ಖಾಸಗಿ ಟಿವಿ ಚಾನೆಲ್ ನಿರೂಪಕನ ವಿರುದ್ಧ ಬಾಂಬ್‌ ಸಿಡಿಸಿದ ಎಚ್ ಡಿಕೆ

14 Dec 2017 5:40 PM |
618 Report

ಸಂವಿಧಾನಕ್ಕೆ ಶಕ್ತಿ ನೀಡಬೇಕಾದ ಮಾಧ್ಯಮ ರಂಗ ಹೆಚ್ಚು ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಾದ ಅಗತ್ಯವಿದೆ ಎಂದಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ,ಜೆಡಿಎಸ್ ಪಕ್ಷದ ನಾಯಕರೊಬ್ಬರ ಬಳಿ ಹಣ ಕೇಳಿದ ಟಿವಿ ನಿರೂಪಕರೊಬ್ಬರು ನಿರ್ದಿಷ್ಟ ಕಾಲದೊಳಗೆ ಇಂತಿಷ್ಟು ಹಣ ನೀಡದಿದ್ದರೆ ಮುಂದಿನ ಚುನಾವಣೆಯಲ್ಲಿ ಗೆಲ್ಲದಂತೆ ನೋಡಿಕೊಳ್ಳುತ್ತೇನೆ ಎಂದಿದ್ದಾರೆ ಎಂದು ಬಾಂಬ್ ಸಿಡಿಸಿದ್ದಾರೆ.

ಜೆಡಿಎಸ್ ಪಕ್ಷದ ನಾಯಕರೊಬ್ಬರ ಬಳಿ ಹಣ ಕೇಳಿದ ಖಾಸಗಿ ಟಿವಿ ಚಾನೆಲ್ ನಿರೂಪಕರೊಬ್ಬರು ಇಂತಹ ಕಾಲಕ್ಕೆ,ಇಂತಹ ಸ್ಥಳಕ್ಕೆ,ಇಂತಿಷ್ಟು ಹಣವನ್ನು ತಲುಪಿಸದೇ ಇದ್ದರೆ ಮುಂದಿನ ಚುನಾವಣೆಯಲ್ಲಿ ನೀವು ಹೇಗೆ ಗೆಲ್ಲುತ್ತೀರೋ ನೋಡಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.ಈ ಕುರಿತ ದಾಖಲೆಯನ್ನು ಸಧ್ಯದಲ್ಲೇ ಬಿಡುಗಡೆ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಇತ್ತೀಚೆಗೆ ಕಾರ್ಯಕ್ರಮವೊಂದನ್ನು ಟಿವಿಯಲ್ಲಿ ಇದೇ ನಿರೂಪಕರು ನಡೆಸಿಕೊಡುತ್ತಿದ್ದರು.ಈ ಸಂದರ್ಭದಲ್ಲಿ ನನ್ನ ಅಭಿಪ್ರಾಯವನ್ನು ದೂರವಾಣಿಯ ಮೂಲಕ ಪಡೆಯಲು ಬಯಸಿದರು. ಆಗ ನಾನು ಮಾತನಾಡಲು ನಿರಾಕರಿಸಿ ಕಿವಿಗೆ ಹಾಕಿದ್ದ ಮೈಕ್ ತೆಗೆದೆ.ಆದರೂ ಬಲವಂತದಿಂದ ಮಾತನಾಡಲು ಪ್ರೇರೇಪಿಸಿದರು.ಆದರೆ ಚರ್ಚೆ ಅದ್ಯಾವ ಹಂತಕ್ಕೆ ಮುಟ್ಟಿತ್ತೆಂದರೆ ವಿಷಯವನ್ನು ಮೀರಿ ಬೇರೆ ಬೇರೆ ದಿಕ್ಕುಗಳಿಗೆ ಹೋಗಿತ್ತು. ನೀವು ಮುಖ್ಯಮಂತ್ರಿಯಾಗಿದ್ದಾಗ 150 ಕೋಟಿ ರೂ. ಪಡೆದ ಬಗ್ಗೆ ಚನ್ನಿಗಪ್ಪ ಅವರೇ ಹೇಳಿದ್ದಾರೆ ಅಂತೆಲ್ಲ ಅಲ್ಲಿ ಕೂತವರು ಮಾತನಾಡತೊಡಗಿದರು. ಈ ಕಾರ್ಯಕ್ರಮಕ್ಕೂ ಇದಕ್ಕೂ ಏನು ಸಂಬಂಧ? ಎಂದು ನಾನು ಸಿಟ್ಟಿನಿಂದ ಮೈಕ್ ತೆಗೆದೆ.ತೆಗೆಯುವಾಗ ಸಿಟ್ಟಿನಿಂದ ಕೆಲವು ಪದಗಳನ್ನು ಬಳಸಿದೆ.ನಾವು ಗ್ರಾಮೀಣ ಪ್ರದೇಶದಿಂದ ಬಂದವರು.ಹೀಗಾಗಿ ಸಿಟ್ಟಿನಿಂದ ಕೆಲವು ಪದಗಳನ್ನು ಬಳಸುತ್ತೇವೆ. ಆದರೆ ಆಫ್ ದಿ ರೆಕಾರ್ಡ್ ನಡೆದ ಬೆಳವಣಿಗೆಗಳು ನಂತರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದವು ಎಂದರು.

ಆದರೆ ಇದು ಸರಿಯಾದ ನಡವಳಿಕೆ ಅಲ್ಲ. ಕುಮಾರಸ್ವಾಮಿವರು ಅವಾಚ್ಯ ಪದ ಬಳಸಿ ಮಾತನಾಡಿದರು ಎಂದೆಲ್ಲ ಪ್ರಚಾರ ಮಾಡುವುದು ಒಳ್ಳೆಯದಲ್ಲ. ಒಂದು ನಾಯಕತ್ವವನ್ನು ಹಾಳು ಮಾಡುವುದು ಸುಲಭ. ಆದರೆ ಬೆಳೆಸುವುದು ಕಷ್ಟ. ಒಂದು ಸಂಸ್ಥೆಯ ವಿಷಯದಲ್ಲೂ ಇದು ಅನ್ವಯವಾಗುತ್ತದೆ ಎಂದು ಮಾರ್ಮಿಕವಾಗಿ ನುಡಿದರು.ಹೊನ್ನಾವರದಲ್ಲಿ ನಡೆದ ಕೊಲೆ ಘಟನೆ, ಮಂಗಳೂರಿನಲ್ಲಿ ತಿಂಗಳಾನುಗಟ್ಟಲೆ ಇದ್ದ ಆತಂಕದ ವಾತಾವರಣಗಳನ್ನೆಲ್ಲ ನೋಡಿದರೆ ಕರ್ನಾಟಕವನ್ನು ಮತ್ತೊಂದು ಉತ್ತರಪ್ರದೇಶವನ್ನಾಗಿ ಮಾಡಲು ಎರಡೂ ರಾಷ್ಟ್ರೀಯ ಪಕ್ಷಗಳು ಮುಂದಾಗಿವೆ ಎಂದು ಎಚ್.ಡಿ.ಕುಮಾರಸ್ವಾಮಿ ವ್ಯಕ್ತಪಡಿಸಿದರು.

 

Edited By

Shruthi G

Reported By

hdk fans

Comments