ಜೆಡಿಎಸ್ ನ ತಂತ್ರಕ್ಕೆ ತಾವು ತೊಡಿಕೊಂಡ ಗುಂಡಿಗೆ ತಾವೇ ಬಿದ್ರಾ ಸಿಎಂ ಸಿದ್ದರಾಮಯ್ಯ ..!!

09 Feb 2018 1:04 PM | Politics
16692 Report

ಒಂದು ಕಾಲದಲ್ಲಿ ಜೆಡಿಎಸ್ ನ ಭಿನ್ನಮತೀಯ ಶಾಸಕರನ್ನು ತಮ್ಮ ಕಡೆ ಸೆಳೆದುಕೊಂಡು ಮೈನಸ್ ಡಿಗ್ರಿ ಪಾಲಿಟಿಕ್ಸ್ ನ ರುಚಿಯನ್ನು ಜೆಡಿಎಸ್ ಗೆ ತೋರಿಸಿದ್ದ ಸಿದ್ಧರಾಮಯ್ಯ ಈಗ ತಾವೇ ಮೈನಸ್ ಡಿಗ್ರಿ ಪಾಲಿಟಿಕ್ಸ್ ನ ಹೊಡೆತವನ್ನು ಎದುರಿಸಬೇಕಾಗಿದೆ. ಈ ಹಿಂದೆ ಜೆಡಿಎಸ್ ನ ಶಾಸಕರನ್ನು ತಮ್ಮತ್ತ ಸೆಳೆದುಕೊಂಡ ಸಿಎಂಗೆ ಟಾಂಗ್ ಕೊಡಲು ಜೆಡಿಎಸ್ ಮುಂದಾಗಿದೆ. ಕಾಂಗ್ರೆಸ್ ನ ವೋಟ್ ಬ್ಯಾಂಕ್ ಗೆ ಜೆಡಿಎಸ್ ಗುನ್ನ ಹೊಡೆದು ಸಿದ್ದರಾಮಯ್ಯನವರ ರಾಜಕೀಯ ತಂತ್ರವನ್ನೆಲ್ಲ ಉಲ್ಟಾ ಹೊಡೆಯೋ ಹಾಗೆ ಮಾಡಿದೆ.

ದೇಶದ ಪ್ರಬಲ ದಲಿತ ನಾಯಕಿ, ಬಹುಜನ ಸಮಾಜ ಪಕ್ಷದ ಧುರೀಣೆ ಮಾಯಾವತಿ ಜತೆ ಮುಂಬರುವ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಪೂರ್ವಭಾವಿ ಹೊಂದಾಣಿಕೆ ಮಾಡಿಕೊಂಡಿರುವುದೇ ಅದಕ್ಕೆ ಸಾಕ್ಷಿ. ಯಾರೇನೇ ಹೇಳಲಿ, ತಮ್ಮ ವರ್ಚಸ್ಸಿನ ಮೂಲಕ ತಮ್ಮ ಸಮುದಾಯದ ಮತಗಳನ್ನು ಗಣನೀಯ ಪ್ರಮಾಣದಲ್ಲಿ ಬೇರೆ ಜಾತಿಯ ಅಭ್ಯರ್ಥಿಗಳಿಗೆ ಹಾಕಿಸಬಲ್ಲ ಶಕ್ತಿ ಮಾಯಾವತಿ ಅವರಿಗಿದೆ. ಅಂತಹ ಶಕ್ತಿ ಇರುವ ಕರ್ನಾಟಕದ ನಾಯಕರು ಎಂದರೆ ದೇವೇಗೌಡ, ಯಡಿಯೂರಪ್ಪ ಹಾಗೂ ಸಿದ್ಧರಾಮಯ್ಯ. ಹೀಗಾಗಿ ಜೆಡಿಎಸ್ ಹಾಗೂ ಬಿ.ಎಸ್.ಪಿ ಪಕ್ಷಗಳ ನಡುವಣ ಹೊಂದಾಣಿಕೆ ನಿಶ್ಚಿತವಾಗಿ ಕಾಂಗ್ರೆಸ್ ನ ದಲಿತ ವೋಟ್ ಬ್ಯಾಂಕ್ ಷೇರು ಬಂಡವಾಳವನ್ನು ಕುಗ್ಗಿಸುತ್ತದೆ.

ವಸ್ತುಸ್ಥಿತಿ ಎಂದರೆ, ದಲಿತ ವರ್ಗದ ಬಲಗೈ ಸಮುದಾಯಕ್ಕೆ ಸಿದ್ಧರಾಮಯ್ಯ ಅವರ ಬಗ್ಗೆ ಅಸಮಾಧಾನವಿದೆ.ಇದು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರು ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಸೋಲು ಅನುಭವಿಸಿದಾಗಿನಿಂದ ಬೆಳೆದು ಬಂದಿದ್ದು. ಪರಮೇಶ್ವರ್ ಅವರ ಸೋಲು ಮುಖ್ಯಮಂತ್ರಿ ಹುದ್ದೆಯ ರೇಸಿನಲ್ಲಿ ಸಿದ್ಧರಾಮಯ್ಯ ನಿರಾಯಾಸವಾಗಿ ಓಡಿ ಗುರಿ ತಲುಪಲು ಸಾಧ್ಯವಾಗಿಸಿತು. ಹೀಗಾಗಿ ದಲಿತರು ಸಿಎಂ ಹುದ್ದೆಯ ರೇಸಿನಿಂದ ಹೊರಬಿದ್ದಂತಾಯಿತು. ಸಿದ್ಧರಾಮಯ್ಯ ಅವರ ಶಕ್ತಿ ಹೀಗೆ ಹೆಚ್ಚಾಗುತ್ತಾ ಹೋಯಿತು. ತಮಗೆ ಪರ್ಯಾಯ ನಾಯಕರೊಬ್ಬರು ಬಂದು ಕೂರುವಂತಾಗಬಾರದು ಎಂದು ಅವರು ಕೂಡಾ ಡಿಸಿಎಂ ಹುದ್ದೆಯನ್ನು ದಲಿತರಿಗೆ ಕೊಡಲು ಒಪ್ಪಲೇ ಇಲ್ಲ. ಹೀಗವರು ದಲಿತ ಡಿಸಿಎಂ ವಿವಾದವನ್ನು ಬಗೆಹರಿಸದ ಪರಿಣಾಮವಾಗಿ ದಲಿತ ವರ್ಗದ ಬಲಗೈ ಸಮುದಾಯದವರ ಅಸಮಾಧಾನ ಬೂದಿ ಮುಚ್ಚಿದ ಕೆಂಡದಂತೆ ಉಳಿದೇ ಇದೆ. ಆದರೆ ಆ ಮತಗಳು ಬಿಜೆಪಿ ಕಡೆ ವಾಲಿಕೊಳ್ಳುವುದು ಕಷ್ಟ. ಈ ಸಂದರ್ಭವನ್ನು ನೋಡಿ  ಎಚ್ ಡಿ ದೇವೇಗೌಡರು ಪ್ಲೇ ಕಾರ್ಡ್ ಹಾಕಿದ್ದಾರೆ. ಬಿ.ಎಸ್.ಪಿ.ಜತೆ ಒಪ್ಪಂದ ಮಾಡಿಕೊಂಡು, ಕಾಂಗ್ರೆಸ್ ನ ದಲಿತ ವೋಟ್ ಬ್ಯಾಂಕ್ ಒಂದು ಮಟ್ಟದಲ್ಲಾದರೂ ಮೈನಸ್ ಆಗಲಿದೆ ಎಂಬ ಸಂದೇಶ ರವಾನಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮೈನಸ್ ಡಿಗ್ರಿ ಪಾಲಿಟಿಕ್ಸ್ ಎಂಬ ರಣತಂತ್ರವನ್ನು ಅನುಸರಿಸಿ, ಬಿಜೆಪಿಯ ವೋಟ್ ಬ್ಯಾಂಕ್ ಅನ್ನು ಒಂದು ಮಟ್ಟದಲ್ಲಿ ಮೈನಸ್ ಮಾಡಿದ ಸಿದ್ಧರಾಮಯ್ಯ ಈಗ ತಾವೇ ಮೈನಸ್ ಡಿಗ್ರಿ ಪಾಲಿಟಿಕ್ಸ್ ನ ರಣತಂತ್ರಕ್ಕೆ ಕುತ್ತಿಗೆ ಕೊಡಬೇಕಾದ ಸ್ಥಿತಿ ಬಂದಿದೆ.


Edited By

Shruthi G

Reported By

Madhu shree

Comments