ನೂತನ ಮನೆಗೆ ಮೋದಿ ಹೆಸರು; ಗೃಹಪ್ರವೇಶಕ್ಕೆ ಮೋದಿ, ಅಮಿತ್ ಶಾಗೆ ಆಹ್ವಾನ

02 Aug 2017 1:20 PM |
2563 Report

ಸ್ವಂತದೊಂದು ಸೂರು ಕಟ್ಟಿದಾಕ್ಷಣ ಕುಲ ದೇವರು, ವಂಶದ ಹೆಸರು ಅಥವಾ ತಮ್ಮ ಅಭಿರುಚಿಗೆ ತಕ್ಕಂತಹ ಹೆಸರು ಇರಿಸುವುದು ಸಹಜ. ಆದರೆ ರಾಮನಗರ ಜಿಲ್ಲೆ, ಚನ್ನಪಟ್ಟಣ ತಾಲೂಕಿನ ಯಲಿಯೂರು ಗ್ರಾಮದ ಮಾದಯ್ಯ ಶೆಟ್ಟಿ ಹೊಸದಾಗಿ ನಿರ್ಮಿಸಿರುವ ತಮ್ಮ ಮನೆಗೆ ‘ಶ್ರೀ ಮೋದಿ ನಿಲಯ’ ಎಂದು ಹೆಸರಿಟ್ಟು ಅಭಿಮಾನ ಮೆರೆದಿದ್ದಾರೆ.

ಅಲ್ಲದೇ ಆ.6 ರಂದು ನಡೆಯಲಿರುವ ತಮ್ಮ ಕನಸಿನ ಮನೆಯ ಗೃಹ ಪ್ರವೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿದ್‌ಷಾ ಅವರಿಗೆ ಆಹ್ವಾನ ನೀಡಿದ್ದಾರೆ. ಪ್ರಧಾನ ಮಂತ್ರಿ ಕಚೇರಿಗೆ ಅಂಚೆ ಮೂಲಕ ಆಹ್ವಾನ ಪತ್ರಿಕೆಯನ್ನು ಕಳುಹಿಸಿ ಕಾರ್ಯಕ್ರಮಕ್ಕೆ ಆಗಮಿಸುವಂತೆ ಆಹ್ವಾನಿಸಿದ್ದೇವೆ ಎನ್ನುತ್ತಾರೆ ಕುಟುಂಬಸ್ಥರು.

ನರೇಂದ್ರ ಮೋದಿ ಪ್ರಧಾನಿಯಾಗಿ ಕೈಗೊಂಡಿರುವ ಅಭಿವೃದ್ಧಿ ಕೆಲಸಗಳೇ ನಮ್ಮ ಮನೆಗೆ ಅವರ ಹೆಸರಿಡಲು ಕಾರಣ. ಗ್ರಾಮೀಣ ಭಾಗದ ಪ್ರತಿಯೊಬ್ಬರು ಸೂರು ಕಟ್ಟಿಕೊಳ್ಳ ಬೇಕೆಂದು ವಸತಿ ಯೋಜನೆಯನ್ನು ಜಾರಿಗೆ ತಂದಿರುವುದು, ಕಾಳಧನವನ್ನು ನಿಯಂತ್ರಿಸುವ ಮೂಲಕ ಬಡವರು ನೆಮ್ಮದಿಯಿಂದ ಬದುಕುವ ವಾತಾವರಣ ನಿರ್ಮಾಣ ಮಾಡಿರುವುದರಿಂದ ನಮ್ಮ ಮನೆಮಂದಿಯೆಲ್ಲ ಮೋದಿ ಅವರ ಬಗ್ಗೆ ಅಭಿಮಾನ ಹೊಂದಿದೆ. ಅದಕ್ಕಾಗಿ ನಮ್ಮ ಮನೆಗೆ ಅವರ ಹೆಸರು ಇರಿಸುತ್ತಿದ್ದೇವೆ ಎಂದು ಕುಟುಂಬ ಸದಸ್ಯರು ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

Edited By

Admin bjp

Reported By

Admin bjp

Comments