ಗರ್ವ, ಧಿಮಾಕು, ಅಹಂಕಾರ ಎಂದು ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ದೇವೇಗೌಡ್ರು

09 Feb 2018 10:14 AM | Politics
419 Report

ಮುಂದಿನ ಚುನಾವಣೆಯಲ್ಲಿ ಪೂರ್ಣ ಪ್ರಮಾಣದ ಜೆಡಿಎಸ್ ಸರಕಾರ ಅಸ್ತಿತ್ವಕ್ಕೆ ಬಂದರೆ ಮಡಿವಾಳ ಸಮುದಾಯವನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರ್ಪಡೆಗೊಳಿಸುವುದಾಗಿ ಎಚ್.ಡಿ.ದೇವೇಗೌಡ ಹಾಗೂ ಎಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.

ಕರ್ನಾಟಕ ಪ್ರದೇಶ ಜಾತ್ಯತೀತ ಜನತಾ ದಳದ ಹಿಂದುಳಿದ ವರ್ಗಗಳ ವಿಭಾಗದ ವತಿಯಿಂದ ಗುರುವಾರ ನಗರದ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನಡೆದ ರಾಜ್ಯಮಟ್ಟದ ಮಡಿವಾಳರ ಜನಜಾಗೃತಿ ಸಮಾವೇಶದಲ್ಲಿ ಅವರು ಮಾತನಾಡಿದರು.ಸಮಾವೇಶ ಉದ್ಘಾಟಿಸಿದ ಮಾಜಿ ಪ್ರಧಾನಿ ದೇವೇಗೌಡ ಮಾತನಾಡಿ, ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಸರಕಾರ ಅಸ್ತಿತ್ವಕ್ಕೆ ಬಂದ ಒಂದು ತಿಂಗಳಲ್ಲಿ ಮಡಿವಾಳ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರ್ಪಡೆಗೊಳಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವುದಾಗಿ ಹೇಳಿದರು.ಜನಾಂಗವನ್ನು ಪರಿಶಿಷ್ಟ ಜಾತಿಗೆ ಸೇರಿಸುವುದು ಸುಲಭದ ಕೆಲಸವಲ್ಲ. ಸಂವಿಧಾನ ತಿದ್ದುಪಡಿ ಆಗಬೇಕು. ರಾಜ್ಯದಲ್ಲಿ ಪೂರ್ಣ ಪ್ರಮಾಣದ ಜೆಡಿಎಸ್ ಸರಕಾರ ಬರಲು ಶಕ್ತಿಕೊಡಿ, ಕೇಂದ್ರಕ್ಕೆ ಶಿಫಾರಸ್ಸು ಮಾಡುತ್ತೇವೆ. ನಂತರ ಸಂಸತ್ತಿನಲ್ಲೂ ಹೋರಾಟ ಮಾಡುತ್ತೇವೆ ಎಂದು ಅವರು ತಿಳಿಸಿದರು.

ರಾಜ್ಯ ಸರಕಾರ ಕಳೆದ ನಾಲ್ಕು ವರ್ಷಗಳಿಂದ ಎಲ್ಲಾ ಸಮುದಾಯದ ಸಮಾವೇಶ ನಡೆಸಿ ಹಲವಾರು ಭರವಸೆ ನೀಡಿದೆ. ಆದರೆ, ಒಂದನ್ನೂ ಈಡೇರಿಸಿಲ್ಲ. ಜೆಡಿಎಸ್‍ಗೆ ಬಹುಮತ ಬಂದರೆ ಮಾತ್ರ ಬೇಡಿಕೆ ಈಡೇರಿಸಲು ಸಾಧ್ಯ ಎಂದು ಅವರು ಸ್ಪಷ್ಟಪಡಿಸಿದರು. ನಾನು ಅಧಿಕಾರದಲ್ಲಿದ್ದಾಗ ಎಲ್ಲಾ ಸಮುದಾಯದವರನ್ನೂ ಗುರುತಿಸಿ ಸ್ಥಾನಮಾನ ಕಲ್ಪಿಸಿದ್ದೇನೆ. ಬಡತನದಿಂದ ಬಂದ ನನಗೆ ತಳಸಮುದಾಯದ ಕಷ್ಟಗಳ ಬಗ್ಗೆ ಅರಿವಿದೆ. ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರಾಗಲು ಮಹಿಳೆಯವರಿಗೆ ಶಕ್ತಿ ಕೊಟ್ಟಿದ್ದು ನನ್ನ ಸರಕಾರ. ನಾಯಕ ಸಮುದಾಯವನ್ನು ಪರಿಶಿಷ್ಟ ಪಟ್ಟಿಗೆ ಸೇರ್ಪಡೆಗೊಳಿಸಿದ್ದು ನಾನು ಎಂದು ವಿವರಿಸಿದರು.ಸಾಮಾಜಿಕ ವ್ಯವಸ್ಥೆಯನ್ನು ರಾಜಕಾರಣಿಗಳು ಅರ್ಥಮಾಡಿಕೊಳ್ಳಬೇಕು. ನನ್ನ ಕುರಿತು ಗರ್ವ, ಧಿಮಾಕು, ಅಹಂಕಾರದ ಮಾತುಗಳನ್ನು ಕೇಳಿದ್ದೇನೆ. ಆದರೆ, ಮಾನವೀಯ ಮೌಲ್ಯಗಳನ್ನು ಉಳಿಸಿಕೊಂಡು ಮೇಲೆ ಬಂದಿರುವ ನನಗೆ ಯಾರು ಏನೇ ಹೇಳಿದರೂ ಚಿಂತೆಯಿಲ್ಲ, ಅರಗಿಸಿಕೊಳ್ಳುತ್ತೇನೆ ಎಂದು ತನ್ನ ಟೀಕಾಕಾರರಿಗೆ ತಿರುಗೇಟು ನೀಡಿದರು.

Edited By

Shruthi G

Reported By

Shruthi G

Comments