Breaking News : ಮೈತ್ರಿ ಸರ್ಕಾರದ ಹಿನ್ನಲೆ ಇವರಿಗೆ ಒಲಿಯಲಿದೆ ಬಿಬಿಎಂಪಿ ಮೇಯರ್ ಪಟ್ಟ..!!

07 Jul 2018 12:37 PM | Politics
3451 Report

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ನೂತನ ಮೇಯರ್ ಸ್ಥಾನಕ್ಕಾಗಿ ಕಸರತ್ತು ಆರಂಭಗೊಂಡಿದೆ. ಕಾಂಗ್ರೆಸ್-ಜೆಡಿಎಸ್ ನೇತೃತ್ವದ ಹೊಸ ಮೈತ್ರಿ ಸರ್ಕಾರ ಅಧಿಕಾರದಲ್ಲಿರುವುದರಿಂದ ಮತ್ತೆ ಈಗ ಬಿಬಿಎಂಪಿಯಲ್ಲಿ ದೋಸ್ತಿ ಮುಂದುವರೆಯುವುದು ಬಹುತೇಕ ನಿಶ್ಚಿತವಾಗಿರುವುದರಿಂದ ಕಾಂಗ್ರೆಸ್‍ನಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚುತ್ತಿರುವ ನಡುವೆಯೇ ಈ ಬಾರಿ ಒಕ್ಕಲಿಗರ ಸಮುದಾಯಕ್ಕೆ ಅವಕಾಶ ನೀಡಬೇಕೆಂಬ ಕೂಗು ಕೇಳಿ ಬರುತ್ತಿವೆ.

2003ರಲ್ಲಿ ಬೆಂಗಳೂರು ಮಹಾನಗರ ಪಾಲಿಕೆಯ ಮೇಯರ್ ಆಗಿ ಗಾಯತ್ರಿನಗರ ವಾರ್ಡ್‍ನಿಂದ ಗೆದ್ದಿದ್ದ ಒಕ್ಕಲಿಗ ಸಮುದಾಯದ ಸಿ.ಎಂ.ನಾಗರಾಜ್ ನಂತರ ಆ ಜನಾಂಗದ ಯಾರೊಬ್ಬರಿಗೂ ಅದೃಷ್ಟ ಒಲಿಯಲಿಲ್ಲ. ಕೆಲವೊಂದು ಬಾರಿ ಅವಕಾಶ ಸಿಕ್ಕರೂ ಅದು ಕೊನೆ ಘಳಿಗೆಯಲ್ಲಿ ಕೈತಪ್ಪುತ್ತಿತ್ತು. ಆದರೆ ಈ ಬಾರಿ ಹಾಗಾಗಬಾರದೆಂದು ಕೆಲ ಒಕ್ಕಲಿಗ ಮುಖಂಡರು ಜೆಡಿಎಸ್ ಹಾಗೂ ಕಾಂಗ್ರೆಸ್‍ನಲ್ಲಿ ಪ್ರಬಲ ಲಾಬಿ ಆರಂಭಿಸಿದ್ದಾರೆ. ಪ್ರಸ್ತುತ ಸಾಮಾನ್ಯ ಮಹಿಳಾ ವರ್ಗಕ್ಕೆ ಮೇಯರ್ ಸ್ಥಾನ ಮೀಸಲಾಗಿದ್ದು, ಸೌಮ್ಯ ಶಶಿಕುಮಾರ್ ಪರವಾಗಿ ಕೆಲವರು ಈಗಾಗಲೇ ನಾಯಕರ ಮೇಲೆ ತಮ್ಮ ವಕಾಲತ್ತು ಮಂಡಿಸಿದ್ದಾರೆ.

ಕಳೆದ 2016-17ರ ಮೇಯರ್ ಆಯ್ಕೆ ಸಂದರ್ಭದಲ್ಲಿ ಪ್ರಕಾಶನಗರದ ವಾರ್ಡ್‍ನ ಜಿ.ಪದ್ಮಾವತಿ ಹಾಗೂ ಸೌಮ್ಯ ಶಶಿಕುಮಾರ್ ನಡುವೆ ನೇರ ಹಣಾಹಣಿ ಏರ್ಪಟ್ಟಿತ್ತು. ಅಂತಿಮ ಕ್ಷಣದವರೆಗೂ ಒಕ್ಕಲಿಗ ಸಮುದಾಯಕ್ಕೇ ಅವಕಾಶ ನೀಡಬೇಕೆಂದು ನಿರ್ಧಾರವಾಗಿದ್ದರೂ ಸಹ ಕೊನೆ ಘಳಿಗೆಯಲ್ಲಿ ಅದು ಕೈ ತಪ್ಪಿತು. ವರಿಷ್ಠರ ಅಣತಿ ಮೇರೆಗೆ ಪಕ್ಷದ ನಿಷ್ಠೆಯನ್ನು ಪಾಲಿಸಿ ಸೌಮ್ಯ ಶಶಿಕುಮಾರ್ ಅವರು ಸ್ಪರ್ಧೆಯಿಂದ ಹಿಂದೆ ಸರಿದಿದ್ದರು. ಶಾಂತಿನಗರ ವಾರ್ಡ್‍ನಲ್ಲಿ ಸ್ಪರ್ಧಿಸಿ 7 ಸಾವಿರಕ್ಕೂ ಅಧಿಕ ಮತಗಳಿಂದ ಗೆದ್ದಿದ್ದರು. ಕಳೆದ 2018ರ ವಿಧಾನಸಭಾ ಚುನಾವಣೆಯಲ್ಲೂ ಕೂಡ ಕಾಂಗ್ರೆಸ್ ಅಭ್ಯರ್ಥಿ ಹ್ಯಾರೀಸ್ ಅವರಿಗೆ ಅತ್ಯಂತ ಮತಗಳ ಮುನ್ನಡೆಯನ್ನು ತಂದುಕೊಟ್ಟಿದ್ದರು.

Edited By

Shruthi G

Reported By

Shruthi G

Comments