ರಾಜ್ಯದಲ್ಲಿ ವಿದ್ಯುತ್ ಅಭಾವ ತಲೆದೋರದಂತೆ ಭರವಸೆ ನೀಡಿದ ಡಿಕೆಶಿ

07 Feb 2018 11:48 AM | Politics
335 Report

ಪ್ರಸ್ತುತ ರಾಜ್ಯದಲ್ಲಿ ಸರಾಸರಿ ವಿದ್ಯುತ್ ಬೇಡಿಕೆ ಪ್ರಮಾಣ 10 ಸಾವಿರ ಮೆಗಾ ವ್ಯಾಟ್‍ಗಳಾಗಿದ್ದು, ಕಳೆದ ಜನವರಿ ತಿಂಗಳಲ್ಲಿ ಗರಿಷ್ಠ ವಿದ್ಯುತ್ ಬೇಡಿಕೆ 10347 ಮೆಗಾವ್ಯಾಟ್‍ಗಳನ್ನು ಪೂರೈಸಲಾಗಿದೆ.ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ವಿದ್ಯುತ್ ಅಭಾವ ತಲೆದೋರದಂತೆ ಮಾಡಿಕೊಳ್ಳಲಾಗುವುದು ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್ ವಿಧಾನ ಪರಿಷತ್ ನಲ್ಲಿ ಭರವಸೆ ನೀಡಿದ್ದಾರೆ.

 ರೈತರಿಗೆ ಕೈಗಾರಿಕೆಗಳಿಗೆ ಸೇರಿದಂತೆ ಯಾರಿಗೂ ಯಾವುದೇ ಕಾರಣಕ್ಕೂ ವಿದ್ಯುತ್ ಅಭಾವ ತಲೆದೋರದಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು. ವಿದ್ಯುತ್ ಅಭಾವ ನೀಗಿಸಲು ಮುಂಜಾಗ್ರತಾ ಕ್ರಮವಾಗಿ 900 ಮೆಗಾ ವ್ಯಾಟ್ ವಿದ್ಯುತ್ತನ್ನು ಅಲ್ಪಾವಧಿ ಆಧಾರದಲ್ಲಿ ಖರೀದಿಸಲಾಗುತ್ತಿದೆ ಎಂದು ಹೇಳಿದರು. ಜಲವಿದ್ಯುತ್ ಉತ್ಪಾದನಾ ಮೂಲಗಳಿಂದ 3788 ಮೆಗಾ ವ್ಯಾಟ್ ಶಾಖೋತ್ಪನ್ನ ಘಟಕಗಳಿಂದ 5020 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನಾ ಸ್ಥಾಪಿತ ಸಾಮರ್ಥ್ಯ ಹೊಂದಿದ್ದು, ರಾಜ್ಯದಲ್ಲಿ ಲಭ್ಯವಿರುವ ಎಲ್ಲ ಸಾಂಪ್ರದಾಯಿಕ ಮೂಲಗಳನ್ನು ಬಳಸಿ ವಿದ್ಯುತ್ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲಾಗಿದೆ.

ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಲು 370 ಮೆಗಾ ವ್ಯಾಟ್ ಅನಿಲ ಆಧಾರಿತ  ಯೋಜನೆಯನ್ನು ಯಲಹಂಕದ ಬಳಿ ಅನುಷ್ಠಾನಗೊಳಿಸಲಾಗುತ್ತಿದ್ದು, ಮೇ 18 ರೊಳಗೆ ಚಾಲನೆಗೊಳ್ಳುವ ನಿರೀಕ್ಷೆ ಇದೆ ಎಂದರು. ತುಮಕೂರು ಜಿಲ್ಲೆ ಪಾವಗಡ ತಾಲೂಕಿನಲ್ಲಿ 2000 ಮೆಗಾ ವ್ಯಾಟ್ ಸಾಮರ್ಥ್ಯದ  ಸೌರ ವಿದ್ಯುತ್ ಪಾರ್ಕ್ ಸ್ಥಾಪನೆಗೆ ಕ್ರಮ ವಹಿಸಲಾಗಿದೆ. ವಿಕೇಂದ್ರಿಕೃತ ವಿದ್ಯುತ್ ಉತ್ಪಾದನೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ 43 ತಾಲೂಕುಗಳಲ್ಲಿ ಒಟ್ಟಾರೆ 860 ಮೆಗಾ ವ್ಯಾಟ್ ಸಾಮರ್ಥ್ಯದ  ಸೌರವಿದ್ಯುತ್ ಯೋಜನೆಗಳಿಗೆ ಟೆಂಡರ್ ಕರೆಯಲಾಗಿದೆ ಎಂದು ಹೇಳಿದರು. 59 ಹಿಂದುಳಿದ ತಾಲೂಕುಗಳಲ್ಲಿ 105 ಮೆಗಾ ವ್ಯಾಟ್ ಹಾಗೂ ಕೇಂದ್ರ ಸರ್ಕಾರದ ಎಸ್‍ಇಸಿಐ ಯೋಜನೆಯಿಂದ 970 ಮೆಗಾ ವ್ಯಾಟ್ ಸಾಮರ್ಥ್ಯದ ಸೌರವಿದ್ಯುತ್ ಯೋಜನೆಗಳ ಸ್ಥಾಪನೆಗೆ ಹಂಚಿಕೆ ಮಾಡಲಾಗಿದ್ದು, ಈ ಪೈಕಿ 821 ಮೆಗಾ ವ್ಯಾಟ್ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು.  ಬೇಸಿಗೆ ಸಮೀಪಿಸುತ್ತಿರುವುದರಿಂದ ವಿದ್ಯುತ್ ಪೂರೈಕೆಯಲ್ಲಿ ಯಾವುದೇ ರೀತಿಯ ವ್ಯತ್ಯಯ ಉಂಟಾಗಬಾರದೆಂಬ ಕಾರಣಕ್ಕೆ ವಿದೇಶದಿಂದ 10 ಲಕ್ಷ ಮೆಟ್ರಿಕ್ ಟನ್‍ ಕಲ್ಲಿದ್ದಲನ್ನು ಆಮದು ಮಾಡಿಕೊಳ್ಳಲಾಗುವುದು. ಈ ಸಂಬಂಧ ಈಗಾಗಲೇ ಟೆಂಡರ್ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ಒಂದು ವಾರ ಅಥವಾ ಹದಿನೈದು ದಿನದೊಳಗೆ ಅಂತಿಮ ಪ್ರಕ್ರಿಯೆ ಮುಗಿಯಲಿದೆ ಎಂದು ಹೇಳಿದರು.

Edited By

Shruthi G

Reported By

Madhu shree

Comments