'ಕೈ' ಬಿಟ್ಟು 'ತೆನೆ' ಹೊತ್ತ ಮುಖಂಡರು.!!

10 Feb 2018 9:37 AM | Politics
6296 Report

ಕ್ಷೇತ್ರ ವ್ಯಾಪ್ತಿಯ ಗಡಿಯಂಚಿನ ಬೈಲೂರು ಪಂಚಾಯತ್ 8 ಸದಸ್ಯರು ಕಾಂಗ್ರೆಸ್ ಪಕ್ಷದ ಬೆಂಬಲಿತರಾಗಿದ್ದರು. ಆದರೆ ಸ್ಥಳೀಯ ಜಿ.ಪಂ ಸದಸ್ಯೆಯ ಪತಿಯ ಕಿರುಕುಳದಿಂದ ಬೇಸತ್ತು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿರುವುದು ಉತ್ತಮ ಬೆಳವಣಿಗೆ ಎಂದು ಜೆಡಿಎಸ್ ಅಭ್ಯರ್ಥಿ ಲೋಕೇಶ್ ಮೌರ್ಯ ತಿಳಿಸಿದರು.

ಕ್ಷೇತ್ರ ವ್ಯಾಪ್ತಿಯ ಬೈಲೂರು ಗ್ರಾಮ ಪಂಚಾಯತ್ ನ 8 ಸದಸ್ಯರ ಪೈಕಿ 4 ಜನ ಕಾಂಗ್ರೆಸ್ ಪಕ್ಷ ತೊರೆದು ಜೆಡಿಎಸ್ ಸೇರ್ಪಡೆಗೊಳ್ಳಲು ತೀರ್ಮಾನ ಕೈಗೊಂಡಿದ್ದ ಹಿನ್ನೆಲೆಯಲ್ಲಿ, ಸದಸ್ಯರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಮಾತನಾಡಿದ ಲೋಕೇಶ್ ಮೌರ್ಯ, ಬೈಲೂರು ಗ್ರಾಮ ಪಂಚಾಯತ್ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಆದರೆ ಲೊಕ್ಕನಹಳ್ಳಿ ಜಿ.ಪಂ ಸದಸ್ಯೆಯ ಪತಿಯವರ ಕಿರುಕುಳದಿಂದ ಬೇಸತ್ತು ಕಾಂಗ್ರೆಸ್ ತೊರೆದು ಜೆಡಿಎಸ್‍ಗೆ ಸೇರ್ಪಡೆಗೊಂಡಿರುವುದು ಸ್ವಾಗತಾರ್ಹ. ಇಲ್ಲಿ ತನಕ ಪಂಚಾಯತ್ ನಲ್ಲಿ 8 ಜನ ಸದಸ್ಯರಿದ್ದು, ಕಾಂಗ್ರೆಸ್ ಬೆಂಬಲಿತ ಪಂಚಾಯತ್ ಆಗಿತ್ತು. ಆದರೆ ಇದೀಗ ಅಧ್ಯಕ್ಷ, ಉಪಾಧ್ಯಕ್ಷ ಸೇರಿದಂತೆ ಒಟ್ಟು 4ಜನ ಸದಸ್ಯರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಇದೀಗ ಬೈಲೂರು ಪಂಚಾಯತ್ ಜೆಡಿಎಸ್ ತೆಕ್ಕೆಗೆ ಬಂದಂತಾಗಿದೆ ಎಂದು ತಿಳಿಸಿದರು.

ಬೈಲೂರು ಗ್ರಾಮ ಪಂಚಾಯತ್ ಜೆಡಿಎಸ್ ಬೆಂಬಲಿತವಾಗಿರುವುದರಿಂದ ಮುಂದಿನ ಸಾರ್ವತ್ರಿಕ ಚುನಾವಣೆಯ ಪ್ರಚಾರವನ್ನು ಬೈಲೂರಿನಿಂದಲೇ ಆರಂಭಿಸುತ್ತೇವೆ. ಫೆಬ್ರವರಿ ತಿಂಗಳ ಅಂತ್ಯದಲ್ಲಿ ಕ್ಷೇತ್ರಕ್ಕೆ ಕುಮಾರಣ್ಣ ಆಗಮಿಸಲಿದ್ದು, 2 ದಿನದ ಕಾರ್ಯಕ್ರಮ ನಡೆಯಲಿದೆ. ಒಂದು ದಿನ ಕ್ಷೇತ್ರದಲ್ಲಿ ರೋಡ್‍ಶೋ ನಡೆಸಲಿದ್ದು, ಮತ್ತೊಂದು ದಿನ ಕುಮಾರ ಪರ್ವ ಸಮಾವೇಶ ನಡೆಯಲಿದೆ. ಕ್ಷೇತ್ರದಾದ್ಯಂತ ಜೆಡಿಎಸ್ ಪರವಾಗಿ ಉತ್ತಮ ಅಲೆಯಿದ್ದು, ಹನೂರು ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲುವು ಸಾಧಿಸಿ, ಕುಮಾರಣ್ಣ ಮುಖ್ಯಮಂತ್ರಿಯಾಗುವುದು ಸೂರ್ಯ ಚಂದ್ರರಷ್ಟೇ ಸತ್ಯ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಬೈಲೂರು ಗ್ರಾ.ಪಂ ಅಧ್ಯಕ್ಷ ಕೆಂಪರಾಜು, ಸದಸ್ಯರಾದ ಗುಂಡಿಮಾಳ ಮಾರಪ್ಪ, ನಾಗೇಂದ್ರಮೂರ್ತಿ, ಹುತ್ತೂರು ಗ್ರಾ.ಪಂ ಸದಸ್ಯ ಕೃಷ್ಣಮೂರ್ತಿ, ಮುಖಂಡರಾದ ಮಹೇಶ್, ಮಾದೇವಶೆಟ್ಟಿ, ದೊಡ್ಡಯ್ಯ, ಪ್ರಸನ್ನ ಇನ್ನಿತರರು ಹಾಜರಿದ್ದರು.

Edited By

Shruthi G

Reported By

Shruthi G

Comments