ಕಾಶ್ಮೀರಿ ಯುವತಿಯರ ಕ್ರಿಕೆಟ್ ಕಲರವ..!

03 Oct 2017 5:44 PM | Sports
363 Report

ಕಾಶ್ಮೀರದ ಬಂದೂಕಿನ ಗುಂಡಿನ ಸದ್ದಿನಲ್ಲೂ, ಬಾರಮುಲ್ಲಾ ಸರ್ಕಾರಿ ಮಹಿಳಾ ಕಾಲೇಜಿನ ಆಟಗಾರ್ತಿಯರು ಬುರ್ಖಾ ಹಾಗೂ ಹಿಜಾಬ್ (ಶಿರವಸ್ತ್ರ) ಧರಿಸಿಯೇ ಕ್ರಿಕೆಟ್ ಆಡುತ್ತಿದ್ದಾರೆ. ಈ ಕಾಲೇಜಿನ ತಂಡದ ನಾಯಕಿ ಆಗಿರುವ ಇನ್ಶಾ, ಇತರ ವಿದ್ಯಾರ್ಥಿನಿಯರಿಗೆ ಮಾದರಿ ಆಗಿದ್ದಾರೆ.

ತಮ್ಮ ಸಾಧನೆ ಕುರಿತು ವಿವರಿಸುವ ಇನ್ಶಾ,'ನನ್ನ ಪಯಣದ ಹಾದಿ ಸುಗಮವಾಗಿ ಇರಲಿಲ್ಲ. ನಾನು ಕ್ರಿಕೆಟ್ ಆಡಲು ಶುರು ಮಾಡಿದಾಗ, ಬಹುತೇಕರು ನನ್ನ ತಂದೆ ಬಳಿ ದೂರು ಹೇಳಿದರು.ಆದರೆ, ನನ್ನ ಕುಟುಂಬ ನನ್ನ ಬೆಂಬಲಕ್ಕೆ ನಿಂತಿತ್ತು.ಕಾಲೇಜಿನಲ್ಲಿ ಉರ್ದು ಪ್ರೊಫೆಸರ್ ನನ್ನಲ್ಲಿನ ಪ್ರತಿಭೆ ಗುರುತಿಸಿದರು.

ಕಾಲೇಜು ಆಡಳಿತ ನನಗೆ ಬೆಂಬಲ ಸೂಚಿಸಿತು' ಎಂದಿದ್ದಾರೆ. ಇನ್ಶಾ ಕ್ರಿಕೆಟ್ ಮಾತ್ರವಲ್ಲದೇ, ವಾಲಿಬಾಲ್ ಆಟಗಾರ್ತಿಯೂ ಆಗಿದ್ದು ಕಾಲೇಜು ತಂಡವನ್ನು ಪ್ರತಿನಿಧಿಸುತ್ತಾರೆ. 'ಕಾಲೇಜಿನ ಕ್ರಿಕೆಟ್ ಆಡಲು ಸೂಕ್ತ ವ್ಯವಸ್ಥೆ ಇರಲಿಲ್ಲ. ಆದಕಾರಣ ಆಟಗಾರ್ತಿಯರಿಗೆ ನೆರವಾಗಲೆಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಆರಂಭಿಸಲಾಯಿತು. ಆದರೆ, ಪುರುಷ ಪ್ರಧಾನ ಸಮಾಜ ಇದಕ್ಕೆ ವಿರೋಧ ವ್ಯಕ್ತಪಡಿಸಿತು. ಬಳಿಕ ಪ್ರಾಂಶುಪಾಲರು ನಮ್ಮ ಬೆಂಬಲಕ್ಕೆ ನಿಂತರು.

ಕೊನೆಗೆ ತಂಡವನ್ನು ರಚಿಸಿ, ಅಂತರ ವಿವಿ ಟೂರ್ನಿಯಲ್ಲಿ ಪಾಲ್ಗೊಳ್ಳಲು ನಿರ್ಧರಿಸಿದೆವು' ಎಂದು ಕಾಲೇಜಿನಲ್ಲಿ ಉರ್ದು ಪ್ರೊಫೆಸರ್ ಆಗಿರುವ ರಹಮತ್ ಉಲ್ ಮಿರ್ ತಿಳಿಸಿದ್ದಾರೆ. ಹೀಗೆ ಪುರುಷ ಪ್ರಧಾನ ವ್ಯವಸ್ಥೆಯ ವಿರೋಧದ ನಡೆವೆಯೂ ಇಲ್ಲಿನ ಯುವತಿಯರು ಕ್ರಿಕೆಟ್ ಅಂಗಳಕ್ಕೆ ಇಳಿದಿದ್ದು, ಬ್ಯಾಟ್- ಬಾಲಿನ ಮೂಲಕ ಸಮಾನತೆಗಾಗಿ ಹೋರಾಟ ನಡೆಸುತ್ತಿರುವುದು ಭಾರೀ ಸುದ್ದಿಯಾಗುತ್ತಿದೆ.

Edited By

Shruthi G

Reported By

Madhu shree

Comments