ಇಂಗ್ಲಿಷ್ ಕಾವ್ಯದ ತಾಯಿ ಕಮಲಾ ದಾಸ್ ಗೆ ಗೂಗಲ್ ಡೂಡಲ್ ಗೌರವ

01 Feb 2018 12:49 PM | Technology
913 Report

ಕಮಲಾ ದಾಸ್ ಅವರ ಆತ್ಮಕಥೆ 'ಮೈ ಸ್ಟೋರಿ' ಯ ವಾರ್ಷಿಕೋತ್ಸವದ ಅಂಗವಾಗಿ ಗೂಗಲ್ ಈ ಡೂಡಲ್ ರಚನೆ ಮಾಡಿದೆ. 1976ರಲ್ಲಿ ಇವರ ಆತ್ಮಕಥೆ ಮೊದಲ ಬಾರಿಗೆ ಪ್ರಕಟಗೊಂಡಿತ್ತು. ಕಮಲಾ ದಾಸ್ ಬರಹಗಳು ಗಾಢ ಜೀವನಾನುಭವಗಳನ್ನು ಒಳಗೊಂಡಿದ್ದು ಓದುಗರಿಗೆ ಅತ್ಯಂತ ಆಪ್ತವಾಗುತ್ತದೆ. ಇವರ ಆತ್ಮ ಕಥೆಯಲ್ಲಿ ಸಹ ತಮ್ಮ ಜೀವನದ ಅನುಭವಗಳನ್ನು ಪ್ರಾಮಾಣಿಕವಾಗಿ ಹೇಳಿಕೊಂಡಿದ್ದಾರೆ.

1934, ಮಾರ್ಚ್ 31ರಂದು ಕೇರಳದ ಪುನ್ನಯೂರ್ಕುಲಂನಲ್ಲಿ ಕಮಲಾ ದಾಸ್ ಜನಿಸಿದರು. ಇವರ ತಂದೆ ವಿವಿ ನಾಯರ್ ಕೋಲ್ಕತ್ತಾದಲ್ಲಿ ಉದ್ಯೋಗದಲ್ಲಿದ್ದ ಕಾರಣ ಅವರ ಕುಟುಂಬ ಸಹ ಅಲ್ಲಿಗೆ ಪಯಣಿಸಿತ್ತು. ತಂದೆ ವಿವಿ ನಾಯರ್ 'ಮಾತೃಭೂಮಿ' ತ್ರಿಕೆಯ ಮಾಜಿ ವ್ಯವಸ್ಥಾಪಕ ಸಂಪಾದಕರಾಗಿದ್ದರು. ತಾಯಿ ನಲಪತ್ ಬಾಲಮಣಿ ಅಮ್ಮ ಕೂಡಾ ಕೇರಳದಲ್ಲಿ ಒಬ್ಬ ಪ್ರಸಿದ್ದ ಕವಯಿತ್ರಿಯಾಗಿದ್ದರು. ಕಮಲಾ ದಾಸ್ ತಮ್ಮ ಪ್ರಾರಂಭದ ದಿನಗಳಲ್ಲಿ ಮಾಧವಿಕುಟ್ಟಿ ಎನ್ನುವ ಹೆಸರಿನಲ್ಲಿ ಸಾಹಿತ್ಯ ರಚನೆ ಮಾಡುತ್ತಿದ್ದರು. ಕಮಲಾ ದಾಸ್ ಅವರ ಕವಿತೆ, ಕಥೆಗಳಲ್ಲಿ ಮಾನವನ ಒಳಮನಸ್ಸಿನ ತುಡಿತಗಳನ್ನು ಕಾಣುತ್ತೇವೆ. ಕಮಲಾ ದಾಸ್ ತಮ್ಮ ಪ್ರಾಮಾಣಿಕ ಬರಹಗಳಿಂದ ಸಾಕಷ್ಟು ವಿವಾದಗಳನ್ನು ಮೈಮೇಲೆ ಎಳೆದುಕೊಂಡಿದ್ದರು. ಅವರ ಜೀವನ ಅಂತ್ಯಕಾಲದಲ್ಲಿ ಇಸ್ಲಾಂ ಧರ್ಮ ಸೇರಿದ ಲೇಖಕಿ ತಮ್ಮ ಕಥೆಗಳಲ್ಲಿರುವಂತೆ ನಿಜ ಜೀವನದಲ್ಲಿ ಸಹ ಇದೊಂದು ಮಹತ್ವದ ತಿರುವು ಎನ್ನಬೇಕು. ಸದಾ ಹೊಸತನಗಳಿರುವ ಕೂಡಿರುವ ಕಥೆಗಳನ್ನು ಬರೆದಿರುವ ಕಮಲಾ ದಾಸ್ ಅವರ ಕಥೆಗಳು ಕನ್ನಡಕ್ಕೂ ಅನುವಾದವಾಗಿದ್ದು ಕೆ.ಕೆ.ಗಂಗಾಧರನ್, ಇವರ ಕಥೆಗಳನ್ನು 'ಕಮಲಾ ದಾಸ್ ಕತೆಗಳು' ಎನ್ನುವ ಹೆಸರಲ್ಲಿ ಅನುವಾದಿಸಿ ಪ್ರಕಟಿಸಿದ್ದಾರೆ. ಕಮಲಾ ದಾಸ್ ಸಾಹಿತ್ಯ ಕ್ಷೇತ್ರಕ್ಕೆ ಸಲ್ಲಿಸಿದ್ದ ಸೇವೆಗಾಗಿ 'ಆಧುನಿಕ ಭಾರತದ ಇಂಗ್ಲಿಷ್ ಕಾವ್ಯದ ತಾಯಿ' ಎಂದು ಗೌರವಿಸಲಾಗಿದೆ.

 

Edited By

Shruthi G

Reported By

Madhu shree

Comments