ಜೆಡಿಎಸ್ ‘ವಿಕಾಸಪರ್ವದ’ ಶಕ್ತಿ ಪ್ರದರ್ಶಕ್ಕೆ ಸೋತು ಹೋದ ರಾಷ್ಟ್ರೀಯ ಪಕ್ಷಗಳು..!!

17 Feb 2018 6:43 PM | Politics
30809 Report

ವಿಧಾನಸಭೆ ಚುನಾವಣೆಗೆ ಜೆಡಿಎಸ್ ರಣಕಹಳೆ ಮೊಳಗಿಸಿದೆ. ಕಾಂಗ್ರೆಸ್, ಬಿಜೆಪಿ ರಾಷ್ಟ್ರೀಯ ಪಕ್ಷಗಳಿಗೆ ಸೆಡ್ಡು ಹೊಡೆಯುವ ಮೂಲಕ ರಾಜಧಾನಿ ಬೆಂಗಳೂರಿನಲ್ಲಿ ಪ್ರಾದೇಶಿಕ ಪಕ್ಷ ಜೆಡಿಎಸ್ ತನ್ನ ಶಕ್ತಿ ಪ್ರದರ್ಶನವನ್ನು ಅನಾವರಣಗೊಳಿಸಿತು. ನಗರದ ಹೊರವಲಯದ ಯಲಹಂಕದ ನಿಟ್ಟೆ ಮೀನಾಕ್ಷಿ ಕಾಲೇಜು ಮುಖ್ಯರಸ್ತೆಯಲ್ಲಿ ಏರ್ಪಡಿಸಿದ್ದ ಬೃಹತ್ ಸಮಾವೇಶಕ್ಕೆ ರಾಜ್ಯದ ವಿವಿಧೆಡೆಯಿಂದ ಸಹಸ್ರಾರು ಸಂಖ್ಯೆ ಯಲ್ಲಿ ಕಾರ್ಯಕರ್ತರು ಆಗಮಿಸಿದ್ದು ಪಕ್ಷದ ಹುಮ್ಮಸ್ಸನ್ನು ನೂರ್ಮಡಿಗೊಳಿಸಿತು.

ಬಿಎಸ್‍ಪಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಚುನಾವಣೆ ರಣತಂತ್ರ ಹೆಣೆದಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಜೆಡಿಎಸ್ ಪಕ್ಷಕ್ಕೆ ಇದೊಂದು ಐತಿಹಾಸಿಕ ಸಮಾವೇಶವೆಂದೇ ಹೇಳಲಾಗಿದೆ. ಇಂದು ನಡೆದ ಸಮಾವೇಶದಲ್ಲಿ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ, ಬಹುಜನ ಸಮಾಜ ಪಾರ್ಟಿ ಅಧ್ಯಕ್ಷೆ ಮಾಯಾವತಿ ಆಗಮಿಸಿದ್ದು, ಪ್ರಾದೇಶಿಕ ಪಕ್ಷಗಳ ಒಗ್ಗಟ್ಟಿನ ನೆಲೆಯನ್ನು ಗಟ್ಟಿಗೊಳಿಸಿತು. ಬಿಜೆಪಿ, ಕಾಂಗ್ರೆಸ್ ಪಕ್ಷಗಳ ವಿರುದ್ಧ ಆರೋಪಗಳನ್ನು ಹೆಚ್ಚಾಗಿ ಮಾಡದೆ ಜೆಡಿಎಸ್ ಪಕ್ಷ ಈ ಹಿಂದೆ ರಾಜ್ಯದ ಜನರಿಗೆ ಮಾಡಿದ ಜನಪರ ಕಾರ್ಯಕ್ರಮಗಳು, ಮುಂದೆ ಚುನಾವಣೆಯಲ್ಲಿ ಜನರ ಅಭಿವೃದ್ಧಿಗೋಸ್ಕರ ಹಮ್ಮಿಕೊಂಡಿರುವ ಭವಿಷ್ಯದ ಯೋಜನೆಗಳನ್ನಷ್ಟೇ ಹೇಳಲು ಸಮಾವೇಶವನ್ನು ಸೀಮಿತಗೊಳಿಸಿದ್ದು ಅತ್ಯಂತ ವಿಶೇಷವಾಗಿತ್ತು.

ಅಲ್ಪಸಂಖ್ಯಾತರು, ದಲಿತರು, ಹಿಂದುಳಿದವರು, ಸಮಾಜದ ಎಲ್ಲ ವರ್ಗದವರು ಸಮಾವೇಶಕ್ಕೆ ಭಾರೀ ಸಂಖ್ಯೆಯಲ್ಲಿ ಆಗಮಿಸಿದ್ದರು. ಸುಮಾರು 500 ಎಕರೆ ಪ್ರದೇಶದಲ್ಲಿ 5 ಲಕ್ಷಕ್ಕೂ ಹೆಚ್ಚು ಜನ ಭಾಗವಹಿಸಲು ವ್ಯವಸ್ಥೆ ಮಾಡಲಾಗಿತ್ತು. 100 ಎಲ್‍ಇಡಿ ಟಿವಿ ಪರದೆಗಳನ್ನು ಅಳವಡಿಸಲಾಗಿತ್ತು. ಸಮಾರಂಭಕ್ಕೆ ಆಗಮಿಸುವ ಎಲ್ಲರಿಗೂ ಬೆಳಗ್ಗೆ 9 ಗಂಟೆಯಿಂದಲೇ ಉಪಹಾರ, ಊಟದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಕಲ್ಪಿಸಲಾಗಿತ್ತು.ಅಭಿವೃದ್ಧಿಗಾಗಿ ಅಧಿಕಾರ: ಜನಸಾಮಾನ್ಯರಿಗೆ ಸರ್ಕಾರ ವಿಕಾಸ ಪರ್ವ ಎಂಬ ಶೀರ್ಷಿಕೆಯಡಿ ಕಾರ್ಯಕ್ರಮ ಆಯೋಜಿಸಿದ್ದು, ಜೆಡಿಎಸ್ ತನ್ನ ಚುನಾವಣಾ ಭರವಸೆಗಳನ್ನು ಈ ಸಂದರ್ಭದಲ್ಲಿ ಪ್ರಕಟಿಸಿದೆ. ನಾವು ಅಧಿಕಾರಕ್ಕೆ ಬಂದರೆ ರೈತರ ಸಂಪೂರ್ಣ ಸಾಲ ಮನ್ನಾ, ಕೃಷಿಕರ ಬಾಳನ್ನು ಹಸನುಗೊಳಿಸಲು ಇಸ್ರೇಲ್ ಮಾದರಿಯ ತಂತ್ರಜ್ಞಾನ ಅಳವಡಿಕೆ, ಗರ್ಭಿಣಿ, ಬಾಣಂತಿಯರಿಗೆ ಆರು ತಿಂಗಳ 6 ಸಾವಿರದಂತೆ ಆರೋಗ್ಯ ಭತ್ಯೆ, 70 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಪ್ರತಿ ತಿಂಗಳು 5 ಸಾವಿರ ಗೌರವ ಧನ, ಆಟೋ ಚಾಲಕರಿಗೆ ಅಗತ್ಯ ಸೌಲಭ್ಯ ಸೇರಿದಂತೆ ಸಮಾಜದ ತಳಸ್ಥರದವರನ್ನು ಮೇಲೆತ್ತುವ ಭವಿಷ್ಯದ ಯೋಜನೆಗಳನ್ನು ಸಮಾರಂಭದಲ್ಲಿ ಅನಾವರಣಗೊಳಿಸಲಾಯಿತು.ಅದೇ ರೀತಿ ಅಭ್ಯರ್ಥಿಗಳು ಮುಂದಿನ ಚುನಾವಣೆಯ ಹುರಿಯಾಳುಗಳನ್ನು ಪ್ರಕಟಿಸಿದ ಪಕ್ಷದ ನೇತಾರರು ಪ್ರಾಮಾಣಿಕವಾಗಿ, ಭ್ರಷ್ಟಾಚಾರ ರಹಿತವಾಗಿ ಕೆಲಸ ಮಾಡುತ್ತೇವೆ ಎಂಬ ಪ್ರಮಾಣ ವಚನ ಬೋಧಿಸಿದರು. ಜೆಡಿಎಸ್ ಕೈಗೊಂಡ ಜನಪರ ಕೆಲಸಗಳು, ಮುಂದೆ ಕೈಗೊಳ್ಳಲಿರುವ ಭವಿಷ್ಯದ ಅಭಿವೃದ್ಧಿ ಯೋಜನೆಗಳನ್ನು ಬಿಂಬಿಸುವ ಸಾಕ್ಷ್ಯಚಿತ್ರದ ಪ್ರಚಾರದ ವಾಹನಗಳಿಗೆ ಈ ಸಂದರ್ಭದಲ್ಲಿ ಚಾಲನೆ ನೀಡಲಾಯಿತು. ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡ್ಯಾನಿಶ್ ಆಲಿ, ಮುಖಂಡರಾದ ಪಿ.ಜಿ.ಆರ್.ಸಿಂಧ್ಯಾ, ವೈ.ಎಸ್.ವಿ.ದತ್ತ, ಟಿ.ಎ.ಶರವಣ, ರಮೇಶ್‍ಬಾಬು, ಸಂಸದ ಪುಟ್ಟರಾಜು, ಗೋಪಾಲಯ್ಯ, ಶಾಸಕರು, ವಿಧಾನ ಪರಿಷತ್ ಸದಸ್ಯರು, ಮಾಜಿ ಶಾಸಕರು, ಮಾಜಿ ಸಚಿವರು ಪಕ್ಷದ ಪದಾಧಿಕಾರಿಗಳು ಸೇರಿದಂತೆ ಹಲವು ಗಣ್ಯರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

 

Edited By

Shruthi G

Reported By

Shruthi G

Comments