ತೆಂಗು ಬೆಳೆಗಾರ ಆರ್ಥಿಕ ನಷ್ಟ ತುಂಬಿಕೊಡುವಂತೆ ಜೆಡಿಎಸ್‍ನ ಶಾಸಕ ಕೆ.ಎಂ.ಶಿವಲಿಂಗೇಗೌಡ ಆಗ್ರಹ

06 Feb 2018 3:42 PM | Politics
288 Report

ವಿಧಾನಸಭೆಯ ಕಲಾಪದ ಆರಂಭದಲ್ಲಿ ನಿಲುವಳಿ ಸೂಚನೆ ನಿಯಮ 60ರ ಅಡಿ ಜೆಡಿಎಸ್ ಶಾಸಕರು ಕಳುಹಿಸಿರುವ ಸೂಚನಾ ಪತ್ರದ ಚರ್ಚೆಗೆ ಅವಕಾಶ ನೀಡಬೇಕೆಂದು ಶಿವಲಿಂಗೇಗೌಡ ಒತ್ತಾಯಿಸಿದರು.ತೆಂಗುಬೆಳೆಗಾರರಿಗೆ ಆರ್ಥಿಕ ನಷ್ಟವನ್ನು ತುಂಬಿಕೊಡಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕ್ರಮ ಕೈಗೊಂಡಿಲ್ಲ ಎಂದು ಜೆಡಿಎಸ್‍ನ ಶಾಸಕ ಕೆ.ಎಂ.ಶಿವಲಿಂಗೇಗೌಡ ವಾಗ್ದಾಳಿ ನಡೆಸಿದ ಪ್ರಸಂಗ ನಡೆಯಿತು.

ಮಧ್ಯಪ್ರವೇಶಿಸಿದ ಸಭಾಧ್ಯಕ್ಷ ಕೋಳಿವಾಡ ಅವರು, ಪ್ರತಿಪಕ್ಷ ಬಿಜೆಪಿಯವರು ಕಳುಹಿಸಿದ್ದ ನಿಲುವಳಿ ಸೂಚನೆಯೊಂದನ್ನು ನಿಯಮ 69ಕ್ಕೆ ಪರಿವರ್ತಿಸಿ ಸಾರ್ವಜನಿಕ ಮಹತ್ವದ ವಿಷಯವೆಂದು ಚರ್ಚೆಗೆ ಅವಕಾಶ ನೀಡಲಾಗಿದೆ. ನೀವು ಕಳುಹಿಸಿರುವ ಸೂಚನೆಯನ್ನು ನಾಳೆ ಚರ್ಚೆಗೆ ಕೈಗೆತ್ತಿಕೊಳ್ಳುವ ಭರಸವೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಿವಲಿಂಗೇಗೌಡ ಅವರು, ಕಳೆದ 7 ದಿನಗಳಿಂದ ಅಹೋರಾತ್ರಿ ಧರಣಿ ನಡೆಸಿ ಇಲ್ಲಿಗೆ ಬಂದಿದ್ದೇವೆ. ಬರಗಾಲ ಹಾಗೂ ಅಂತರ್ಜಲ ಕುಸಿತದಿಂದ ರಾಜ್ಯದಲ್ಲಿ 44 ಲಕ್ಷ ತೆಂಗಿನ ಮರಗಳು ನಾಶವಾಗಿವೆ. 4500ಕೋಟಿಯಷ್ಟು ಆರ್ಥಿಕ ನಷ್ಟ ಉಂಟಾಗಿದೆ. ಕೇರಳದ ಮಾದರಿಯಲ್ಲಿ ಕರ್ನಾಟಕ ರಾಜ್ಯದ ರೈತರಿಗೂ ಪ್ರತಿ ತೆಂಗಿನ ಮರಕ್ಕೆ 8ಸಾವಿರ ಪರಿಹಾರ ಘೋಷಣೆ ಮಾಡಬೇಕೆಂದು ಒತ್ತಾಯಿಸಿದರು. 
ನಿರಂತರ ಪ್ರತಿಭಟನೆಗಳನ್ನು ನಡೆಸುತ್ತಿದ್ದರೂ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಕಿವಿಮೇಲೆ ಹಾಕಿಕೊಳ್ಳುತ್ತಿಲ್ಲ. ಕೇಂದ್ರದ ಬಳಿ ನಿಯೋಗ ಕರೆದುಕೊಂಡು ಹೋಗುವುದಾಗಿ ಹೇಳಿದ ರಾಜ್ಯ ಸರ್ಕಾರ ನಿರ್ಲಕ್ಷ್ಯವಹಿಸುತ್ತಿದೆ ಎಂದು ಆರೋಪಿಸಿದರು.

 

 

 

Edited By

Shruthi G

Reported By

Madhu shree

Comments