ಮೋದಿಯವರು ರೈತರ ಬಗ್ಗೆ ಕನಿಕರ ಇಲ್ಲದವರಂತೆ ನಡೆದುಕೊಳ್ಳುತ್ತಿದ್ದಾರೆ : ಎಚ್ ಡಿಕೆ

30 Jan 2018 10:44 AM | Politics
374 Report

ಪ್ರಧಾನಿ ಮನಸ್ಸು ಮಾಡಿದರೆ ಅಂತಿಮ ತೀರ್ಪಿಗೆ ಒಳಪಟ್ಟು ನೀರು ಉಪಯೋಗಿಸಲು ಅನುಮತಿ ಕೊಡಬಹುದು. ಮಹದಾಯಿ ನದಿ ನೀರನ್ನು ಕರ್ನಾಟಕ ಬಳಸಲು ಅವಕಾಶ ಒದಗಿಸಿಕೊಡುವ ಕುರಿತು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು ಕೇಂದ್ರಕ್ಕೆ ಮನವರಿಕೆ ಮಾಡಿ ಕೊಟ್ಟಿದ್ದರೂ ಪ್ರಧಾನಿ ಮೋದಿಯವರು ರೈತರ ಬಗ್ಗೆ ಕನಿಕರ ಇಲ್ಲದವರಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಆರೋಪಿಸಿದರು.

ಮುದ್ದೇಬಿಹಾಳ ತಾಲೂಕಿನ ಹುಲ್ಲೂರ- ಬಸವನ ಬಾಗೇವಾಡಿ ತಾಲೂಕು ಜೀರಲ ಭಾವಿ ಮಾರ್ಗ ಮಧ್ಯೆ ಕರ್ನಾಟಕ ವಿಕಾಸ ವಾಹಿನಿ ಪ್ರಚಾರ ವಾಹನದಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. 2 ವರ್ಷದಿಂದ ನಮ್ಮ ರೈತರು ಕುಡಿಯಲು 7.56 ಟಿಎಂಸಿ ನೀರಿನ ಬೇಡಿಕೆ ಇಟ್ಟು ಕೊಂಡು ಮಹದಾಯಿಗಾಗಿ ಹೋರಾಟ ಮಾಡುತ್ತಿದ್ದಾರೆ. ಮಹದಾಯಿ ವಿಷಯದಲ್ಲಿ ತೀರ್ಮಾನ ಕೈಗೊಳ್ಳುವ ಅಧಿಕಾರ ಪ್ರಧಾನಿಗಿದೆ. ಅಂತಾ ರಾಜ್ಯ ನೀರಿನ ಹಂಚಿಕೆ ವಿಷಯದಲ್ಲಿ ಸಮಸ್ಯೆ ಬಂದಾಗೆಲ್ಲ ಆಗಿನ ಪ್ರಧಾನಿಗಳು ತಾತ್ಕಾಲಿಕ ಪರಿಹಾರ ನೀಡಿದ ಉದಾಹರಣೆಗಳಿವೆ. ಕಾವೇರಿ ನೀರಿನ ಹಂಚಿಕೆಯಲ್ಲಿ ಟ್ರಿಬ್ಯೂನಲ್‌ ಅಂತಿಮ ತೀರ್ಪು ಬರುವುದಕ್ಕೂ ಮೊದಲೇ ಆಗ ಪ್ರಧಾನಿಯಾಗಿದ್ದ ದೇವೇಗೌಡರು, ಅಂತಿಮ ತೀರ್ಪಿಗೆ ಒಳಪಟ್ಟಂತೆ ಇಂತಿಷ್ಟು ನೀರನ್ನು ಕುಡಿಯಲು ಉಪಯೋಗಿಸಬಹುದು ಎಂದು ಕರ್ನಾಟಕದ ಪರ ಆದೇಶ ಮಾಡಿದ್ದರು. ಅದೇ ಮಾದರಿಯಲ್ಲಿ ಪ್ರಧಾನಿ ಮೋದಿ ಕೂಡ ಆದೇಶ ಮಾಡಲು ಸಾಧ್ಯವಿದೆ.

ಆದರೆ ಇದರಲ್ಲಿ ರಾಜಕೀಯ ನಾಟಕ ನಡೆದಿದೆ ಎಂದರು. ರಾಜ್ಯದಲ್ಲಿ ಜೆಡಿಎಸ್‌ ಪೂರ್ಣ ಪ್ರಮಾಣದಲ್ಲಿ ಅಧಿಕಾರಕ್ಕೆ ಬಂದರೆ ಮಹದಾಯಿ ಸಮಸ್ಯೆಗೆ ಪರಿಹಾರ ದೊರಕುತ್ತದೆ. ಮಹದಾಯಿ ವಿಷಯದಲ್ಲಿ ಜೆಡಿಎಸ್‌ ಕೇಂದ್ರದೊಂದಿಗೆ ಕುಳಿತು ಚರ್ಚಿಸಲು ತೆರೆದ ಮನಸ್ಸು ಹೊಂದಿದೆ. ಏಕೆಂದರೆ ಜೆಡಿಎಸ್‌ ರಾಜ್ಯದಲ್ಲಿ ಸದೃಢವಾದಾಗ ನರೇಂದ್ರ ಮೋದಿ, ಸೋನಿಯಾಗಾಂಧಿ ಎಚ್ಚರಗೊಳ್ಳುತ್ತಾರೆ. ಕರ್ನಾಟಕದ ಜನರ ಭಾವನೆಗಳಿಗೆ ಸ್ಪಂದಿಸದಿದ್ದಲ್ಲಿ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದರು. ದೇವರಹಿಪ್ಪರಗಿ ಶಾಸಕ ಎ.ಎಸ್‌. ಪಾಟೀಲ ನಡಹಳ್ಳಿ, ಮಹಾದೇವಿ ಪಾಟೀಲ ನಡಹಳ್ಳಿ ಇದ್ದರು. ಪರಿವರ್ತನಾ ಯಾತ್ರೆ ಆರಂಭಿಸಿದಾಗ ಯಡಿಯೂರಪ್ಪ 2017ರ ಡಿ.15ರೊಳಗೆ ಮಹದಾಯಿ ನೀರು ತರ್ತೇನೆ ಅಂತ ಜನರಿಗೆ ಮಾತು ಕೊಟ್ಟರು. ಅಲ್ಲಿಂದ ಇಲ್ಲಿಯವರೆಗೆ ಬಿಜೆಪಿ, ಕಾಂಗ್ರೆಸ್‌ ಒಬ್ಬರ ವಿರುದ್ಧ ಮತ್ತೂಬ್ಬರು ಹೇಳಿಕೆ ಕೊಡುತ್ತಾ ರೈತರ ನಂಬಿಕೆ ಜೊತೆ ಚೆ‌ಲ್ಲಾಟ ಆಡುತ್ತಿದ್ದಾರೆ ಎಂದು ಟೀಕಿಸಿದರು.

Edited By

Shruthi G

Reported By

Madhu shree

Comments