ವಿಕ್ಟೋರಿಯಾ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿಗೆ ಶಾಕ್ ಟ್ರೀಟ್‍ಮೆಂಟ್ ಕೊಟ್ಟ ಕಾಂಗ್ರೆಸ್ ನ ಚಾಣಕ್ಯ

15 Jun 2018 4:03 PM | Politics
3593 Report

ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್ ಇಂದು ನಗರದ ವಿಕ್ಟೋರಿಯಾ ಆಸ್ಪತ್ರೆಗೆ ಅನಿರೀಕ್ಷಿತ ಭೇಟಿ ನೀಡಿ ವೈದ್ಯರು ಮತ್ತು ಅಲ್ಲಿನ ಸಿಬ್ಬಂದಿಗೆ ಶಾಕ್ ಟ್ರೀಟ್‍ಮೆಂಟ್ ಕೊಟ್ಟರು. ಬೆಳಗ್ಗೆ 9 ಗಂಟೆಗೆ ಯಾರಿಗೂ ತಿಳಿಯದಂತೆ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದಾಗ ಆಸ್ಪತ್ರೆಯ ಸಿಬ್ಬಂದಿ ಒಂದು ಕ್ಷಣ ಸಚಿವರನ್ನು ಕಂಡು ದಂಗಾದರು.

ಸಚಿವರು ಆಗಮಿಸಿರುವುದನ್ನು ಕಂಡು ವಿಕ್ಟೋರಿಯಾ ಆಸ್ಪತ್ರೆಯ ಸಿಬ್ಬಂದಿ ಕಸಿವಿಸಿಗೊಂಡರು. ಮೊದಲು ವೈದ್ಯರು ಅವರನ್ನು ಆತ್ಮೀಯವಾಗಿ ಬರಮಾಡಿಕೊಳ್ಳಲು ಯತ್ನಿಸಿದರಾದರೂ ಅದಕ್ಕೆ ಡಿ.ಕೆ.ಶಿವಕುಮಾರ್ ಒಪ್ಪದೆ ನೇರವಾಗಿ ರೋಗಿಗಳ ಬಳಿ ತೆರಳಿ ಅವರನ್ನು ವಿಚಾರಿಸಿದರು. ನೀವು ಎಷ್ಟು ದಿನದಿಂದ ಆಸ್ಪತ್ರೆಗೆ ದಾಖಲಾಗಿದ್ದೀರಿ. ನಿಮಗಿರುವ ರೋಗವಾದರೂ ಏನು? ವೈದ್ಯರು ದಿನಕ್ಕೆ ಎಷ್ಟು ಬಾರಿ ಚಿಕಿತ್ಸೆ ಕೊಡುತ್ತಾರೆ, ಯಾವ ಸಮಯಕ್ಕೆ ಬರುತ್ತಾರೆ, ನಿಮ್ಮಿಂದೇನಾದರೂ ಹಣ ಪಡೆಯುತ್ತಾರೋ, ಔಷಧಿಯನ್ನು ಇಲ್ಲೇ ಕೊಡುತ್ತಾರೋ ಅಥವಾ ಹೊರಗಡೆ ತೆಗೆದುಕೊಳ್ಳುವಂತೆ ಬರೆದುಕೊಡುತ್ತಾರೋ, ಯಾರಾದರೂ ನಿಮಗೆ ಹಣ ನೀಡುವಂತೆ ಒತ್ತಡ ಹಾಕುತ್ತಾರೆಯೇ ಎಂದು ರೋಗಿಗಳಿಂದ ಮಾಹಿತಿ ಪಡೆದರು.

ಈ ವೇಳೆ ವೈದ್ಯರೊಬ್ಬರು ಮಧ್ಯಪ್ರವೇಶಿಸಿ ಪ್ರತಿಯೊಬ್ಬರಿಗೂ ಉತ್ತಮವಾದ ಗುಣಮಟ್ಟದ ಚಿಕಿತ್ಸೆಯನ್ನು ಆಸ್ಪತ್ರೆಯಲ್ಲಿ ನೀಡುತ್ತಿದ್ದೇವೆ ಎಂದು ಹೇಳಲು ಮುಂದಾಗುತ್ತಿದ್ದಂತೆ ಸಿಡಿಮಿಡಿಗೊಂಡ ಡಿ.ಕೆ.ಶಿವಕುಮಾರ್, ನಾನು ರೋಗಿಗಳನ್ನು ಕೇಳುತ್ತಿದ್ದೇನೆ. ಮಧ್ಯ ನೀವೇಕೆ ತಲೆ ಹಾಕುತ್ತಿದ್ದೀರಿ ಎಂದು ಗದರಿದರು.
ಬಳಿಕ ಡಿ.ಕೆ.ಶಿವಕುಮಾರ್ ರೋಗಿಗಳಿಂದ ದೂರು ಸ್ವೀಕರಿಸಿ ಆಸ್ಪತ್ರೆಯ ಸ್ವಚ್ಛತೆ, ಅಡುಗೆ ಕೋಣೆ, ಪ್ರಯೋಗಾಲಯ ಸೇರಿದಂತೆ ಮತ್ತಿತರ ಕಡೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು. ಸರ್ಕಾರಿ ಆಸ್ಪತ್ರೆಗೆ ಬರುವವರು ಬಡವರು. ಅವರಿಗೆ ತೊಂದರೆ ಕೊಡಬೇಡಿ. ನಿಮ್ಮನ್ನು ರೋಗಿಗಳು ದೇವರು ಎಂದು ಭಾವಿಸುತ್ತಾರೆ. ಅವರಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡಿ ಎಂದು ವೈದ್ಯರಿಗೆ ಸಲಹೆ ನೀಡಿದರು. ಈ ವೇಳೆ ಡಿ.ಕೆ.ಶಿವಕುಮಾರ್ ಅವರು ವಿಕ್ಟೋರಿಯಾ ಆಸ್ಪತ್ರೆಯ ವೈದ್ಯ ಡಾ.ಬಾಲಾಜಿ ಪೈ ಅವರಿಂದ ರಕ್ತದೊತ್ತಡ ತಪಾಸಣೆ ಮಾಡಿಸಿಕೊಂಡರು. ೧೭೦ /120 ಎಂ.ಎಲ್ ಒತ್ತಡವಿದೆ ಎಂದು ಸಚಿವರಿಗೆ ವೈದ್ಯರು ಮಾಹಿತಿ ನೀಡಿದರು.

Edited By

Shruthi G

Reported By

Shruthi G

Comments