ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಸೇವಾವಧಿ 3 ತಿಂಗಳು ವಿಸ್ತರಣೆ

30 Mar 2018 10:51 AM | Politics
459 Report

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ ಸೇವಾವಧಿಯನ್ನು ಮೂರು ತಿಂಗಳ ಕಾಲ ಅಂದರೆ ಜೂನ್ 30 2018ರ ವರೆಗೆ ವಿಸ್ತರಣೆ ಮಾಡಲಾಗಿದೆ. 1981ರ ತಂಡದ ಐಎಎಸ್‌ ಅಧಿಕಾರಿಯಾದ ರತ್ನಪ್ರಭಾ ಅವರು ಈ ತಿಂಗಳ 31 ರಂದು ಶನಿವಾರ ನಿವೃತ್ತಿಯಾಗಬೇಕಿತ್ತು. ಸೇವಾವಧಿಯನ್ನು ಮುಂದಿನ ಮೂರು ತಿಂಗಳು ವಿಸ್ತರಣೆ ಮಾಡುವಂತೆ ಸಿಎಂ ಸಿದ್ದರಾಮಯ್ಯ ಅವರು ಕಳೆದ ಫೆಬ್ರವರಿ 20 ರಂದು ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಿದ್ದರು. ಈ ಶಿಫಾರಸಿಗೆ ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಅನುಮೋದನೆ ನೀಡಿ ಗುರುವಾರ ರಾಜ್ಯದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ಮಾಹಿತಿ ರವಾನಿಸಿದೆ.

ಏಪ್ರಿಲ್‌ 1 ರಿಂದ ಜೂನ್‌ 30 ರವರೆಗೆ ರತ್ನಪ್ರಭಾ ಸೇವಾವಧಿ ವಿಸ್ತರಣೆ ಮಾಡಲಾಗಿದ್ದು, ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮುಖ್ಯ ಕಾರ್ಯದರ್ಶಿ ಬದಲಾವಣೆ ಮಾಡಲು ಬಯಸದ ರಾಜ್ಯ ಸರ್ಕಾರ ಸೇವಾವಧಿ ವಿಸ್ತರಣೆ ಮಾಡಲು ನಿರ್ಧರಿಸಿ ಕೇಂದ್ರಕ್ಕೆ ಶಿಫಾರಸು ಮಾಡಿತ್ತು. ಮೂಲಗಳ ಪ್ರಕಾರ ರತ್ನಪ್ರಭಾ ಅವರ ಸೇವಾವಧಿ ವಿಸ್ತರಣೆಗೆ ಶಿಫಾರಸ್ಸು ಮಾಡಿ ಸಿಎಂ ಸಿದ್ದರಾಮಯ್ಯ ಅವರ ಕಚೇರಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದು, ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಚುನಾವಣಾ ಕಾರ್ಯವನ್ನು ಸಮರ್ಪಕವಾಗಿ ನಡೆಸುವ ಉದ್ದೇಶದಿಂದ ಮುಖ್ಯ ಕಾರ್ಯದರ್ಶಿಗಳ ಸೇವಾ ಅವಧಿಯನ್ನು 3 ತಿಂಗಳು ವಿಸ್ತರಿಸುವಂತೆ ರಾಜ್ಯ ಸರ್ಕಾರ ಶಿಫಾರಸು ಮಾಡಿದೆ ಎನ್ನಲಾಗಿದೆ.

ಇನ್ನು ರಾಜ್ಯ ಸರ್ಕಾರದ ಪತ್ರಕ್ಕೆ ಕೇಂದ್ರ ಸರ್ಕಾರ ಇನ್ನೂ ಪ್ರತಿಕ್ರಿಯೆ ನೀಡಿಲ್ಲವಾದರೂ, ಕೇಂದ್ರದ ಸಿಬ್ಬಂದಿ ಮತ್ತು ತರಬೇತಿ ಸಚಿವಾಲಯ ಈ ಕುರಿತು ನಿರ್ಧಾರ ತೆಗೆದುಕೊಳ್ಳಲಿದೆ. 2017ರ ನವೆಂಬರ್​ 30 ರಂದು ಮುಖ್ಯ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಿದ್ದ ರತ್ನಪ್ರಭಾ ಅವರು ಮಾರ್ಚ್​ 31 ರಂದು ನಿವೃತ್ತರಾಗಲಿದ್ದಾರೆ. 1981ರ ಐಎಎಸ್ ಬ್ಯಾಚ್ ಅಧಿಕಾರಿಯಾದ ರತ್ನಪ್ರಭಾ ಅವರ ಮೂಲ ಆಂಧ್ರ್ರ ಪ್ರದೇಶವಾಗಿದೆ. ಇವರು ತೆಲುಗು, ಕನ್ನಡ, ಕೊಂಕಣಿ, ಫ್ರೆಂಚ್, ಇಂಗ್ಲಿಷ್ ಭಾಷೆ ಬಲ್ಲವರಾಗಿದ್ದು, ರಾಜ್ಯದ ವಿವಿಧೆಡೆ ಜಿಲ್ಲಾಧಿಕಾರಿಯಾಗಿ, ಸರ್ಕಾರದ ಪ್ರಮುಖ ಇಲಾಖೆಗಳನ್ನು ನಿಭಾಯಿಸಿದ್ದಾರೆ. ವಿಶೇಷವಾಗಿ ಕೈಗಾರಿಕೆ ಹಾಗೂ ವಾಣಿಜ್ಯ ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿ ಮಹಿಳೆಯರ ಉದ್ಯಮಶೀಲತೆ ವೃದ್ಧಿಸಲು ಹೆಚ್ಚಿನ ಕೆಲಸ ಮಾಡಿದ್ದಾರೆ.

 

Edited By

Shruthi G

Reported By

Shruthi G

Comments