ವಿಧಾನ ಸಭಾ ಚುನಾವಣೆಗೆ ಉಪ್ಪಿ ಮಾಸ್ಟರ್ ಪ್ಲಾನ್

07 Dec 2017 4:56 PM |
524 Report

ಶಿವಮೊಗ್ಗಕ್ಕೆ ಆಗಮಿಸಿದ ಉಪ್ಪಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕ್ಷೇತ್ರದ ಸಮಸ್ಯೆಗಳನ್ನು ನಿವಾರಿಸುವ ಹೊಸ ಆಲೋಚನೆಗಳ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು ಎಂದು ತಿಳಿಸಿದರು. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ 224 ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು ಎಂದು ಕರ್ನಾಟಕ ಪ್ರಜ್ಞಾವಂತರ ಜನತಾ ಪಕ್ಷ (ಕೆಪಿಜೆಪಿ)ದ ಸಂಸ್ಥಾಪಕ ಹಾಗೂ ನಟ ಉಪೇಂದ್ರ ಹೇಳಿದರು.

ನಾನು ಕೆಲಸಗಾರ. ಅದಕ್ಕಾಗಿ ಖಾಕಿ ಬಟ್ಟೆ ಹಾಕಿಕೊಂಡು ಬಂದಿದ್ದೇನೆ. ಸ್ವಚ್ಛ ಭಾರತದಂತೆ ಸ್ವಚ್ಛ ಆಡಳಿತ ನನ್ನ ಉದ್ದೇಶವಾಗಿದ್ದು, ಸ್ವ ಇಚ್ಛೆಯಿಂದ ಪಕ್ಷ ಕಟ್ಟಿದ್ದೇನೆ ಎಂದರು. ನಮಗೆ ಪ್ರಜಾಕೀಯ, ಪ್ರಜಾಕಾರಣ, ಪ್ರಜಾಪ್ರಭುತ್ವ ಬೇಕಾಗಿದೆ. ರಾಜಕೀಯ ಅಥವಾ ರಾಜಕಾರಣ ಅಲ್ಲ. ರಾಜಕೀಯಕ್ಕೆ ಹಣ ಹಾಗೂ ಜಾತಿ ಅನಿವಾರ್ಯವಾಗಿರಬಹುದು. ಆದರೆ, ಪ್ರಜಾಕೀಯಕ್ಕೆ ಇದರ ಅವಶ್ಯಕತೆ ಇಲ್ಲ. ಶೇ.80ರಷ್ಟು ಮತದಾರರು ಪ್ರಜ್ಞಾವಂತರಿದ್ದಾರೆ. ಅವರ ಬೆಂಬಲ ದೊರಕಿದರೆ ಬದಲಾವಣೆ ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟರು. ಚುನಾವಣೆ ಮತ್ತು ಆಡಳಿತ ಪಾರದರ್ಶಕವಾಗಿರಬೇಕು. ಚುನಾವಣೆಯಲ್ಲಿ ಆಯ್ಕೆಯಾದವರು ಜನರ ಸಮಸ್ಯೆಗಳನ್ನು ಆಲಿಸಿ ಸ್ಥಳದಲ್ಲೇ ಪರಿಹರಿಸುವುದರ ಮೂಲಕ ಕಾರ್ಮಿಕನಂತೆ ಕೆಲಸ ನಿರ್ವಹಿಸಬೇಕು. ಹಣ, ಪ್ರಭಾವ ಮತ್ತು ಜಾತಿ ಇಲ್ಲದ ಪ್ರಾಮಾಣಿಕತೆ ಇರುವವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಲಾಗುವುದು ಎಂದರು. ರಾಜಕೀಯದಲ್ಲಿ ಹೊಸ ಬದಲಾವಣೆ ತರಬೇಕೆಂಬ ಆಶಾ ಭಾವನೆಯಿಂದ ಹೊಸ ಪಕ್ಷವನ್ನು ಕಟ್ಟಿದ್ದು, ಮುಂಬರುವ ಚುನಾವಣೆಯಲ್ಲಿ ಅಧಿಕ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲ್ಲುವ ವಿಶ್ವಾಸವಿದೆ. ತಮಗೆ ಮುಖ್ಯಮಂತ್ರಿಯಾಗುವ ಆಸೆ ಇಲ್ಲ, ಸಮಾಜದಲ್ಲಿ ಬದಲಾವಣೆ ಆಗಬೇಕು. ಪಕ್ಷದ ಪ್ರಣಾಳಿಕೆ ಸದ್ಯದಲ್ಲೇ ಬಿಡುಗಡೆ ಮಾಡಲಾಗುವುದು. ಇದಕ್ಕೆ ಸಿದ್ದತೆ ನಡೆಸಲಾಗಿದೆ ಎಂದು ನಟ ಉಪೇಂದ್ರ ತಿಳಿಸಿದರು.

 

 

 

 

Edited By

Uppendra fans

Reported By

upendra fans

Comments