ರಾಷ್ಟ್ರೀಯ ಪಕ್ಷಗಳನ್ನು ತೊರೆದ ಮುಖಂಡರು ಜೆಡಿಎಸ್ ಗೆ ಸೇರ್ಪಡೆ...!!

03 Feb 2018 10:43 AM | Politics
8455 Report

ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಜಾತ್ಯಾತೀತ ಜನತಾದಳ ಪಕ್ಷ ಅಧಿಕಾರಕ್ಕೆ ಬರಲಿದ್ದು, ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗುವುದು ಖಚಿತ. ಆದುದರಿಂದ ಹನೂರು ಕ್ಷೇತ್ರದಿಂದಲೂ ಜೆಡಿಎಸ್ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ಕುಮಾರಣ್ಣನವರ ಕೈ ಬಲಪಡಿಸಬೇಕು ಎಂದು ಜೆಡಿಎಸ್ ಅಭ್ಯರ್ಥಿ ಲೋಕೇಶ್ ಮೌರ್ಯ ಮನವಿ ಮಾಡಿದರು.

ಕ್ಷೇತ್ರ ವ್ಯಾಪ್ತಿಯ ಚಿಕ್ಕರಂಗಶೆಟ್ಟಿ ಗ್ರಾಮದ ಲೊಕ್ಕನಹಳ್ಳಿ ಹೋಬಳಿ ಮಟ್ಟದ ಮನೆ ಮನೆಗೆ ಕುಮಾರಣ್ಣ ಕಾರ್ಯಕ್ರಮ ಹಿನ್ನೆಲೆಯಲ್ಲಿ ಬೂತ್ ಸಮಿತಿ ಹಾಗೂ ಮುಖಂಡರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಲೋಕೆಶ್ ಮೌರ್ಯ, ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ 20 ತಿಂಗಳ ಅಧಿಕಾರಾವಧಿ ಕರ್ನಾಟಕ ರಾಜ್ಯದ ಇತಿಹಾಸದಲ್ಲಿಯೇ ಸುವರ್ಣ ದಿನಗಳು. ಇಡೀ ವಿಶ್ವವೇ ಕರ್ನಾಟಕದತ್ತ ತಿರುಗಿ ನೋಡುತ್ತಿತ್ತು. ಗ್ರಾಮ ವಾಸ್ತವ್ಯದ ಮೂಲಕ ಆಡಳಿತ ಯಂತ್ರವನ್ನೇ ಬಡವರ ಮನೆ ಬಾಗಿಲಿಗೆ ತಂದಿದ್ದರು. ಸಾಮಾಜಿಕ ಪಿಡುಗುಗಳಾಗಿದ್ದ ಲಾಟರಿ ಮತ್ತು ಸಾರಾಯಿಯನ್ನು ನಿಷೇಧ ಮಾಡಿ ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿಯುವಂತಾಗಿದ್ದ ಹಲವಾರು ಸಂಸಾರಗಳನ್ನು ಉಳಿಸಿದರು. ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಕುಮಾರಸ್ವಾಮಿ ಅವರು ಮತ್ತೊಮ್ಮೆ ಮುಖ್ಯಮಂತ್ರಿಯಾಗುವ ಸದಾವಕಾಶವಿದ್ದು, ಮತ್ತೊಮ್ಮೆ ರಾಜ್ಯಕ್ಕೆ ವಿಶ್ವ ಮಟ್ಟದಲ್ಲಿ ಗೌರವ ತಂದುಕೊಡುವ ಮಹದಾಸೆ ಹೊಂದಿದ್ದಾರೆ. ಈ ಮಹತ್ಕಾರ್ಯಕ್ಕೆ ಹನೂರು ಕ್ಷೇತ್ರದಿಂದಲೂ ಜೆಡಿಎಸ್ ಅಭ್ಯರ್ಥಿಯನ್ನು ಗೆಲ್ಲಿಸಿ ವಿಧಾನಸಭೆಗೆ ಕಳುಹಿಸಿಕೊಡಬೇಕು ಎಂದು ಮನವಿ ಮಾಡಿದರು.

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರೇ ನನಗೆ ಆದರ್ಶವಾಗಿದ್ದು, ಆ ಮಹಾನುಭವರ ಮಾರ್ಗದರ್ಶನದಲ್ಲಿ ನಡೆಯುತ್ತಿದ್ದೇನೆ. ಇದರ ಒಂದು ಭಾಗವೆಂಬಂತೆ ಕ್ಷೇತ್ರ ವ್ಯಾಪ್ತಿಯಲ್ಲಿ ಬರಗಾಲದ ಸಂದರ್ಭದಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು, ಕಾಡಂಚಿನ ಗ್ರಾಮ ವಾಸಿಗಳಿಗೆ ಸೋಲಾರ್ ದೀಪಗಳ ವಿತರಣೆ, ಕಂಬಳಿ ವಿತರಣೆ, ಬಡ ವಿದ್ಯಾರ್ಥಿಗಳಿಗೆ ಬ್ಯಾಗ್, ಪುಸ್ತಕ ವಿತರಣೆ, ಬಡಕುಟುಂಬಗಳಲ್ಲಿ ಸಾವು ಸಂಭವಿಸಿದಲ್ಲಿ ಸಹಾಯ ಹಸ್ತ ಸೇರಿದಂತೆ ಹತ್ತು ಹಲವು ಜನಪರ ಕಾರ್ಯಗಳನ್ನು ಕಳೆದ 2 ವರ್ಷಗಳಿಂದ ಕೈಗೊಂಡಿದ್ದೇನೆ. ಮುಂದಿನ ದಿನಗಳಲ್ಲಿ ಕ್ಷೇತ್ರದ ಜನತೆ ರಾಜಕೀಯವಾಗಿ ಆಶೀರ್ವದಿಸಿದರೆ ಇನ್ನೂ ಹೆಚ್ಚಿನ ಸಮಾಜಮುಖಿ ಕಾರ್ಯ ಕೈಗೊಳ್ಳುವುದಾಗಿ ತಿಳಿಸಿದರು.ಇದೇ ವೇಳೆ ಹೋಬಳಿ ವ್ಯಾಪ್ತಿಯ ಅಂಡೇಕುರುಬರದೊಡ್ಡಿ, ಅರ್ಧನಾರಿಪುರ, ಹೊಸಪೋಡು, ಆಂಡಿಪಾಳ್ಯ, ಕೊಡುವಾಳೆ ಗ್ರಾಮಗಳ ಹಲವಾರು ಮುಖಂಡರು ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳನ್ನು ತೊರೆದು ಜಾತ್ಯಾತೀತ ಜನತಾದಳಕ್ಕೆ ಸೇರ್ಪಡೆಗೊಂಡರು.ಕಾರ್ಯಕ್ರಮದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಕಾಮರಾಜು, ಮೈಸೂರು ಜಿಲ್ಲಾ ಮಹಾಪ್ರಧಾನ ಕಾರ್ಯದರ್ಶಿ ಮಹೇಶ್‍ಕುಮಾರ್, ಪಿ.ಜಿ.ಪಾಳ್ಯ ಗ್ರಾ.ಪಂ ಉಪಾಧ್ಯಕ್ಷ ಸಿದ್ಧರಾಜು, ಸದಸ್ಯರುಗಳಾದ ಕೃಷ್ಣಮೂರ್ತಿ, ಮಾರಪ್ಪ, ಮುಖಂಡರಾದ ಬೈಲೂರು ಕೆಂಪರಾಜು, ಮಾದೇಗೌಡ, ಮೊದಲಿಯಾರ್. ಮುತ್ತು, ಸಂತ್ಯಾಗೋ, ಅಂಥೋಣಿ, ಬಸವನಗುಡಿ ಕುಮಾರ್ ಇನ್ನಿತರರು ಹಾಜರಿದ್ದರು.

Edited By

Shruthi G

Reported By

Shruthi G

Comments