ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೆ ಡೇಟ್ ಫಿಕ್ಸ್ ಮಾಡಿದ ದೇವೇಗೌಡ್ರು..!

10 Feb 2018 10:47 AM | Politics
569 Report

ಬಿಜೆಪಿ, ಕಾಂಗ್ರೆಸ್ ಪಕ್ಷಗಳು ಇತ್ತೀಚಿಗೆ ಕಾದಾಟದಲ್ಲಿ ತೊಡಗಿಕೊಂಡು ಅವರವರೇ ಜಗಳವಾಡುತ್ತಿರುವುದರಿಂದ ಜನರ ಚಿತ್ತ ಜೆಡಿಎಸ್ ನತ್ತ ಹರಿದಿದೆ. ಮಣ್ಣಿನ ಮಗ ಎಚ್ ಡಿ ದೇವೇಗೌಡರು ರಾಜಕೀಯ ಚಾಣಾಕ್ಷ ತನದಿಂದ ಜನರಲ್ಲಿ ಜೆಡಿಎಸ್ ಅಲೆ ಎಬ್ಬಿಸುತ್ತಿದ್ದರೆ. ಅಲ್ಲದೆ ವಿರೋಧ ಪಕ್ಷಗಳ ಮಾತಿಗೆ ತಲೆಕೆಡಿಸಿಕೊಳ್ಳದೆ ಕಾಯಕವೇ ಕೈಲಾಸವೆಂದು ಜನಪ್ರತಿನಿಧಿಗಳಿಗೆ ತಮ್ಮ ಪಕ್ಷದ ವಿಚಾರ, ಯೋಜನೆಗಳನ್ನು ತಲುಪಿಸುವುದರೊಂದಿಗೆ ಜನರ ಸಂಕಷ್ಟಗಳಲಿ ಭಾಗಿಯಾಗುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ರಾಜ್ಯದ ಜನತೆಯ ಮನದಲ್ಲಿ ಜೆಡಿಎಸ್ ಮನೆ ಮಾಡಿದೆ ಎಂದೇ ಹೇಳಬಹುದು.

ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು, ಜೆಡಿಎಸ್ ಗೆ ನಾನು, ಕುಮಾರಸ್ವಾಮಿಯೇ ಸ್ಟಾರ್ ಕ್ಯಾಂಪೇನರ್. ಪಕ್ಷಕ್ಕೆ ಆರ್ಥಿಕ ಬಲ ಇಲ್ಲ. ನಮ್ಮ 8 ಜನರ ನಾಯಕರೇ 3 ತಂಡವಾಗಿ ರಾಜ್ಯವ್ಯಾಪಿ ಒಂದು ತಿಂಗಳು ಪ್ರಚಾರ ನಡೆಸಲು ಸಿದ್ಧತೆ ನಡೆದಿದೆ. ಫೆ.17ರಂದು ಬೆಂಗಳೂರಿನಲ್ಲಿ ಸಮಾವೇಶ ನಡೆಸಿ ಅಭ್ಯರ್ಥಿಗಳ ಮೊದಲ ಪಟ್ಟಿಬಿಡುಗಡೆ ಮಾಡಲಾಗುವುದು ಎಂದರು. ಈ ವೇಳೆ ಬಿಎಸ್ಪಿಯ 20 ಸ್ಥಾನ ಹಂಚಿಕೆ ಅಂತಿಮಗೊಳಿಸಲಾಗುತ್ತದೆ. ಸಮಾವೇಶಕ್ಕೆ ಮಾಯವತಿ ಆಗಮಿಸಲಿದ್ದು, 4 ಲಕ್ಷ ಜನ ಸೇರಲಿದ್ದಾರೆ. ಮಾರ್ಚ್ ಅಂತ್ಯಕ್ಕೆ ಕೊನೆಯ ಪಟ್ಟಿಬಿಡುಗಡೆಯಾಗಲಿದೆ. ಈ ಬಾರಿ ಜೆಡಿಎಸ್ ಅಧಿಕಾರಕ್ಕೆ ಬರುವುದು ಖಚಿತ ಎಂದರು. ಇದೇ ವೇಳೆ ಪ್ರಶ್ನೆಯೊಂದಕ್ಕೆ ಉತ್ತರಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಠಗಳು ಸೇರಿ ತುಂಬಾ ವಿಷಯಗಳ ಮೇಲೆ ಕಣ್ಣು ಹಾಕಿದ್ದಾರೆ. ಆ ಚರ್ಚೆ ಈಗ ಬೇಡ. ಚುನಾವಣೆಗೀಗ 3 ತಿಂಗಳಿದೆ. ಕಾಂಗ್ರೆಸ್, ಬಿಜೆಪಿ ತಲಾ 5 ವರ್ಷ ರಾಜ್ಯ ಆಳಿವೆ. ಜೆಡಿಎಸ್ ಗೂ 5 ವರ್ಷ ಅಧಿಕಾರ ಕೊಡಿ ಎಂದು ಜನರಲ್ಲಿ ಬೇಡುತ್ತಿದ್ದೇವೆ. ಮುಂಬೈ-ಕರ್ನಾಟಕದಲ್ಲಿ ಜೆಡಿಎಸ್ ಗೆ ಬೆಂಬಲ ಇಲ್ಲ ಎನ್ನುವ ಪ್ರಚಾರ ಆಗಿತ್ತು. ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಅವರ ಕೆಲಸದ ಬಗ್ಗೆ ನಾನು ಸರ್ಟಿಫಿಕೇಟ್ ಕೊಡೊಲ್ಲ. ಜನರೇ ಕೊಡುತ್ತಾರೆ. ಅವರು ಪ್ರತಿನಿಧಿಸುವ ಬಬಲೇಶ್ವರದ ಸ್ಥಾನವನ್ನು ಹೊಂದಾಣಿಕೆಯನ್ವಯ ಬಿಎಸ್ಪಿಯವರು ಕೇಳಿದ್ದಕ್ಕೆ ಬಿಟ್ಟುಕೊಟ್ಟಿದ್ದೇವೆ. ಇದರಲ್ಲಿ ಯಾವುದೇ ಹೊಂದಾಣಿಕೆ ಇಲ್ಲ. ತಪ್ಪು ಕಲ್ಪನೆ ಬೇಡ ಎಂದರು.

 

Edited By

Shruthi G

Reported By

Madhu shree

Comments