ಫೆ.4ರ ಬೆಂಗಳೂರು ಬಂದ್‌ಗೆ ಸರ್ಕಾರ ಅನುಮತಿ ನೀಡುವುದಿಲ್ಲ : ರಾಮಲಿಂಗಾ ರೆಡ್ಡಿ

31 Jan 2018 2:33 PM | Politics
204 Report

ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ರಾಮಲಿಂಗಾ ರೆಡ್ಡಿ ಅವರು, ಸುಪ್ರಿಂ ಕೋರ್ಟ್ ಆದೇಶದ ಅನ್ವಯ ಯಾವುದೇ ಬಂದ್‌ಗಳಿಗೆ ರಾಜ್ಯ ಸರ್ಕಾರ ಅನುಮತಿ ಅಥವಾ ಬೆಂಬಲ ನೀಡುವಂತಿಲ್ಲ, ರಾಜ್ಯ ಸರ್ಕಾರ ಸುಪ್ರಿಂ ಆದೇಶವನ್ನು ಪಾಲಿಸುವಂತದ್ದಾಗಿದ್ದು, ಫೆಬ್ರವರಿ 4 ರಂದು ವಿವಿಧ ಸಂಘಟನೆಗಳು ಕರೆ ನೀಡಿರುವ ಬೆಂಗಳೂರು ಬಂದ್‌ಗೆ ರಾಜ್ಯ ಸರ್ಕಾರ ಅನುಮತಿ ಅಥವಾ ಬೆಂಬಲ ನೀಡುವುದಿಲ್ಲ ಎಂದಿದ್ದಾರೆ.

ಪ್ರಧಾನಿ ಮೋದಿ ಅವರು ಬೆಂಗಳೂರಿಗೆ ಆಗಮಿಸುವ ದಿನದಂದೆ (ಫೆಬ್ರವರಿ 04) ವಾಟಾಳ್ ಪಕ್ಷ ಸೇರಿದಂತೆ ಹಲವು ಕನ್ನಡ ಪರ ಸಂಘಟನೆಗಳು ಕರೆ ನೀಡಿದ್ದ ಬೆಂಗಳೂರು ಬಂದ್‌ಗೆ ಸರ್ಕಾರ ಅನುಮತಿ ನೀಡುವುದಿಲ್ಲ ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ಸ್ಪಷ್ಟಪಡಿಸಿದ್ದಾರೆ. ಸಂವಿಧಾನದ ಪ್ರಕಾರ ಎಲ್ಲರಿಗೂ ಪ್ರತಿಭಟಿಸುವ ಹಕ್ಕಿದೆ, ಬೇಕಾದರೆ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ಮಾಡಲಿ ಆದರೆ ಬಂದ್‌ಗೆ ಅವಕಾಶ ಇಲ್ಲ ಎಂದು ಅವರು ಹೇಳಿದ್ದಾರೆ. ಬಂದ್‌ ಹೆಸರಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಪ್ರಯತ್ನ ಮಾಡಿದವರ ವಿರುದ್ದ ಸರ್ಕಾರವು ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಅವರು ಎಚ್ಚರಿಸಿದ್ದಾರೆ. ಬಿಜೆಪಿ ಶಾಸಕ ಸಿ.ಟಿ.ರವಿ ಅವರಿಗೆ ಆಗಂತುಕರಿಂದ ಬೆದರಿಕೆ ಬಂದಿರುವ ಬಗ್ಗೆ ಮಾತನಾಡಿರುವ ಅವರು, ಈ ಬಗ್ಗೆ ತನಿಖೆ ನಡೆಸುವಂತೆ ಉನ್ನತ ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದ್ದೇನೆ. ಸಿ.ಟಿ.ರವಿ ಅವರಿಗೆ ಈಗಾಗಲೇ ಭದ್ರತೆ ನೀಡಿದ್ದು ಅವರು ಬಯಸಿದಲ್ಲಿ ಭದ್ರತೆಯನ್ನು ಇನ್ನಷ್ಟು ಹೆಚ್ಚಿಸಲಾಗುವುದು ಎಂದರು. ಬಿಜೆಪಿ-ಓವೈಸಿ ಜತೆ ಗುಪ್ತ ಒಪ್ಪಂದದ ಬಗ್ಗೆ ಪ್ರತಿಕ್ರಿಯೆ ನೀಡಿದ ಗೃಹ ಸಚಿವರು ರಾಜ್ಯದಲ್ಲಿ ಕಾಂಗ್ರೆಸ್‌ ಅನ್ನು ಸೋಲಿಸಲು ಬಿಜೆಪಿ-ಓವೈಸಿ ಜತೆ ಗುಪ್ತ ಒಪ್ಪಂದ ಮಾಡಿಕೊಂಡಿರುವುದು ನಿಜ ಅದಕ್ಕೆ ಪೂರಖವಾದ ದಾಖಲೆಗಳು, ಸಾಕ್ಷಿಗಳು ನಮ್ಮ ಬಳಿ ಇವೆ ಎಂದರು.

Edited By

Shruthi G

Reported By

Madhu shree

Comments