ಜೆಡಿಎಸ್ ಶಾಸಕಾಂಗ ಸಭೆಯಲ್ಲಿ ಎಚ್ ಡಿಕೆ ಹೇಳಿದ್ದೇನು?

21 Dec 2017 9:37 AM |
625 Report

ಮುಂಬರುವ ವಿಧಾನಸಭಾ ಚುನಾವಣೆಯನ್ನು ಸಮರ್ಥವಾಗಿ ಎದುರಿಸಿ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಮಹತ್ವದ ಚರ್ಚೆ ನಡೆಸಲಾಯಿತು. ಮಾಜಿ ಸಿಎಂ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಶಾಸಕರು, ವಿಧಾನ ಪರಿಷತ್ ಸದಸ್ಯರು, ಮುಖಂಡರು ಪಾಲ್ಗೊಂಡಿದ್ದರು.

ಮುಂಬರುವ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ, ಪಕ್ಷ ಸಂಘಟನೆ, ಹೋರಾಟ ಮತ್ತಿತರ ವಿಚಾರಗಳ ಬಗ್ಗೆ ಸಮಾಲೋಚನೆ ನಡೆಸಿ ಎಚ್.ಡಿ.ಕುಮಾರಸ್ವಾಮಿ ಅವರು ಅಗತ್ಯ ಸಲಹೆಗಳನ್ನು ನೀಡಿದರು.ಅಭ್ಯರ್ಥಿಗಳ ಆಯ್ಕೆಯನ್ನು ಆಯಾ ಕ್ಷೇತ್ರದಲ್ಲಿ ಭಿನ್ನಮತವಿಲ್ಲದಂತೆ ಸರ್ವ ಸಮ್ಮತವಾಗಿ ಮಾಡಬೇಕು. ಪಟ್ಟಿ ಬಿಡುಗಡೆಯಾದ ನಂತರ ಕಾರ್ಯಕರ್ತರಲ್ಲಾಗಲಿ, ಸ್ಥಳೀಯ ಮುಖಂಡರಲ್ಲಾಗಲಿ ಗೊಂದಲ ಹಾಗೂ ಭಿನ್ನಮತ ಉಂಟಾಗದಂತೆ ನೋಡಿಕೊಳ್ಳಬೇಕೆಂದು ಎಚ್.ಡಿ.ಕುಮಾರಸ್ವಾಮಿ ಸೂಚಿಸಿದರು.

ಗುಜರಾತ್ ಮತ್ತು ಹಿಮಾಚಲ ಪ್ರದೇಶಗಳ ಚುನಾವಣಾ ಫಲಿತಾಂಶ ಪ್ರಕಟವಾದ ನಂತರ ರಾಜ್ಯದಲ್ಲಿ ಏನೆಲ್ಲ ಬದಲಾವಣೆಯಾಗಿದೆ ಎಂಬುದನ್ನೆಲ್ಲ ಗಂಭೀರವಾಗಿ ಅವಲೋಕಿಸುವಂತೆ ತಿಳಿಸಿದರು. ಪಕ್ಷವನ್ನು ಸಮರ್ಥವಾಗಿ ಮುನ್ನಡೆಸುವುದು, ಬೂತ್ ಮಟ್ಟದಿಂದ ಕಾರ್ಯಕರ್ತರನ್ನು ಸಂಘಟಿಸುವುದು, ಚುನಾವಣೆಯನ್ನು ಸಮರ್ಥವಾಗಿ ಎದುರಿಸುವ ಕುರಿತು ಕಾರ್ಯತಂತ್ರ ರೂಪಿಸುವ ಬಗ್ಗೆಯೂ ಚರ್ಚಿಸಲಾಯಿತು. ಜನರಲ್ಲಿ ಜೆಡಿಎಸ್ ಬಗ್ಗೆ ಒಲವು ಮೂಡುವಂತೆ ಅರಿವು ಮೂಡಿಸಬೇಕಿದೆ. ಈ ಹಿನ್ನೆಲೆಯಲ್ಲಿ ಸಮಾವೇಶಗಳು, ಸಭೆಗಳನ್ನು ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಹಮ್ಮಿಕೊಳ್ಳಬೇಕೆಂದು ಹೇಳಿದರು. ವಿಜಯಪುರದಲ್ಲಿ ನಡೆಯಲಿರುವ ರೈತ ಸಮಾವೇಶ, ಕೋಲಾರದಲ್ಲಿ ನಡೆಯಲಿರುವ ಹಿಂದುಳಿದ ವರ್ಗಗಳ ಸಮಾವೇಶ ಹಾಗೂ ಮಂಗಳೂರಿನಲ್ಲಿ ಸೌಹಾರ್ದ ಯಾತ್ರೆ ಯಶಸ್ವಿಗೊಳಿಸುವ ನಿಟ್ಟಿನಲ್ಲೂ ಸಲಹೆ ಸೂಚನೆಗಳನ್ನು ಪಡೆಯಲಾಯಿತು.

ಒಂದು ವೇಳೆ ಕ್ಷೇತ್ರವಾರು ಸಮಸ್ಯೆಗಳಿದ್ದರೆ ಅದನ್ನು ಸ್ಥಳೀಯವಾಗಿ ಬಗೆಹರಿಸಿಕೊಳ್ಳಬೇಕು. ಎಲ್ಲಿಯೂ ಗೊಂದಲಕ್ಕೆ ಅವಕಾಶ ನೀಡಬಾರದು. ಅಷ್ಟೇ ಅಲ್ಲ ನೆರೆಹೊರೆ ಕ್ಷೇತ್ರಗಳ ಬಗ್ಗೆಯೂ ಗಮನಹರಿಸುವ ಅಗತ್ಯವಿದೆ ಎಂದು ಹೇಳಿದರು.
ಸಣ್ಣಪುಟ್ಟ ಗೊಂದಲಗಳು, ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಚುನಾವಣೆಗೆ ಎಲ್ಲರೂ ಸಂಪೂರ್ಣ ಸಜ್ಜಾಗಬೇಕು. ಅದಕ್ಕೆ ತಕ್ಕಂತೆ ಕಾರ್ಯತಂತ್ರಗಳನ್ನು ಹೆಣೆಯಬೇಕು. ಬಹುಮತ ಗಳಿಸುವತ್ತ ನಿಮ್ಮೆಲ್ಲರ ಚಿತ್ತ ಹರಿಯಬೇಕು ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದರು. ನಮ್ಮ ಪಕ್ಷದೊಳಗೆ ಮುಖಂಡರಲ್ಲಿ ಹಾಗೂ ಅಭ್ಯರ್ಥಿಗಳಲ್ಲಿ ಗೊಂದಲ, ಅಪಸ್ವರ ಉಂಟಾದರೆ ಅದನ್ನು ಬೇರೆ ಪಕ್ಷದವರು ಬಂಡವಾಳ ಮಾಡಿಕೊಳ್ಳುತ್ತಾರೆ. ಇದಕ್ಕೆ ಎಂದೂ ಅವಕಾಶ ಮಾಡಿಕೊಡಬಾರದು ಎಂದು ಸೂಚ್ಯವಾಗಿ ಎಚ್.ಡಿ.ಕುಮಾರಸ್ವಾಮಿ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಗುಜರಾತ್, ಹಿಮಾಚಲಪ್ರದೇಶ ವಿಧಾನಸಭಾ ಕ್ಷೇತ್ರಗಳ ಚುನಾವಣೆಯಿಂದ ರಾಜಕೀಯ ಬದಲಾವಣೆಗಳೇನಾದರೂ ಆಗುತ್ತಿದ್ದಲ್ಲಿ ಗಮನಿಸಿ ಚುನಾವಣೆಗೆ ಕಾರ್ಯಕರ್ತರನ್ನು  ಹುರಿದುಂಬಿಸುವ  ಕೆಲಸವನ್ನು ಮಾಡಿ. ಒಟ್ಟಾರೆ ಮುಂಬರುವ ಚುನಾವಣೆಯಲ್ಲಿ ಜೆಡಿಎಸ್ ಬಹುಮತ ಗಳಿಸಿ ಅಧಿಕಾರಕ್ಕೆ ಬರಬೇಕಿದೆ. ಈ ನಿಟ್ಟಿನಲ್ಲಿ ಎಲ್ಲರೂ ಒಗ್ಗೂಡಿ ಕೆಲಸ ಮಾಡಿ ಎಂದು ಸೂಚಿಸಿದರು.

Edited By

Shruthi G

Reported By

hdk fans

Comments