ನಿದಾಹಾಸ್ ತ್ರಿಕೋನ ಟಿ-20 ಸರಣಿ : ಶಾರ್ದೂಲ್‌ ದಾಳಿಗೆ ಲಂಕಾ ದಹನ

13 Mar 2018 10:14 AM | Sports
640 Report

ನಿನ್ನೆಯ ಪಂದ್ಯ ರೋಚಕತೆಯಿಂದ ಕೂಡಿತ್ತು. ಸಂಕಷ್ಟಕ್ಕೆ ಸಿಲುಕಿಕೊಂಡಿದ್ದ ತಂಡಕ್ಕೆ ಕನ್ನಡಿಗ ಮನೀಷ್‌ ಪಾಂಡೆ ಮತ್ತು ದಿನೇಶ್‌ ಕಾರ್ತಿಕ್‌ ಆಸರೆಯಾಗಿ ಗೆಲುವಿನ ದಡ ಸೇರಿಸಿದರು. ಇಲ್ಲಿ ನಡೆಯುತ್ತಿರುವ ನಿದಾಹಾಸ್ ತ್ರಿಕೋನ ಟಿ-20 ಸರಣಿಯ ನಾಲ್ಕನೇ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಭಾರತ ತಂಡ ಭರ್ಜರಿ ಜಯ ಗಳಿಸಿದೆ. ಕೊಲಂಬೋದ ಆರ್. ಪ್ರೇಮದಾಸ್‌‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡ 6 ವಿಕೆಟ್‌ಗಳ ಜಯ ಗಳಿಸಿತು.

ಪಂದ್ಯ ಪ್ರಾರಂಭಕ್ಕೂ ಮುನ್ನ ಮಳೆ ಸುರಿದ ಕಾರಣ ಕೆಲ ಹೊತ್ತು ಆಟ ನಡೆಯಲಿಲ್ಲ. ಈ ಕಾರಣಕ್ಕಾಗಿ ಪಂದ್ಯವನ್ನು 19 ಓವರ್‌ಗಳಿಗೆ ನಿಗದಿಗೊಳಿಸಲಾಗಿತ್ತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡ 19 ಓವರ್‌ಗೆ 9 ವಿಕೆಟ್‌ ಕಳೆದುಕೊಂಡು 152 ರನ್‌ಗಳನ್ನು ಗಳಿಸಿ ಭಾರತಕ್ಕೆ 153 ರನ್‌ಗಳ ಗುರಿ ನೀಡಿತು. ಶ್ರೀಲಂಕಾ ಪರ ಗುಣತಿಲಕ 17, ಕುಶಲ್ ಪರೆರಾ 3, ಕುಶಲ್ ಮೆಂಡಿಸ್ 55, ಉಪುಲ್ ತರಂಗ 22,   ನಾಯಕ ತಿಸರಾ ಪರೆರಾ 15, ಜೀವನ್‌ ಮೆಂಡಿಸ್‌ 1, ದಸನ್‌ ಶನಕಾ 19, ಅಖಿಲಾ ಧನಂಜಯ 5,  ದುಶಮಂತಾ ಛಮೀರಾ 0, ಔಟಾಗದೇ ನುವಾನ್‌ ಪ್ರದೀಪ್‌ 0 ಮತ್ತು ಸುರಂಗಾ ಲಕ್ಮಲ್‌ 5 ರನ್‌ ಗಳಿಸಿದ್ದಾರೆ. 

ಭಾರತದ ಪರ ಉತ್ತಮವಾಗಿ ದಾಳಿ ನಡೆಸಿದ ಶಾರ್ದೂಲ್‌ ಠಾಕೂರ್‌ 4 ವಿಕೆಟ್‌ಗಳನ್ನು ಪಡೆದು ಮಿಂಚಿದರು. ಇನ್ನು ವಾಷಿಂಗ್ಟನ್‌ ಸುಂದರ್‌ 2 ವಿಕೆಟ್‌ ಪಡೆದ್ರೆ, ಜೈದೇವ್‌ ಉನದ್ಕಟ್‌‌‌, ಯಜುವೇಂದ್ರ ಚಹಾಲ್‌ ಮತ್ತು ವಿಜಯ್‌ ಶಂಕರ್‌ ತಲಾ ಒಂದೊಂದು ವಿಕೆಟ್‌ ಪಡೆದು ಶ್ರೀಲಂಕಾ ತಂಡವನ್ನು ಕಟ್ಟಿಹಾಕುವಲ್ಲಿ ಯಶಶ್ವಿಯಾದರು. 153 ರನ್‌ಗಳ ಗುರಿ ಬೆನ್ನಟ್ಟಿದ ಭಾರತ ಆರಂಭದಲ್ಲೇ ಮುಗ್ಗರಿಸಿತು. 22 ರನ್ ಗಳಿಸುವಷ್ಟರಲ್ಲಿ ಆರಂಭಿಕರಿಬ್ಬರನ್ನೂ ಕಳೆದುಕೊಂಡ ಭಾರತ ತಂಡ ಸಂಕಷ್ಟಕ್ಕೆ ಸಿಲುಕಿಕೊಂಡಿತ್ತು. ಈ ಹಂತದಲ್ಲಿ ಜೊತೆಯಾದ ಕೆ.ಎಲ್.ರಾಹುಲ್ ಮತ್ತು ಸುರೇಶ್ ರೈನಾ ಜೋಡಿ 29 ಎಸೆತಗಳಲ್ಲಿ 40 ರನ್ ಜೊತೆಯಾಟ ನಿಭಾಯಿಸುವ ಮೂಲಕ ಆರಂಭಿಕ ಸಂಕಷ್ಟದಿಂದ ತಂಡವನ್ನು ಪಾರು ಮಾಡಿತು. ಸುರೇಶ್ ರೈನಾ ಮತ್ತು ಕೆ.ಎಲ್‌.ರಾಹುಲ್‌ ಔಟಾದ ನಂತರ ಬಂದ ಬ್ಯಾಟ್ಸ್‌ಮನ್ಸ್‌ ಕನ್ನಡಿಗ ಮನೀಷ್ ಪಾಂಡೆ ಮತ್ತು ದಿನೇಶ್‌ ಕಾರ್ತಿಕ್‌ ತಂಡವನ್ನು ಗೆಲುವಿನ ದಡಕ್ಕೆ ಸೇರಿಸುವಲ್ಲಿ ಪ್ರಮುಖ ಪಾತ್ರ ನಿಭಾಯಿಸಿದರು. ಇನ್ನು ಭಾರತದ ಪರ ನಾಯಕ ರೋಹಿತ್‌ ಶರ್ಮಾ 11, ಶಿಖರ್‌ ಧವನ್‌ 8, ಕೆ.ಎಲ್‌.ರಾಹುಲ್‌ 18, ಸುರೇಶ್‌ ರೈನಾ 27, ಔಟಾಗದೇ ಮನೀಷ್‌ ಪಾಂಡೆ 42 ಮತ್ತು ದಿನೇಶ್‌ ಕಾರ್ತಿಕ್‌ 39 ರನ್‌ ಗಳಿಸಿದರು. ಶ್ರೀಲಂಕಾ ಪರ ಅಕಿಲಾ ಧನಂಜಯ 2 ವಿಕೆಟ್ ಗಳಿಸಿದರೆ, ಜೀವನ್ ಮೆಂಡಿಸ್ ಮತ್ತು ನುವಾನ್ ಪ್ರದೀಪ್ ತಲಾ ಒಂದೊಂದು ವಿಕೆಟ್ ಪಡೆದುಕೊಂಡ್ರು. ಇನ್ನು ಉತ್ತಮ ದಾಳಿ ನಡೆಸಿದ ಶಾರ್ದೂಲ್ ಠಾಕೂರ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. 

 

Edited By

Shruthi G

Reported By

Shruthi G

Comments