ಜೆಡಿಎಸ್‍ ಪಕ್ಷ ಮೈತ್ರಿ ಮಾಡಿಕೊಳ್ಳುವುದಿಲ್ಲವಂತೆ , ಸಂಪೂರ್ಣ ಬಹುಮತಕ್ಕೆ ಗೌಡರು ರೂಪಿಸಿದರೆಯೇ ಪ್ಲಾನ್ ?

03 Oct 2017 1:15 PM |
4906 Report

ಪಕ್ಷ ಸಂಘಟನೆ, ಅಭ್ಯರ್ಥಿಗಳ ಆಯ್ಕೆ, ಚುನಾವಣೆ ಕಾರ್ಯತಂತ್ರ ಸಂಬಂಧ ಜೆಡಿಎಸ್‍ನ ಶಾಸಕಾಂಗ ಸಭೆ ಇಂದು ಸಂಜೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡರ ನೇತೃತ್ವದಲ್ಲಿ ನಡೆಯಲಿದೆ. ನಗರದ ಲಿ ಮೆರಿಡಿಯನ್ ಹೊಟೇಲ್‍ನಲ್ಲಿ ದೇವೇಗೌಡರು ಶಾಸಕಾಂಗ ಸಭೆ ಕರೆದಿದ್ದು, ಮುಂಬರುವ ವಿಧಾನಸಭೆ ಚುನಾವಣೆಗೆ ಪಕ್ಷವನ್ನು ಅಣಿಗೊಳಿಸುವ ನಿಟ್ಟಿನಲ್ಲಿ ರಾಜ್ಯಸಭಾ ಸದಸ್ಯರು, ಸಂಸದರು, ಶಾಸಕರೊಂದಿಗೆ ಮಹತ್ವದ ಸಭೆ ನಡೆಸಲಿದ್ದಾರೆ.

 

ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರು ಶಸ್ತ್ರ ಚಿಕಿತ್ಸೆಗೊಳಗಾಗಿ ವೈದ್ಯರ ಸಲಹೆಯಂತೆ ಹಲವು ದಿನಗಳ ವಿಶ್ರಾಂತಿಯಲ್ಲಿರುವುದರಿಂದ ದೇವೇಗೌಡರು ತಾವೇ ಖುದ್ದು ಸಭೆ ನಡೆಸುತ್ತಿದ್ದಾರೆ.  ಉತ್ತರ ಕರ್ನಾಟಕ, ಹಳೇ ಮೈಸೂರು, ಮಧ್ಯ ಕರ್ನಾಟಕ ಭಾಗದಲ್ಲಿ ಪಕ್ಷ ಸಂಘಟನೆ ಮತ್ತು ಅಭ್ಯರ್ಥಿಗಳ ಆಯ್ಕೆ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಡಿಸೆಂಬರ್ ಅಂತ್ಯದ ವೇಳೆಗೆ ಅಭ್ಯರ್ಥಿಗಳ ಆಯ್ಕೆ ಅಂತಿಮಗೊಳಿಸುವ ಕಸರತ್ತಿನಲ್ಲಿರುವ ಗೌಡರು, ಈ ಸಂಬಂಧ ಹಲವು ಪ್ರವಾಸಗಳನ್ನು ಮಾಡಿದ್ದು, ಮಾಹಿತಿ ಕಲೆ ಹಾಕಿದ್ದಾರೆ.

ಇಂದು ಪಕ್ಷದ ಮುಖಂಡರೊಂದಿಗೆ ಈ ಸಂಬಂಧ ಚರ್ಚೆ ನಡೆಸಲಿದ್ದಾರೆ. ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿಗಳ ಆರ್ಭಟದ ನಡುವೆ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಪಕ್ಷವನ್ನು ಅಧಿಕಾರ ತರುವ ನಿಟ್ಟಿನಲ್ಲಿ ತಂತ್ರಗಳನ್ನು ಹೆಣೆದಿರುವ ಗೌಡರು, ಮುಂದೆ ಕೈಗೊಳ್ಳಬೇಕಾದ ಸಭೆ, ಸಮಾವೇಶ, ರ್ಯಾಲಿಗಳ ಬಗ್ಗೆ ಮಾತುಕತೆ ನಡೆಸಲಿದ್ದಾರೆ. ಎರಡು ವಾರಗಳ ನಂತರ ಕುಮಾರಸ್ವಾಮಿ ಅವರು ಅಖಾಡಕ್ಕೆ ಇಳಿಯಲಿದ್ದು, ಅಗತ್ಯವಾದ ವೇದಿಕೆಯನ್ನು ದೇವೇಗೌಡರು ಸಿದ್ಧಗೊಳಿಸುತ್ತಿದ್ದಾರೆ.

ನಮಗೆ ಸಂಪೂರ್ಣ ಬಹುಮತ ಬಂದರೆ ಆಡಳಿತ ನಡೆಸುತ್ತೇವೆ. ಇಲ್ಲದಿದ್ದರೆ ವಿಪಕ್ಷದಲ್ಲಿ ಕೂರುತ್ತೇವೆ. ಯಾವ ಪಕ್ಷದೊಂದಿಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡರು ಸ್ಪಷ್ಟಪಡಿಸಿದ್ದಾರೆ., ನಾವು ಯಾರೊಂದಿಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದರು. ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆಗೆ ಹೋಗುತ್ತೇವೆ. ನವೆಂಬರ್ ಮತ್ತು ಡಿಸೆಂಬರ್ ವೇಳೆಗೆ ಟಿಕೆಟ್ ಅಂತಿಮಗೊಳಿಸುತ್ತೇವೆ ಎಂದು ತಿಳಿಸಿದರು.

Edited By

Suresh M

Reported By

jds admin

Comments