೆಸಿದರು. ಕೊಪ್ಪಳದ ಶಾಸಕ ಇಕ್ಬಾಲ್ ಅನ್ಸಾರಿ ಪೊಲೀಸರನ್ನು ನಂಬಬೇಡಿ ಎಂದು ಹೇಳಿದ್ದಾರೆ. ಅಂಥವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಓಲೈಸುತ್ತಾರೆ ಎಂದು ಕುಹಕವಾಡಿದರು. 

 

 

Edited By

hdk fans

Reported By

hdk fans

Comments