ಬಳ್ಳಾರಿ ಕ್ಷೇತ್ರದಲ್ಲಿ ಬಿಜೆಪಿಯಿಂದ ಹೊರಬಿದ್ದ ಅಚ್ಚರಿ ಅಭ್ಯರ್ಥಿ..!!

14 Feb 2018 3:34 PM | Politics
712 Report

ಬಳ್ಳಾರಿ ಜಿಲ್ಲಾ ಬಿಜೆಪಿಯಲ್ಲಿ ಅಚ್ಚರಿಯ ಹೆಸರೊಂದು ಮೇಲ್ಪಂಕ್ತಿಗೆ ಬರುತ್ತಿದೆ. ಕಳಂಕಿತರನ್ನು ಸಕ್ರಿಯ ರಾಜಕೀಯದಿಂದ ದೂರವೇ ಇರಿಸಲು ಮತ್ತು ಕಳಂಕಿತರಿಂದ ಅಂತರ ಕಾಪಾಡಿಕೊಳ್ಳಲು ನಿರ್ಧರಿಸಿರುವ ಬಿಜೆಪಿ ರಾಷ್ಟ್ರ ಮುಖಂಡರು, ಬಳ್ಳಾರಿ ಜಿಲ್ಲೆಯಿಂದ ಪ್ರಯೋಗ ಮಾಡಲು ಮುಂದಾಗಿದ್ದಾರೆ. ಗಾಲಿ ರೆಡ್ಡಿ ಸಹೋದರರನ್ನು ಎದುರು ಹಾಕಿಕೊಳ್ಳಲು ಸಿದ್ದವಿಲ್ಲದ ಸ್ಥಿತಿಯಲ್ಲಿದ್ದ ಬಿಜೆಪಿ ಈ ಚುನಾವಣೆಯಿಂದಲೇ ರೆಡ್ಡಿ ಸಹೋದರನ್ನು ಕೈಬಿಟ್ಟು ಜಿಲ್ಲೆಯಲ್ಲಿ ರಾಜಕೀಯ ನಡೆಸಲು ಮುಂದಾಗಿದೆ.

ಬಿ.ಎಸ್. ಆನಂದಸಿಂಗ್, ಬಿ. ನಾಗೇಂದ್ರ ಬಿಜೆಪಿಯನ್ನು ಬಿಟ್ಟ ನಂತರ ಇಡೀ ಪಕ್ಷವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡಿರುವ ಸಂತೋಷ್ ಜೀ ಮತ್ತು ಆರ್‍ಎಸ್‍ಎಸ್, ಸಂಘ ಪರಿವಾರ ಬೇಲ್‍ ಡೀಲ್‍ನಲ್ಲಿ ಬಂಧಿತರಾಗಿ, ಜಾಮೀನಿನ ಮೇಲಿರುವ ಗಾಲಿ ಸೋಮಶೇಖರರೆಡ್ಡಿ ಅವರಿಗೆ ಪರ್ಯಾಯ ಅಭ್ಯರ್ಥಿಯನ್ನು ಅಂತಿಮಗೊಳಿಸಿದ್ದಾರೆ.ಜಿ. ಸೋಮಶೇಖರೆಡ್ಡಿ ಅವರಿಗೆ ಪರ್ಯಾಯವಾಗಿ ಡಾ. ಬಿ.ಕೆ. ಸುಂದರ್ ಅವರ ಹೆಸರನ್ನು ಪಕ್ಷ ಅಂತಿಮಗೊಳಿಸಿದೆ. ಅಲ್ಲದೇ, ಚುನಾವಣೆಗೆ ಸಿದ್ಧತೆ ನಡೆಸಲು ಸೂಕ್ಷಮವಾಗಿ ಗ್ರೀನ್‍ ಸಿಗ್ನಲ್ ನೀಡಿದೆ. ಡಾ. ಬಿ.ಕೆ. ಸುಂದರ್ ಅವರು ಕೂಡ, ಪ್ರಥಮ ಸುತ್ತಿನಲ್ಲಿ ತಮ್ಮ ವೈದ್ಯಕೀಯ ವೃತ್ತಿಯ ಆಪ್ತರು, ಮಿತ್ರರು ಮತ್ತು ವೃತ್ತಿಬಾಂಧವನ್ನು ವೈಯಕ್ತಿಕವಾಗಿ ಭೇಟಿ ಮಾಡುತ್ತಿದ್ದು, ಕಣಕ್ಕಿಳಿಯಲು ಸಜ್ಜಾಗುತ್ತಿದ್ದಾರೆ.ಅಷ್ಟೇ ಅಲ್ಲ, ಸುಷ್ಮಾಸ್ವರಾಜ್ ಅವರ ಸಂಪೂರ್ಣ ಬೆಂಬಲ ಪಡೆದಿರುವ ಸುಂದರ್, ಕಳೆದ 2 ವರ್ಷಗಳಿಂದ ಪಕ್ಷದ ವಿವಿಧ ವೇದಿಕೆಗಳಲ್ಲಿ ರಾಜ್ಯ - ರಾಷ್ಟ್ರ ಬಿಜೆಪಿ ಮುಖಂಡರ ಜೊತೆ ಆಪ್ತ ಸಮಾಲೋಚನೆ ನಡೆಸಿದ್ದಾರೆ.

ಕಳೆದಬಾರಿ ಶೋಭಾಕರಂದ್ಲಾಜೆ ಅವರು ಬಳ್ಳಾರಿಗೆ ಭೇಟಿ ನೀಡಿದಾಗ, ಡಾ. ಬಿ.ಕೆ. ಸುಂದರ್, ಅವರ ತಂದೆ ಡಾ. ಬಿ.ಕೆ. ಶ್ರೀನಿವಾಸಮೂರ್ತಿ ಅವರೊಂದಿಗೂ ರಾಜಕೀಯ ಪ್ರವೇಶದ ಚರ್ಚೆ ನಡೆಸಿದ್ದರು ಎನ್ನಲಾಗಿದೆ.ಸುಷ್ಮಾಸ್ವರಾಜ್ ಅವರ ಬೆಂಬಲದಿಂದಲೇ ರಾಜಕೀಯ ಪ್ರವೇಶವನ್ನು ಮಾಡುತ್ತಿರುವ ಡಾ. ಬಿ.ಕೆ. ಸುಂದರ್, ಸೈಕ್ಲಿಂಗ್, ಪರಿಸರ ಜಾಗೃತಿ, ಆರೋಗ್ಯ ಶಿಬಿರಗಳನ್ನು ಏರ್ಪಡಿಸುವ ಮೂಲಕ ಗುಪ್ತವಾಗಿ ಜನಸಂಪರ್ಕ ಸಾಧಿಸುತ್ತಿದ್ದಾರೆ. ಜಿ. ಸೋಮಶೇಖರರೆಡ್ಡಿ ಮತ್ತು ರೆಡ್ಡಿ ಪರಿವಾರವನ್ನು ವಿರೋಧಿಸುವ ಎಲ್ಲರೂ ಇವರೊಂದಿಗೆ ಗುರುತಿಸಿಕೊಳ್ಳಲು ಉತ್ಸುಕರಾಗಿದ್ದಾರೆ.ಡಾ.ಬಿ.ಕೆ. ಶ್ರೀನಿವಾಸಮೂರ್ತಿ ಮತ್ತು ಅವರ ಕುಟುಂಬದ ಸದಸ್ಯರ ಜೊತೆಯಲ್ಲಿ ನಿರಂತರ ಸಂಪರ್ಕ ಹೊಂದಿರುವ ಸುಷ್ಮಾ ಸ್ವರಾಜ್ ಅವರು ಶುದ್ಧಹಸ್ತದವರಿಗೆ ರಾಜಕೀಯ ಅವಕಾಶ ಕಲ್ಪಿಸಬೇಕು ಎನ್ನುವ ವಿಚಾರಕ್ಕೆ ಬೆಂಬಲ ನೀಡಿ, ಡಾ. ಬಿ.ಕೆ. ಸುಂದರ್ ಅವರ ಹೆಸರನ್ನು ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ಅವರೇ ಶಿಫಾರಸ್ಸು ಮಾಡಿದ್ದಾರೆ ಎಂದು ಮೂಲಗಳು ಬಲಪಡಿಸಿವೆ.

Edited By

Shruthi G

Reported By

Shruthi G

Comments