ಪ್ರಧಾನಿ ನರೇಂದ್ರ ಮೋದಿ 'ಮಹಾರ‍್ಯಾಲಿ'ಗೆ ವೇದಿಕ ಸಜ್ಜು......ನಗರದಲ್ಲಿ ಬಿಗಿ ಬಂದೋಬಸ್ತ್

04 Feb 2018 8:51 AM | Politics
562 Report

ಆರಂಭಿಕ ಹಿನ್ನಡೆಯ ನಂತರ ಯಶಸ್ಸನ್ನು ಪಡೆದುಕೊಂಡ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರ ನೇತೃತ್ವದಲ್ಲಿ ನಡೆದ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿ, ಇಂದು (ಫೆ 4) ಅಪರಾಹ್ನ ಬೆಂಗಳೂರಿಗೆ ಆಗಮಿಸಲಿದ್ದಾರೆ.

ಒಗ್ಗಟ್ಟಿನ ಮಂತ್ರ ಜಪಿಸುತ್ತಿರುವ ರಾಜ್ಯ ಬಿಜೆಪಿ ಮುಖಂಡರು, ಮೋದಿ ರ‍್ಯಾಲಿ, 'ನಭೂತೋ ನಭವಿಷ್ಯತಿ:' ಸಮಾವೇಶ ಆಗಬೇಕೆಂದು ಠೊಂಕ ಕಟ್ಟಿನಿಂತಿದ್ದಾರೆ. ಮುಂಬರುವ ಚುನಾವಣಾ ಪ್ರಚಾರಕ್ಕೆ ಅಧಿಕೃತ ಚಾಲನೆ ನೀಡಲಾಗುವ ಕಾರ್ಯಕ್ರಮವೆಂದೇ ಹೇಳಲಾಗುತ್ತಿರುವ ಮೋದಿ ರ‍್ಯಾಲಿಯಲ್ಲಿ ಸುಮಾರು ಎರಡುವರೆ ಲಕ್ಷಕ್ಕೂ ಹೆಚ್ಚು ಜನ ಭಾಗವಹಿಸಬಹುದು ಎನ್ನುವ ಲೆಕ್ಕಾಚಾರವನ್ನು ಬಿಜೆಪಿ ಹಾಕಿಕೊಂಡಿದೆ. (ಮೋದಿ ಆಗಮನ, ನಗರದಲ್ಲಿ ಬಿಗಿ ಬಂದೋಬಸ್ತ್).ಪ್ರಧಾನಿ ಮೋದಿಯವರ ಬೆಂಗಳೂರು ರ‍್ಯಾಲಿಗೆ ಪಶ್ಚಿಮ ದಿಕ್ಕಿನಲ್ಲಿ ಪೂರ್ವಾಭಿಮುಖವಾಗಿ ವಿಶೇಷ ವೇದಿಕೆ ನಿರ್ಮಿಸಲಾಗಿದ್ದು, 2014ರ ಲೋಕಸಭಾ ಚುನಾವಣೆಯಲ್ಲಿ ಇದೇ ಡೈರೆಕ್ಷನ್ ನಲ್ಲಿ ಮೋದಿ ಚುನಾವಣಾ ಪ್ರಚಾರ ಮಾಡಿದ್ದರು. ಆ ಚುನಾವಣೆಯ ಫಲಿತಾಂಶ ಬಂದ ರೀತಿಯಲ್ಲೇ ರಾಜ್ಯ ಅಸೆಂಬ್ಲಿ ಚುನಾವಣೆಯ ಫಲಿತಾಂಶವೂ ಬರಲಿ ಎನ್ನುವುದು ಬಿಜೆಪಿ ಲೆಕ್ಕಾಚಾರ.

ವೇದಿಕೆ ಪೂರ್ವಾಭಿಮುಖವಾಗಿ ಇದ್ದರೆ, ರಾಜ್ಯದ ಮತದಾರರ ಚಿತ್ತ ಬದಲಾಗುತ್ತೋ, ಇಲ್ಲವೋ? ಆದರೆ, ಇದು ಬಿಜೆಪಿ ವಾಸ್ತುಶಾಸ್ತ್ರದ ಮೇಲಿಟ್ಟಿರುವ ನಂಬಿಕೆ. ಹಾಗಾಗಿ, ವೇದಿಕೆ ನಡೆಯುವ ಸ್ಥಳದಲ್ಲಿ ಪುಣ್ಯಾರ್ಚನೆ, ಸುದರ್ಶನ, ವಾಸ್ತು, ನವಗ್ರಹ ಹೋಮವನ್ನು ಮಾಡಿ ವೇದಿಕೆ ನಿರ್ಮಿಸಲಾಗಿದೆ.ಸಮಾವೇಶದ ಭದ್ರತೆಗೆ 11 ಡಿಸಿಪಿ, 30 ಎಸಿಪಿ, 200 ಪಿಎಸ್‌ಐಗಳು, 3000 ಕ್ಕೂ ಹೆಚ್ಚು ಪೊಲೀಸ್ ಕಾನ್ಸ್ಟೇಬಲ್ಗಳು 50 ಕೆಎಸ್‌ಆರ್ಪಿ ತುಕಡಿ, 30 ಸಿಎಆರ್ ತುಕಡಿಗಳನ್ನು ನಿಯೋಜಿಸಲಾಗಿದೆ.ಬೆಂಗಳೂರಿಗೆ ಬರುತ್ತಿರುವುದು ಈ ದೇಶದ ಪ್ರಧಾನಿ, ಹಾಗಾಗಿ ಯಾವುದೇ ಪ್ರತಿಭಟನೆಗೆ ಅವಕಾಶ ನೀಡುವುದಿಲ್ಲ ಎಂದು ರಾಜ್ಯ ಗೃಹಸಚಿವ ರಾಮಲಿಂಗ ರೆಡ್ಡಿ ಈಗಾಗಲೇ ಪ್ರತಿಭಟನಾಕಾರರಿಗೆ ಎಚ್ಚರಿಕೆ ನೀಡಿದ್ದಾಗಿದೆ. ಪ್ರತಿಭಟನಾಕಾರರನ್ನು ಯಾವುದೇ ಕಾರಣಕ್ಕೆ ಸಮಾವೇಶ ನಡೆಯುವ ಅರಮನೆ ಮೈದಾನ ಪ್ರವೇಶಕ್ಕೆ ಅವಕಾಶ ನೀಡುವುದಿಲ್ಲ ಎಂದು ನಗರ ಪೊಲೀಸ್ ಆಯುಕ್ತ ಸುನೀಲ್ ಕುಮಾರ್ ಕೂಡಾ ಖಡಕ್ ವಾರ್ನಿಂಗ್ ನೀಡಿದ್ದಾರೆ.

ಅರ್ಧ ಚಂದ್ರಾಕೃತಿ ಆಕಾರದಲ್ಲಿ ವೇದಿಕೆ ಸಜ್ಜಾಗಿದೆ. ಮೋದಿ, ಅಮಿತ್ ಶಾ, ಯಡಿಯೂರಪ್ಪ, ಅನಂತ್ ಕುಮಾರ್, ಸದಾನಂದ ಗೌಡ, ಎಸ್ ಎಂ ಕೃಷ್ಣ, ಶ್ರೀನಿವಾಸ ಪ್ರಸಾದ್, ಪಿ ಸಿ ಮೋಹನ್, ಜಗದೀಶ್ ಶೆಟ್ಟರ್, ಈಶ್ವರಪ್ಪ ಸೇರಿದಂತೆ 27 ಮುಖಂಡರಿಗೆ ಮಾತ್ರ ವೇದಿಕೆಯಲ್ಲಿ ಕುಳಿತುಕೊಳ್ಳಲು ಅವಕಾಶವಿದೆ.ಪಕ್ಷದ ಇತರ ಹಿರಿಯ ಮುಖಂಡರು, ಸಂಸದರು, ಶಾಸಕರಿಗೆ ವೇದಿಕೆಯ ಮುಂಭಾಗದಲ್ಲಿ ಆಸನ ವ್ಯವಸ್ಥೆ ಮಾಡಲಾಗಿದೆ. ಸಾರಿಗೆ ಇಲಾಖೆಯಿಂದ ಸಮಾವೇಶಕ್ಕೆ ಆಗಮಿಸುವ ಕಾರ್ಯಕರ್ತರಿಗಾಗಿ ರಾಜ್ಯದ ವಿವಿಧಡೆಯಿಂದ ಸುಮಾರು 3,500 ಬಸ್ ಗಳ ವ್ಯವಸ್ಥೆಯನ್ನು ಮಾಡಲಾಗಿದೆ. ಶನಿವಾರ ರಾತ್ರಿ, ಭಾನುವಾರ ಬೆಳಗ್ಗೆಯೇ ನಗರಕ್ಕೆ ಆಗಮಿಸಿರುವ ಜನರಿಗಾಗಿ ಶೌಚ, ಸ್ನಾನ, ತಿಂಡಿ, ಊಟದ ವ್ಯವಸ್ಥೆ ಜೊತೆಗೆ ಬಿಸಿ;ಲಿನಿಂದ ರಕ್ಷಿಸಿಕೊಳ್ಳಲು ಟೋಪಿಯ ವ್ಯವಸ್ಥೆಯನ್ನು ಬಿಜೆಪಿ ಮಾಡಿದೆ.ಪ್ರಧಾನಿ ತಮ್ಮ ಭಾಷಣದಲ್ಲಿ ಕೇಂದ್ರದಿಂದ ರಾಜ್ಯಕ್ಕೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವ ಸಾಧ್ಯತೆಯಿದೆ ಎನ್ನುವ ಮಾತು ಕೇಳಿಬರುತ್ತಿದೆ. ಸಮಾವೇಶವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಅನಂತಕುಮಾರ್, ಆರ್ ಅಶೋಕ್, ಅರವಿಂದ ಲಿಂಬಾವಳಿ ಸೇರಿದಂತೆ 5 ತಂಡಗಳು ಕಾರ್ಯನಿರ್ವಹಿಸುತ್ತಿದೆ. ಮೋದಿ ಭಾಷಣವನ್ನು ಫೇಸ್ ಬುಕ್ ಮೂಲಕ ಲೈವ್ ಮಾಡಲು ಇನ್ನೂರು ಕಾರ್ಯಕರ್ತರ ತಂಡ ಸಜ್ಜಾಗಿದೆ.

 

Edited By

Shruthi G

Reported By

Shruthi G

Comments